ಶನಿವಾರ, ಡಿಸೆಂಬರ್ 14, 2019
22 °C
ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ಹೇಳಿಕೆ

ಬ್ಯಾಂಕ್‌ಗಳ ಠೇವಣಿ ವಿಮೆ ಮಿತಿ ಹೆಚ್ಚಳ ಮಾಹಿತಿ ಇಲ್ಲ: ಡಿಐಸಿಜಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬ್ಯಾಂಕ್‌ ಠೇವಣಿಗಳ ವಿಮೆ ಮಿತಿಯನ್ನು ಸದ್ಯದ ₹ 1 ಲಕ್ಷದಿಂದ ಹೆಚ್ಚಿಸುವ ಬಗ್ಗೆ ತನ್ನಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (ಡಿಐಸಿಜಿಸಿ) ತಿಳಿಸಿದೆ.

‘ಬ್ಯಾಂಕ್‌ ಠೇವಣಿಗಳ ವಿಮೆ ರಕ್ಷಣೆಯ ಮಿತಿಯನ್ನು ₹ 1 ಲಕ್ಷದಿಂದ ಹೆಚ್ಚಿಸುವ ಸಂಬಂಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇತ್ತೀಚೆಗೆ ಹೇಳಿದ್ದರು.

ಈ ಹೇಳಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಯು ತನ್ನ ಬಳಿ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಗವಾಗಿರುವ ‘ಡಿಐಸಿಜಿಸಿ’ ತಿಳಿಸಿದೆ. ಬ್ಯಾಂಕ್‌ಗಳಲ್ಲಿನ ಎಲ್ಲ ಠೇವಣಿಗಳಿಗೆ ಇದು ವಿಮೆ ರಕ್ಷಣೆ ಒದಗಿಸುತ್ತದೆ.

ಅನೇಕ ಬ್ಯಾಂಕ್‌ಗಳು ಇತ್ತೀಚೆಗೆ ವಂಚನೆ, ಹಗರಣಗಳಿಗೆ ಗುರಿಯಾಗಿ ಸುದ್ದಿಯಾಗುತ್ತಿವೆ. ಇದರಿಂದ ಠೇವಣಿದಾರರಲ್ಲಿ ತಮ್ಮ ಉಳಿತಾಯದ ಹಣದ ಬಗ್ಗೆ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ನಿಗಮ ನೀಡಿರುವ ಈ ಮಾಹಿತಿಗೆ ಹೆಚ್ಚು ಮಹತ್ವ ಒದಗಿದೆ.

ನಷ್ಟದ ಸುಳಿಗೆ ಸಿಲುಕಿ ಬಾಗಿಲು ಹಾಕಿದ, ದಿವಾಳಿ ಎದ್ದ, ಲೈಸೆನ್ಸ್‌ ರದ್ದಾದ ಬ್ಯಾಂಕ್‌ಗಳಲ್ಲಿ ವ್ಯಕ್ತಿಗಳು ಇರಿಸಿದ ಠೇವಣಿ ಮೊತ್ತವು ₹ ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೂ ₹ 1 ಲಕ್ಷದವರೆಗೆ ಮಾತ್ರ ವಿಮೆ ದೊರೆಯಲಿದೆ.

ಈ ನಿಗಮದ ವ್ಯಾಪ್ತಿಯಲ್ಲಿ ಎಲ್ಲ ವಾಣಿಜ್ಯ ಬ್ಯಾಂಕ್‌ಗಳು, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಬರುತ್ತವೆ. ‘ಡಿಐಸಿಜಿಸಿ’ಯ ಸೆಕ್ಷನ್‌ 2 (ಜಿಜಿ) ಅಡಿ ಬರುವ ಅರ್ಹ ಸಹಕಾರಿ ಬ್ಯಾಂಕ್‌ಗಳೂ ಇದರ ವ್ಯಾಪ್ತಿಗೆ ಬರುತ್ತವೆ.

ಬ್ಯಾಂಕ್‌ ಠೇವಣಿ ವಿಮೆ ಮಿತಿ ಹೆಚ್ಚಿಸುವ ಪ್ರಸ್ತಾವದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೇಳಿದ ಪ್ರಶ್ನೆಗೆ ಈ ಮಾಹಿತಿ ಒದಗಿಸಲಾಗಿದೆ.

ಲಾಭಯೇತರ ಸಹಕಾರ ಭಾರತಿ ಸಂಸ್ಥೆಯು, ವ್ಯಕ್ತಿಗಳು ಬ್ಯಾಂಕ್‌ಗಳಲ್ಲಿ ಇರಿಸಿರುವ ಠೇವಣಿಗಳ ವಿಮೆ ಮಿತಿಯನ್ನು ₹ 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿತ್ತು. 

* ₹ 95,700 ಕೋಟಿ - ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಸರ್ಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆ ಮೊತ್ತ

* 5,743 - ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ನಡೆದಿರುವ ವಂಚನೆ ಪ್ರಕರಣಗಳ ಸಂಖ್ಯೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು