ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ದುಬಾರಿ, ಜಿಗಿದ ಹಣದುಬ್ಬರ: ಮತ್ತೆ ಮಿತಿ ಮೀರಿದ ಬೆಲೆ ಏರಿಕೆ ಪ್ರಮಾಣ

Published 14 ಆಗಸ್ಟ್ 2023, 19:30 IST
Last Updated 14 ಆಗಸ್ಟ್ 2023, 23:33 IST
ಅಕ್ಷರ ಗಾತ್ರ

ನವದೆಹಲಿ: ಚಿಲ್ಲರೆ ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಶೇಕಡ 7.44ಕ್ಕೆ ಜಿಗಿದಿದೆ. ಇದು 15 ತಿಂಗಳ ಗರಿಷ್ಠ ಮಟ್ಟ. ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆಯಲ್ಲಿ ಆದ ಏರಿಕೆಯು ಚಿಲ್ಲರೆ ಹಣದುಬ್ಬರ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿದೆ.

ತರಕಾರಿ ಮಾತ್ರವೇ ಅಲ್ಲದೆ, ಧಾನ್ಯ ಸೇರಿದಂತೆ ಇತರ ಕೆಲವು ಆಹಾರ ವಸ್ತುಗಳ ಬೆಲೆಯಲ್ಲಿಯೂ ತೀವ್ರ ಹೆಚ್ಚಳ ಕಂಡುಬಂದಿದೆ. ಜುಲೈನಲ್ಲಿ ದಾಖಲಾಗಿರುವ ಹಣದುಬ್ಬರ ದರವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟಕ್ಕಿಂತ (ಶೇ 6) ಹೆಚ್ಚು. ಈ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 6ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು.

ಗ್ರಾಮೀಣ ಪ್ರದೇಶಗಳಲ್ಲಿ ಶೇ 7.63ರಷ್ಟು, ನಗರ ಪ್ರದೇಶಗಳಲ್ಲಿ ಶೇ 7.2ರಷ್ಟು ಚಿಲ್ಲರೆ ಹಣದುಬ್ಬರ ದಾಖಲಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ದೇಶದ 1,114 ನಗರ ಮಾರುಕಟ್ಟೆಗಳಿಂದ, 1,181 ಗ್ರಾಮೀಣ ಮಾರುಕಟ್ಟೆಗಳಿಂದ ಮಾಹಿತಿ ಕಲೆಹಾಕಿ, ಹಣದುಬ್ಬರದ ಪ್ರಮಾಣವನ್ನು ನಿರ್ಧಿರಿಸುತ್ತದೆ.

ಚಿಲ್ಲರೆ ಹಣದುಬ್ಬರ ದರವನ್ನು ಶೇ 6ಕ್ಕಿಂತ ಕಡಿಮೆ ಮಟ್ಟದಲ್ಲಿ ನಿಯಂತ್ರಿಸುವ ಹೊಣೆ ಆರ್‌ಬಿಐ ಮೇಲಿದೆ. 2022–23ನೆಯ ಹಣಕಾಸು ವರ್ಷದ ಬಹುತೇಕ ತಿಂಗಳುಗಳಲ್ಲಿ ಇದು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜೂನ್‌ ತಿಂಗಳವರೆಗೆ ಹಣದುಬ್ಬರ ದರವು ಶೇ 6ಕ್ಕಿಂತ ಕಡಿಮೆ ಆಗಿತ್ತು.

ಜೂನ್‌ ತಿಂಗಳಲ್ಲಿ ಹಣದುಬ್ಬರ ಶೇ 4.87ರಷ್ಟು ಇತ್ತು. 2022ರ ಏಪ್ರಿಲ್‌ನಲ್ಲಿ ಶೇ 7.79ರಷ್ಟು ಹಣದುಬ್ಬರ ದಾಖಲಾಗಿತ್ತು. ಅದಾದ ನಂತರದ ಗರಿಷ್ಠ ಪ್ರಮಾಣ ಈ ವರ್ಷದ ಜುಲೈನಲ್ಲಿ ದಾಖಲಾಗಿದೆ.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇ 11.51ರಷ್ಟು ಆಗಿದೆ. ಇದು ಜೂನ್‌ನಲ್ಲಿ ಶೇ 4.55ರಷ್ಟು ಮಾತ್ರ ಇತ್ತು ಎಂದು ಎನ್‌ಎಸ್‌ಒ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ಎಚ್ಚರಿಸಿದ್ದ ಆರ್‌ಬಿಐ: ಈಚೆಗೆ ನಡೆದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಅಲ್ಲದೆ, ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕಕ್ಕೆ ಹಣದುಬ್ಬರದ ಅಂದಾಜನ್ನು ಆರ್‌ಬಿಐ ಶೇ 6.2ಕ್ಕೆ ಹೆಚ್ಚು ಮಾಡಿತ್ತು.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಹೆಚ್ಚುತ್ತ ಸಾಗಿದರೆ ಇನ್ನಷ್ಟು ಬಿಗಿ ಹಣಕಾಸು ನಿಲುವನ್ನು ತೆಗೆದುಕೊಳ್ಳುವ ಸೂಚನೆಯನ್ನು ಆರ್‌ಬಿಐ ನೀಡಿದೆ.

ಜುಲೈ ತಿಂಗಳ ಹಣದುಬ್ಬರ ಪ್ರಮಾಣವನ್ನು ಗಮನಿಸಿದರೆ, ಎರಡನೆಯ ತ್ರೈಮಾಸಿಕದಲ್ಲಿ ಹಣದುಬ್ಬರ ದರವು ಆರ್‌ಬಿಐ ಅಂದಾಜಿಸಿರುವ ಮಟ್ಟಕ್ಕಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ತರಕಾರಿಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಮುಂದಿನ ಬೆಳೆ ಬರುವವರೆಗೆ ಕಡಿಮೆ ಆಗಲಿಕ್ಕಿಲ್ಲ. ಆಗಸ್ಟ್‌ನಲ್ಲಿ ಇದುವರೆಗೆ ಮಳೆ ವಾಡಿಕೆಯಂತೆ ಆಗಿಲ್ಲ. ಇದು ಕೂಡ ಆಹಾರ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.
–ಅದಿತಿ ನಾಯರ್,ಮುಖ್ಯ ಅರ್ಥಶಾಸ್ತ್ರಜ್ಞೆ, ಐಸಿಆರ್‌ಎ
ಈ ಹಣದುಬ್ಬರ ದರವು ಒಮ್ಮತದ ಅಂದಾಜು ಮಟ್ಟಕ್ಕಿಂತ ಹೆಚ್ಚು. ಆರ್‌ಬಿಐ, ರೆಪೊ ದರವನ್ನು ಇನ್ನೂ ಹೆಚ್ಚಿನ ಅವಧಿಗೆ ಯಥಾಸ್ಥಿತಿಯಲ್ಲಿ ಇರಿಸಬಹುದು. ಮುಂದಿನ ದಿನಗಳಲ್ಲಿ ನಗದು ಲಭ್ಯತೆಯನ್ನು ಕಡಿಮೆ ಮಾಡುವ ಪ್ರಕ್ರಿಯೆಗೆ ವೇಗ ನೀಡುವ ಸಾಧ್ಯತೆ ಇದೆ.
–ಸಾಕ್ಷಿ ಗುಪ್ತ, ಪ್ರಧಾನ ಅರ್ಥಶಾಸ್ತ್ರಜ್ಞೆ, ಎಚ್‌ಡಿಎಫ್‌ಸಿ ಬ್ಯಾಂಕ್
ರೆಪೊ ದರದಲ್ಲಿ ಇನ್ನೂ ಶೇ 0.25ರಷ್ಟು ಹೆಚ್ಚಳವು ಒಂದು ದೂರದ ಸಾಧ್ಯತೆಯಾಗಿ ಕಾಣುತ್ತಿದೆ. ಅಲ್ಲದೆ, ಮುಂದಿನ 12 ತಿಂಗಳವರೆಗೆ ರೆಪೊ ದರ ಇಳಿಕೆಯ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು. ಹಣದುಬ್ಬರ ಏರಿಕೆಯು ಬಾಂಡ್ ಹಾಗೂ ಈಕ್ವಿಟಿ ಮಾರುಕಟ್ಟೆಗಳ ಮೇಲೆ ಕೆಟ್ಟ ಪರಿಣಾಮ ಬೀರುವ ನಿರೀಕ್ಷೆ ಇದೆ. –
–ಸುಜನ್ ಹಜ್ರಾ, ಮುಖ್ಯ ಅರ್ಥಶಾಸ್ತ್ರಜ್ಞ, ಆನಂದ್ ರಾಠಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT