ಮಂಗಳವಾರ, ಜೂನ್ 2, 2020
27 °C

ಎಸ್‌ಬಿಐ ಬ್ಯಾಂಕ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದರೆ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

SBI

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹೊತ್ತಿನಲ್ಲಿಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯವೆಸಗುತ್ತಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಪೋಸ್ಟ್ ಹಾಕಬಾರದು ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ.

ಬ್ಯಾಂಕ್ ಕಾರ್ಯಗಳ ವಿರುದ್ಧ, ಅದರ ನಿರ್ವಹಣೆ ಮತ್ತು ನೀತಿಗಳ ವಿರುದ್ಧ ಬ್ಯಾಂಕ್ ನೌಕರರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಎಲ್ಲ ವಲಯದ ಮುಖ್ಯ ವ್ಯವಸ್ಥಾಪಕರಿಗೆ ಪತ್ರ ಬರೆದಿದೆ.

ಕೋವಿಡ್-19 ಲಾಕ್‌ಡೌನ್ ಹೊತ್ತಲ್ಲಿ ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳು ಕಾರ್ಯವೆಸಗುತ್ತಿರುವನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿರುವುದನ್ನು ನಾವು ನೋಡಿದ್ದೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ಯಾಂಕ್‌ನ ಕಾರ್ಯಗಳನ್ನು ಶ್ಲಾಘಿಸಬೇಕಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಆದಾಗ್ಯೂ, ಬ್ಯಾಂಕ್ ಮತ್ತು ಅಲ್ಲಿನ ಹಿರಿಯ ಮ್ಯಾನೇಜರ್ ಬಗ್ಗೆ ಅವಮಾನಕರವಾದ ಪೋಸ್ಟ್ ಹಾಕಿದ್ದ ಪಶ್ಚಿಮ ಬಂಗಾಳದ ಇಬ್ಬರು ನೌಕರರ ವಿರುದ್ಧ ಬ್ಯಾಂಕ್ ಕ್ರಮಕೈಗೊಂಡಿದೆ.

ಬ್ಯಾಂಕ್ ಈ ರೀತಿ ಪ್ರಕಟಣೆ ಹೊರಡಿಸಿರುವ ಬಗ್ಗೆಯೂ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಎಸ್‌ಬಿಐ ನೌಕರರು ಹೇಳಿದ್ದಾರೆ.

ಪ್ರಜಾಪ್ರಭುತ್ವವಿರುವ ದೇಶದ ಪ್ರಜೆಯಾಗಿರುವ ನನಗೆ ನನ್ನ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಿಸುವ ಹಕ್ಕು ಇದೆ. ಬ್ಯಾಂಕ್ ಹೊರಡಿಸಿರುವ ಈ ಪ್ರಕಟಣೆ ಸಂವಿಧಾನದ 19ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರೊಬ್ಬರ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು