ಚಿಲ್ಲರೆ ಹಣದುಬ್ಬರ ಹೆಚ್ಚಳ

ಬುಧವಾರ, ಮಾರ್ಚ್ 27, 2019
26 °C
ಆಹಾರ ಪದಾರ್ಥಗಳು ದುಬಾರಿ: ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಸಿಪಿಐ

ಚಿಲ್ಲರೆ ಹಣದುಬ್ಬರ ಹೆಚ್ಚಳ

Published:
Updated:

ನವದೆಹಲಿ: ಆಹಾರ ಪದಾರ್ಥಗಳ ದುಬಾರಿ ಬೆಲೆಯ ಕಾರಣಕ್ಕೆ ಚಿಲ್ಲರೆ ಹಣದುಬ್ಬರವು ಫೆಬ್ರುವರಿ ತಿಂಗಳಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 2.57ಕ್ಕೆ ಏರಿಕೆಯಾಗಿದೆ.

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಜನವರಿ ತಿಂಗಳ ಚಿಲ್ಲರೆ ಹಣದುಬ್ಬರವನ್ನು ಶೇ 1.97ರಷ್ಟಕ್ಕೆ ಪರಿಷ್ಕರಿಸಲಾಗಿದೆ. ಇದಕ್ಕೂ ಮೊದಲಿನ ಅಂದಾಜವು ಶೇ 2.05ರಷ್ಟಿತ್ತು. 2018ರ ಅಕ್ಟೋಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ 3.38ರಷ್ಟಿತ್ತು. ಅದಕ್ಕೆ ಹೋಲಿಸಿದರೆ, ಫೆಬ್ರುವರಿ ತಿಂಗಳ ಬೆಲೆ ಏರಿಕೆ ಪ್ರಮಾಣವು ಗರಿಷ್ಠ ಮಟ್ಟದಲ್ಲಿ ಇರುವುದು ಕೇಂದ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ದೃಢಪಡುತ್ತದೆ.

ಪ್ರೋಟಿನ್‌ ಅಂಶ ಹೆಚ್ಚಿಗೆ ಇರುವ ಮಾಂಸ ಮತ್ತು ಮೊಟ್ಟೆಗಳ ದರ ಕ್ರಮವಾಗಿ ಶೇ 5.92 ಮತ್ತು ಶೇ 0.86ರಷ್ಟು ಏರಿಕೆಯಾಗಿದೆ. ಅದೇ ರೀತಿಯಲ್ಲಿ ಬೇಳೆಗಳ ಬೆಲೆಯೂ (ಶೇ 1.32) ದುಬಾರಿಯಾಗಿದೆ.

ಹಣ್ಣು ಮತ್ತು ತರಕಾರಿಗಳ ಬೆಲೆ ಕಡಿಮೆಯಾಗಿದೆ. ಆಹಾರ ಹಣದುಬ್ಬರವು ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಶೇ 3.26ಕ್ಕೆ ಹೋಲಿಸಿದರೆ ಶೇ (–) 0.66 ರಷ್ಟು ಕಡಿಮೆಯಾಗಿದೆ. ಆಗ ಚಿಲ್ಲರೆ ಹಣದುಬ್ಬರ ಶೇ 4.44ರಷ್ಟು ದಾಖಲಾಗಿತ್ತು.

ಬಡ್ಡಿ ದರದ ಮೇಲೆ ಪ್ರಭಾವ: ‘ಹಣದುಬ್ಬರ ಏರಿಕೆ ಮತ್ತು ಕೈಗಾರಿಕಾ ಉತ್ಪಾದನೆ ಕುಸಿತವು ಭಾರತೀಯ ರಿಸರ್ವ್‌ ಬ್ಯಾಂಕ್‌  ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಲು ಉತ್ತೇಜನ ನೀಡಲಿದೆ’ ಎಂದು ನಿರೀಕ್ಷಿಸಲಾಗಿದೆ.

‘ಏಪ್ರಿಲ್‌ ತಿಂಗಳಲ್ಲಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಆರ್‌ಬಿಎಲ್‌ ಬ್ಯಾಂಕ್‌ನ ಆರ್ಥಿಕ ತಜ್ಞೆ ರಜನಿ ಠಾಕೂರ್‌ ಅಂದಾಜಿಸಿದ್ದಾರೆ.

‘ತರಕಾರಿ ಹೊರತುಪಡಿಸಿ ಇತರ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಸರಣಿಯೋಪಾದಿಯಲ್ಲಿ ಏರಿಕೆ ಕಂಡು ಬಂದಿದೆ. ಇದೊಂದು ನಿರೀಕ್ಷಿತ ಬೆಳವಣಿಗೆಯಾಗಿದೆ’ ಎಂದು ಐಸಿಐಸಿಐ ಬ್ಯಾಂಕ್‌ನ ಗ್ಲೋಬಲ್‌ ಮಾರುಕಟ್ಟೆ ಸಮೂಹದ ಮುಖ್ಯಸ್ಥ ಬಿ. ಪ್ರಸನ್ನ ವಿಶ್ಲೇಷಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !