ನವದೆಹಲಿ: ‘ಅಟಲ್ ಪಿಂಚಣಿ ಯೋಜನೆಯನ್ನು ಏಳು ಕೋಟಿ ಜನ ಆಯ್ಕೆ ಮಾಡಿಕೊಂಡಿದ್ದು, ಇದರಿಂದಾಗಿ ಕಾರ್ಪಸ್ ಫಂಡ್ ₹35,149 ಕೊಟಿಗೆ ಏರಿಕೆಯಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
ಎನ್‌ಪಿಎಸ್ ವಾತ್ಸಲ್ಯ ಯೋಜನೆ ಜಾರಿ ಸಂದರ್ಭದಲ್ಲಿ ಮಾತನಾಡಿದ ಅವರು, ‘ಅತ್ಯಂತ ಕಡಿಮೆ ಬೆಲೆಯ ಪಿಂಚಣಿ ಯೋಜನೆಯಾದ ಇದನ್ನು ಆಯ್ಕೆ ಮಾಡಿಕೊಂಡವರಿಗೆ, ಅವರು ಹೂಡುವ ಹಣಕ್ಕೆ ತಕ್ಕಂತೆ 60 ವರ್ಷ ಪೂರೈಸಿದ ನಂತರ ಮಾಸಿಕ ₹1ಸಾವಿರದಿಂದ ₹5ಸಾವಿರದವರೆಗೂ ಪಿಂಚಣಿ ಸಿಗಲಿದೆ. ಒಂದೊಮ್ಮೆ ಯೋಜನೆ ಹೊಂದಿದ್ದವರು ಮೃತರಾದರೆ, ಅದೇ ಪಿಂಚಣಿಯು ಅವರ ಸಂಗಾತಿ ಬದುಕಿರುವವರೆಗೂ ಸಿಗಲಿದೆ. ಒಂದೊಮ್ಮೆ ಇಬ್ಬರೂ ಮೃತಪಟ್ಟರೆ, ಅವರು ಕೂಡಿಟ್ಟ ಅಷ್ಟೂ ಹಣ ನಾಮನಿರ್ದೇಶಿತರಿಗೆ ಸಿಗಲಿದೆ’ ಎಂದು ವಿವರಿಸಿದರು.
‘2015ರಲ್ಲಿ ಅಟಲ್ ಪಿಂಚಣಿ ಯೋಜನೆ ಜಾರಿಗೆ ಬಂದ ನಂತರ 6.9 ಕೋಟಿ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಹೂಡಿದ ಹಣ ಈವರೆಗೂ ₹35,149 ಕೋಟಿ ಆಗಿದೆ’ ಎಂದರು.