ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಎಂಸಿಎಲ್‌ಆರ್ ಆಧಾರಿತ ಕಿರು ಅವಧಿಯ ಸಾಲದ ಮೇಲಿನ ಬಡ್ಡಿ ದರವನ್ನು ಬುಧವಾರ ಶೇಕಡ 0.10ರಷ್ಟು ಹೆಚ್ಚಿಸಿದೆ. ಇದು ತಕ್ಷಣದಿಂದ ಜಾರಿಗೆ ಬಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2022ರ ಮೇ ತಿಂಗಳ ನಂತರದಲ್ಲಿ ರೆಪೊ ದರವನ್ನು ಶೇ 2.50ರಷ್ಟು ಹೆಚ್ಚಿಸಿದೆ. ಈ ಹೆಚ್ಚಳವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಬಹುತೇಕ ವರ್ಗಾವಣೆ ಮಾಡಿವೆ. ಆದರೆ ಬ್ಯಾಂಕ್‌ಗಳು ಇದಕ್ಕೆ ಅನುಗುಣವಾಗಿ ತಮ್ಮ ಠೇವಣಿಗಳ ಮೇಲಿನ ಬಡ್ಡಿಯನ್ನು ಹೆಚ್ಚು ಮಾಡಿಲ್ಲ.
ಇದರ ಪರಿಣಾಮವಾಗಿ ಬ್ಯಾಂಕ್‌ಗಳಿಗೆ ಬಂಡವಾಳದ ಕೊರತೆ ಎದುರಾಗಿದೆ. ಕೆಲವು ಬ್ಯಾಂಕ್‌ಗಳು ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸುತ್ತಿವೆ. ಜನವರಿ 13ಕ್ಕೆ ಕೊನೆಗೊಂಡ ಹದಿನೈದು ದಿನಗಳ ಅವಧಿಯಲ್ಲಿ ದೇಶದಲ್ಲಿ ಸಾಲ ನೀಡಿಕೆಯ ಬೆಳವಣಿಗೆ ಪ್ರಮಾಣವು ಶೇ 16.5ರಷ್ಟು ಹಾಗೂ ಠೇವಣಿಗಳ ಬೆಳವಣಿಗೆ ಪ್ರಮಾಣವು ಶೇ 10.6ರಷ್ಟು ಇತ್ತು.
ಬುಧವಾರದ ಬಡ್ಡಿ ದರ ಏರಿಕೆಯು ಗೃಹಸಾಲ ಹಾಗೂ ವಾಹನ ಸಾಲದ ಗ್ರಾಹಕರಿಗೆ ಅನ್ವಯವಾಗದು. ಏಕೆಂದರೆ ಈ ಸಾಲಗಳನ್ನು ದೀರ್ಘಾವಧಿಗೆ ನೀಡಲಾಗಿರುತ್ತದೆ.
ಆರು ತಿಂಗಳ ಅವಧಿಯ ಸಾಲಕ್ಕೆ ಎಸ್‌ಬಿಐ ಇನ್ನು ಮುಂದೆ ಶೇ 8.40ರಷ್ಟು ಬಡ್ಡಿ ವಿಧಿಸಲಿದೆ. ಎರಡು ವರ್ಷ ಅವಧಿಯ ಸಾಲಕ್ಕೆ ಶೇ 8.60ರಷ್ಟು ಹಾಗೂ ಮೂರು ವರ್ಷದ ಅವಧಿಯ ಸಾಲಕ್ಕೆ ಶೇ 8.70ರಷ್ಟು ಬಡ್ಡಿ ಇರಲಿದೆ. ಆದರೆ, ₹ 10 ಕೋಟಿಗಿಂತ ಕಡಿಮೆ ಅವಧಿಯ ಉಳಿತಾಯ ಖಾತೆ ಠೇವಣಿಗೆ ಬ್ಯಾಂಕ್ ನೀಡುತ್ತಿರುವ ಬಡ್ಡಿ ಶೇ 2.70ರಷ್ಟು ಮಾತ್ರ. ₹ 10 ಕೋಟಿಗಿಂತ ಹೆಚ್ಚಿನ ಮೊತ್ತದ ಉಳಿತಾಯ ಖಾತೆ ಠೇವಣಿಗೆಗಳಿಗೆ ಬ್ಯಾಂಕ್ ಶೇ 3ರಷ್ಟು ಬಡ್ಡಿ ನೀಡುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.