ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ 11 ತಿಂಗಳ ಕನಿಷ್ಠ

ತಗ್ಗಿದ ಆಹಾರ ವಸ್ತುಗಳ ಬೆಲೆ: ಗರಿಷ್ಠ ಮಟ್ಟದಿಂದ ಇಳಿದ ಹಣದುಬ್ಬರ
Last Updated 12 ಡಿಸೆಂಬರ್ 2022, 16:28 IST
ಅಕ್ಷರ ಗಾತ್ರ

ನವದೆಹಲಿ: ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ 11 ತಿಂಗಳ ಕನಿಷ್ಠ ಮಟ್ಟವಾದ ಶೇ 5.88ಕ್ಕೆ ಇಳಿಕೆ ಕಂಡಿದೆ. ಆಹಾರ ವಸ್ತುಗಳ ದರ ಇಳಿಕೆ ಆಗಿರುವುದೇ ಇದಕ್ಕೆ ಕಾರಣ.

11 ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚಿಲ್ಲರೆ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹಾಕಿಕೊಂಡಿರುವ ಗರಿಷ್ಠ ಮಿತಿಯಾದ ಶೇ 6ಕ್ಕಿಂತಲೂ ಕೆಳಕ್ಕೆ ಇಳಿಕೆ ಕಂಡಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೆರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಗ್ರಾಹಕರ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಸತತ ಎರಡನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ ಶೇ 6.77ರಷ್ಟು ಇತ್ತು.

2021ರ ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.91ರಷ್ಟು ಇತ್ತು.

ಆಹಾರ ಉತ್ಪನ್ನಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ7.01ರಷ್ಟು ಇದ್ದಿದ್ದು ನವೆಂಬರ್‌ನಲ್ಲಿ ಶೇ4.67ಕ್ಕೆ ಇಳಿಕೆ ಆಗಿದೆ.

ಚಿಲ್ಲರೆ ಹಣದುಬ್ಬರವು ಜನವರಿ–ಮಾರ್ಚ್‌ ಅವಧಿಯಲ್ಲಿ ಶೇ 6ಕ್ಕಿಂತಲೂ ಕೆಳಗೆ ಬರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ.

‘ಹಣದುಬ್ಬರ ಪ್ರಮಾಣವು ಕಡಿಮೆ ಯಾಗುವ ನಿರೀಕ್ಷೆ ಇದೆ. ಆದರೆ, ಹಣದುಬ್ಬರದ ಮೇಲಿನ ಸಮರಕೊನೆ ಗೊಂಡಿಲ್ಲ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಕಳೆದ ವಾರ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಹೇಳಿದ್ದರು.

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಕಳೆದ ವಾರ ರೆಪೊ ದರವನ್ನು ಶೇ 0.35ರಷ್ಟು ಹೆಚ್ಚಳ ಮಾಡಿದೆ. 2022ರ ಮೇ ತಿಂಗಳಿನಿಂದ ಈವರೆಗೆ ರೆಪೊ ದರವನ್ನು ಒಟ್ಟು ಶೇ 2.25ರಷ್ಟು ಏರಿಕೆ ಮಾಡಲಾಗಿದೆ.

ಚಿಲ್ಲರೆ ಹಣದುಬ್ಬರವು ಅನಿರೀಕ್ಷಿತವಾಗಿ ನವೆಂಬರ್‌ನಲ್ಲಿ ಶೇ 6ಕ್ಕಿಂತಲೂ ಕೆಳಕ್ಕೆ ಇಳಿಕೆ ಕಂಡಿದೆ. ಆಹಾರ ಹಣದುಬ್ಬರ ಮತ್ತು ತರಕಾರಿಗಳ ಬೆಲೆಯು ಇಳಿಕೆ ಆಗುತ್ತಿರುವುದನ್ನು ಇದು ಸೂಚಿಸುತ್ತಿದೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT