ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ ಇಂಟರ‍್ಯಾಕ್ಟಿವ್‌ ಡಿಸ್‌ಪ್ಲೆ

Last Updated 18 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಅದೊಂದು ವಿಶಿಷ್ಟ ಪರದೆ. ಅದರ ಬಣ್ಣವನ್ನು ನಮಗಿಷ್ಟದಂತೆ ಬದಲಿಸಬಹುದು. ಬರೆಯಲು ಪೆನ್‌ ಬೇಕಾಗಿಲ್ಲ. ಮುಂಗೈನಿಂದಲೇ ಪರದೆ ಮೇಲೆ ಬರೆದ ಮಾಹಿತಿ ಅಳಿಸಬಹುದು. 20 ಪುಟಗಳವರೆಗೆ ಮಾಹಿತಿ ವಿವರಣೆಯನ್ನು ವಿಸ್ತರಿಸಲೂಬಹುದು. ಮಾಹಿತಿ ಶೋಧದ ಸೌಲಭ್ಯದಿಂದ ನಿರ್ದಿಷ್ಟ ವಿಷಯವು ಪರದೆ ಮೇಲೆ ಮೂಡುವಂತೆ ಮಾಡಬಹುದು. ಲ್ಯಾಪಟಾಪ್‌, ಮೊಬೈಲ್‌ನಲ್ಲಿನ ಮಾಹಿತಿಯನ್ನು ವೈರ್‌ಲೆಸ್‌ ಮೂಲಕವೇ ಪರದೆ ಮೇಲೆ ಮೂಡಿಸಬಹುದು. ಅಷ್ಟೇ ಅಲ್ಲ ಪರದೆ ಮೂಲಕವೇ ಮೊಬೈಲ್‌ ಕರೆಗಳನ್ನೂ ಮಾಡಬಹುದು.

ವಿದ್ಯುನ್ಮಾನ ಸಲಕರಣೆಗಳ ದೇಶದ ಅತಿದೊಡ್ಡ ಬ್ರ್ಯಾಂಡ್‌ ಆಗಿರುವ ಸ್ಯಾಮ್ಸಂಗ್‌ ಇಂಡಿಯಾ, ಪರಸ್ಪರ ಸಂವಹನದ ಡಿಜಿಟಲ್‌ ಡಿಸ್‌ಪ್ಲೆ ಸಾಧನ ‘ಸ್ಯಾಮ್ಸಂಗ್‌ ಇಂಟರ‍್ಯಾಕ್ಟಿವ್‌ ಡಿಸ್‌ಪ್ಲೆ ‘ಫ್ಲಿಪ್‌’ ಪರಿಚಯಿಸಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಉತ್ಪನ್ನ ಪರಿಚಯಿಸಲಾಗಿದೆ. ಪೇಂಟಿಂಗ್, ಉತ್ಪನ್ನದ ವಿನ್ಯಾಸ ರೂಪಿಸುವಂತ ಕಲಾತ್ಮಕ, ಸೃಜನಾತ್ಮಕ ಕೆಲಸಕ್ಕೂ ಇದನ್ನು ಬಳಸಬಹುದು. ಕಾರ್ಪೊರೇಟ್‌ ಸಂಸ್ಥೆಗಳ ಉನ್ನತ ಮಟ್ಟದ ಸಿಬ್ಬಂದಿಗೆ ಉತ್ಪನ್ನ, ವಿನ್ಯಾಸ, ಮಾರುಕಟ್ಟೆ ಮತ್ತಿತರ ವಿಷಯಗಳ ಬಗ್ಗೆ ಸಚಿತ್ರ ಮಾಹಿತಿ ನೀಡಲು ಅಗತ್ಯವಾದ ಡಿಜಿಟಲ್‌ ಪರದೆಯ ಅಗತ್ಯವನ್ನು ಈ ಉತ್ಪನ್ನ ಪೂರೈಸಲಿದೆ. ಪುಟ್ಟ ಕೋಣೆಯಲ್ಲಿನ ಸೀಮಿತ ಸ್ಥಳಾವಕಾಶದಲ್ಲಿಯೇ ಸಚಿತ್ರ ಮಾಹಿತಿಯನ್ನು ಸಮಗ್ರವಾಗಿ ನೀಡಲು ಇದು ನೆರವಾಗುತ್ತದೆ.

ಸಭೆಯ ಅಗತ್ಯಕ್ಕೆ ತಕ್ಕಂತೆ ಇದನ್ನು ವಿಭಿನ್ನ ರೂಪದಲ್ಲಿ ಬಳಸಬಹುದು. ನಾಲ್ವರು ಏಕಕಾಲದಲ್ಲಿಯೇ ಇಲ್ಲಿ ಮಾಹಿತಿ ಪ್ರದರ್ಶಿಸಬಹುದು. ಪ್ರತಿಯೊಬ್ಬರೂ ತಮಗಿಷ್ಟದ ಶೈಲಿ, ಬಣ್ಣ ಮತ್ತು ಗಾತ್ರದಲ್ಲಿ ವಿಷಯ ಮಂಡಿಸಬಹುದು. ಫ್ಲಿಪ್‌ ಪರದೆ ಮೇಲೆ ವಿವರಿಸಿದ ಮಾಹಿತಿಯನ್ನು ಅರ್ಹ ಬಳಕೆದಾರರಿಗಷ್ಟೇ ಮಾತ್ರ ಸಿಗುವಂತೆ ಮಾಡುವ ನಿರ್ಬಂಧಿತ ಸೌಲಭ್ಯವೂ ಇಲ್ಲಿದೆ. ಇಲ್ಲಿ ಹಂಚಿಕೊಂಡ ಮಾಹಿತಿಯನ್ನು ಇ–ಮೇಲ್‌ಗೆ ರವಾನಿಸಬಹುದು. ಮುದ್ರಣ ಪ್ರತಿಯನ್ನೂ ಪಡೆದುಕೊಳ್ಳಬಹುದು.

‘ಇದೊಂದು ಬಳಕೆದಾರ ಸ್ನೇಹಿಯಾಗಿದೆ. ಕಚೇರಿ, ಉದ್ದಿಮೆ ಸಂಸ್ಥೆಗಳು, ವೃತ್ತಿನಿರತರು ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಇದನ್ನು ಬಳಸಬಹುದು’ ಎಂದು ಸ್ಯಾಮ್ಸಂಗ್‌ನ ಕಂಸುಮರ್‌ ಎಲೆಕ್ಟ್ರಾನಿಕ್ಸ್‌ ಎಂಟರ್‌ಪ್ರೈಸ್‌ ಬಿಸಿನೆಸ್‌ನ ಉಪಾಧ್ಯಕ್ಷ ಪುನೀತ್‌ ಸೇಠಿ ಹೇಳುತ್ತಾರೆ.

‘ಸಿನಿಮಾ ಮಂದಿರಗಳಲ್ಲಿ ಪ್ರೊಜೆಕ್ಟರ್‌ ಬಳಸದ ‘ಆನ್‌ಎಕ್ಸ್ ತಂತ್ರಜ್ಞಾನ’ವನ್ನೂ (ಹೈ ಡೈನೆಮಿಕ್‌ ರೇಂಜ್‌– ಎಚ್‌ಡಿಆರ್‌) ಸ್ಯಾಮ್ಸಂಗ್ ಪರಿಚಯಿಸಿದೆ. ದೆಹಲಿಯ ಪಿವಿಆರ್‌ ಸಿನಿಮಾದಲ್ಲಿ ಬಳಕೆಗೆ ಬಂದಿರುವ ಈ ಸೌಲಭ್ಯ ಶೀಘ್ರದಲ್ಲಿಯೇ ಬೆಂಗಳೂರಿಗೂ ಕಾಲಿಡಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT