ಗುರುವಾರ , ಜೂನ್ 4, 2020
27 °C

ಕೊರೊನಾ ಲಾಕ್‌ಡೌನ್‌ ಪ್ರಭಾವ: ಧಾರ್ಮಿಕ ಉದ್ದಿಮೆಗಳಿಗೆ ಬೇಡಿಕೆ

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬಹುತೇಕ ಸಣ್ಣ ಉದ್ದಿಮೆಗಳು ನೆಲಕಚ್ಚಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಕೊರೊನಾ ಸೃಷ್ಟಿರುವ ಆತಂಕ ದಿಂದಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಉದ್ದಿಮೆಗಳು ಬೆಳವಣಿಗೆಯ ಉತ್ತುಂಗಕ್ಕೆ ತಲುಪಿವೆ ಎನ್ನುತ್ತಿದೆ ಇನ್‌ಸ್ಟಾಮೊಜೊ ಕಂಪನಿಯ ವರದಿ.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಡಿಜಿಟಲ್‌ ರೂಪದ ಪರಿಹಾರ ಒದಗಿಸುವ ಇನ್‌ಸ್ಟಾಮೊಜೊ ನಡೆಸಿ
ರುವ ಸಮೀಕ್ಷೆಯಿಂದ ಲಾಕ್‌ಡೌನ್‌ ಸಂದರ್ಭದಲ್ಲಿನ ಕೆಲವು ಆಸಕ್ತಿಕರ ಸಂಗತಿಗಳು ಬೆಳಕಿಗೆ ಬಂದಿವೆ.

‘ಕೊರೊನಾ ಸೃಷ್ಟಿಸಿರುವ ಆತಂಕವು ಜನರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರಿಂದಾಗಿ ಧಾರ್ಮಿಕ, ಅಧ್ಯಾತ್ಮದತ್ತ ಜನರು ಹೆಚ್ಚು ಗಮನ ನೀಡುತ್ತಿದ್ದಾರೆ. ಆರೋಗ್ಯದ ಕಾಳಜಿ ದೃಷ್ಟಿಯಿಂದ ಗುಣಮಟ್ಟದ ಆಹಾರಮತ್ತು ನೈರ್ಮಲ್ಯ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ದಿಮೆಗಳಿಗೆ ಹೆಚ್ಚು ಬೇಡಿಕೆ ಬರಲಾರಂಭಿಸಿದೆ. ಮುಖ್ಯವಾಗಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು, ಪೂಜೆಗೆ ಸಂಬಂಧಿಸಿದ ಸಿ.ಡಿ ಮತ್ತು ಇ–ಬುಕ್‌ಗಳ ಮಾರಾಟ ಹೆಚ್ಚಾಗುತ್ತಿದೆ. ಉದಾಹರಣೆ ಕೊಡುವುದಾದರೆ, ಇನ್‌ಸ್ಟಾಮೊಜೊದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಮಳಿಗೆಯೂ ಇದೆ. ಸದ್ಗುರು ಅವರ ಪ್ರವಚನಗಳು ಮತ್ತು ಇಶಾ ಮ್ಯೂಸಿಕ್‌ ಸಂಗ್ರಹಗಳಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಇನ್‌ಸ್ಟಾಮೊಜೊ ಸಹ ಸ್ಥಾಪಕ ಸಂಪದ್‌ ಸ್ವೈನ್‌ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ, ಡಿಜಿಟಲ್‌ ಮೂಲಕ ನಡೆಯುವ ವಹಿವಾಟಿನ ಪ್ರಮಾಣವೇ ಹೆಚ್ಚಿದೆ. ಕೊರೊನಾ ವಾರಿಯರ್ಸ್‌ಗೆ ನೆರವಾಗುವ ಉದ್ದೇಶದಿಂದ ಲಾಭಯೇತರ ಸಂಘಸಂಸ್ಥೆಗಳಿಗೆ ಡಿಜಿಟಲ್‌ ರೂಪದಲ್ಲಿ ಹಣ ವರ್ಗಾವಣೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ. 

ಸಣ್ಣ ಉದ್ದಿಮೆಗಳಲ್ಲಿ ಡಿಜಿಟಲ್‌ ಕ್ರಾಂತಿ: ಈ ಲಾಕ್‌ಡೌನ್‌ ಅವಧಿಯು ಎಂಎಸ್‌ಎಂಇಗಳಿಗೆ ಡಿಜಿಟಲ್‌ ವಹಿವಾಟಿನ ಮಹತ್ವವನ್ನು ತಿಳಿಸುವಂತೆ ಮಾಡಿದೆ. ಹೀಗಾಗಿ ಪಾವತಿ ಆಯ್ಕೆಗಳಷ್ಟೇ ಅಲ್ಲದೆ ಡಿಜಿಟಲ್‌ ಮಳಿಗೆಗಳ ಸ್ಥಾಪನೆಗೂ ಇನ್‌ಸ್ಟಾಮೊಜೊ ನೆರವಾಗುತ್ತಿದೆ. 

ವರದಿಗಳ ಪ್ರಕಾರ, ನಿತ್ಯವೂ ಅಸಂಖ್ಯ ಭಾರತೀಯರು ಆನ್‌ಲೈನ್‌ ಬಳಕೆ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಅಂದಾಜು 20 ಲಕ್ಷ ವರ್ತಕರು ಆನ್‌ಲೈನ್‌ ವಹಿವಾಟಿಗೆ ತೆರೆದುಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ತೆರವಾದ ಬಳಿಕ ಸಣ್ಣ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ ಮೂಲಕ ವಹಿವಾಟು ಆರಂಭಿಸುವುದರಿಂದ ಈ ವಲಯದಲ್ಲಿ ಹೊಸ ಡಿಜಿಟಲ್‌ ಕ್ರಾಂತಿಗೆ ಕಾರಣವಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು