ಬುಧವಾರ, ಜೂನ್ 16, 2021
22 °C

ಹಣದುಬ್ಬರ ಕಳವಳಕಾರಿ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಕೋವಿಡ್‌ ಪರಿಣಾಮಗಳಿಗೆ ಸಿಲುಕಿ ದೇಶದ ಆರ್ಥಿಕ ಬೆಳವಣಿಗೆಯು ಇನ್ನಷ್ಟು ಸಂಕುಚಿತಗೊಳ್ಳುವ ನಿರೀಕ್ಷೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಆಹಾರ ಮತ್ತು ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು ಏರುಮುಖವಾಗಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಪ್ರಮುಖ ಅಂಶಗಳನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬೇಡಿಕೆ ಕಡಿಮೆ ಆಗಿರುವುದರಿಂದ ತಯಾರಿಕಾ ಸಾಮರ್ಥ್ಯವೂ ತಗ್ಗಿದ್ದು, ಬಂಡವಾಳ ಹೂಡಿಕೆಯಲ್ಲಿ ಚೇತರಿಕೆ ಕಾಣುವುದು ತಡವಾಗಲಿದೆ’ ಎಂದು ಹೇಳಿದ್ದಾರೆ.

‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಯ ಚೇತರಿಕೆಗೆ ಹಣಕಾಸು ನೀತಿಯು ಬೆಂಬಲ ನೀಡುತ್ತಾ ಬಂದಿದೆ. ಸದ್ಯದ ಮಟ್ಟಿಗೆ ಬಡ್ಡಿದರ ಕಡಿತ ಮಾಡಲು ಅವಕಾಶ ಇದೆಯಾದರೂ, ವಿವೇಚನೆಯುತ ನಿರ್ಧಾರ ತೆಗೆದುಕೊಂದು ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ಮುನ್ನೋಟದ ಬಗ್ಗೆ ಒಂದು ಸ್ಥಿರ ಲೆಕ್ಕಾಚಾರದ ಅಗತ್ಯವಿದೆ. ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆತು, ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಬಗೆಹರಿದು, ಬೆಲೆಯಲ್ಲಿ ಸ್ಥಿರತೆ ಮೂಡಬೇಕಿದೆ’ ಎಂದು ಹೇಳಿದ್ದಾರೆ.

‘ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ನಕಾರಾತ್ಮಕ ಮಟ್ಟದಲ್ಲಿ ಇರುವ ಅಂದಾಜು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ 6.93ಕ್ಕೆ ಏರಿಕೆಯಾಗಿದೆ. ಜೂನ್‌ನಲ್ಲಿ ಇದು ಶೇ 6.23ರಷ್ಟಿತ್ತು. ಆಹಾರ ಹಣದುಬ್ಬರ ಶೇ 8.72ರಿಂದ ಶೇ 9.62ಕ್ಕೆ ಏರಿಕೆಯಾಗಿದೆ. ಸತತ ಎರಡನೇ ತಿಂಗಳಿನಲ್ಲಿಯೂ ಚಿಲ್ಲರೆ ಹಣದುಬ್ಬರವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ‘ಹಿತಕರ ಮಟ್ಟ’ಕ್ಕಿಂತಲೂ ಮೇಲಕ್ಕೆ ಜಿಗಿದಿದೆ. ಚಿಲ್ಲರೆ ಹಣದುಬ್ಬರವನ್ನು ಶೇ 4ಕ್ಕೆ (2 ಅಂಶ ಹೆಚ್ಚು ಅಥವಾ ಕಡಿಮೆ) ನಿಯಂತ್ರಿಸಬೇಕು ಎನ್ನುವುದು ಕೇಂದ್ರ ಸರ್ಕಾರವು ಆರ್‌ಬಿಐಗೆ ನೀಡಿರುವ ಸೂಚನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.