ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌: ಮೂರು ವಾರಗಳಲ್ಲಿ ಹಣ ಮರಳಿಸಲು ಸುಪ್ರೀಂ ಆದೇಶ

Last Updated 2 ಫೆಬ್ರುವರಿ 2021, 16:09 IST
ಅಕ್ಷರ ಗಾತ್ರ

ನವದೆಹಲಿ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ಕಂಪನಿಯ ಆರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದವರಿಗೆ ಇನ್ನು ಮೂರು ವಾರಗಳಲ್ಲಿ ಒಟ್ಟು ₹ 9,122 ಕೋಟಿ ಹಣ ಮರುಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಆರು ಫಂಡ್‌ಗಳನ್ನು ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್ ಮತ್ತು ಸಂಜೀವ್ ಖನ್ನಾ ಅವರಿದ್ದ ವಿಭಾಗೀಯ ಪೀಠವು, ಹೂಡಿಕೆದಾರರು ಈ ಆರು ಫಂಡ್‌ಗಳಲ್ಲಿ ಮಾಡಿರುವ ಹೂಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಮರುಪಾವತಿ ಆಗಬೇಕು ಎಂದು ಸೂಚಿಸಿದೆ. ಹಣವನ್ನು ಹೂಡಿಕೆದಾರರಿಗೆ ಮರಳಿಸುವ ಜವಾಬ್ದಾರಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮ್ಯೂಚುವಲ್‌ ಫಂಡ್‌ ಕಂಪನಿಗೆ ವಹಿಸಲಾಗಿದೆ.

ಹಣ ಮರುಪಾವತಿ ಮಾಡುವಲ್ಲಿ ಸಮಸ್ಯೆ ಎದುರಾದರೆ ನ್ಯಾಯಾಲಯದ ಕದ ತಟ್ಟಬಹುದು ಎಂದು ಪೀಠ ಹೇಳಿದೆ. ಆರು ಫಂಡ್‌ಗಳನ್ನು ಮುಕ್ತಾಯಗೊಳಿಸಲು ಹೂಡಿಕೆದಾರರ ಅನುಮತಿ ಕೋರಿ, ಇ–ಮತದಾನ ಡಿಸೆಂಬರ್‌ ಕೊನೆಯ ವಾರದಲ್ಲಿ ನಡೆದಿತ್ತು. ಮುಕ್ತಾಯಗೊಳಿಸಲು ಹೆಚ್ಚಿನ ಹೂಡಿಕೆದಾರರು ಒಪ್ಪಿಗೆ ನೀಡಿದ್ದರು.

ಸಾಲಪತ್ರ ಆಧಾರಿತ ಈ ಆರು ಫಂಡ್‌ಗಳನ್ನು ಹೂಡಿಕೆದಾರರ ಅನುಮತಿ ಇಲ್ಲದೆ ಮುಕ್ತಾಯಗೊಳಿಸುವಂತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈ ಹಿಂದೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆರು ಫಂಡ್‌ಗಳನ್ನು ಮುಕ್ತಾಯಗೊಳಿಸಲು ಹೂಡಿಕೆದಾರರ ಒಪ್ಪಿಗೆ ಕೇಳಲು ಒಂದು ವಾರದಲ್ಲಿ ಸಭೆ ಕರೆಯಬೇಕು ಎಂದು ಸುಪ್ರೀಂ ಕೋರ್ಟ್‌ ಡಿಸೆಂಬರ್‌ 3ರಂದು ನಿರ್ದೇಶನ ನೀಡಿತ್ತು.

ಇಡೀ ಸಮಸ್ಯೆ ದೊಡ್ಡದಾಗಿದೆ, ಜನರಿಗೆ ತಮ್ಮ ಹಣ ವಾಪಸ್ ಬೇಕಾಗಿದೆ ಎಂದು ಪೀಠ ಆಗ ಹೇಳಿತ್ತು.

ಯಾವುವು ಆರು ಫಂಡ್‌ಗಳು?

* ಲೋ ಡ್ಯುರೇಷನ್ ಫಂಡ್

* ಅಲ್ಟ್ರಾ ಶಾರ್ಟ್‌ ಬಾಂಡ್‌ ಫಂಡ್‌

* ಶಾರ್ಟ್‌ ಟರ್ಮ್‌ ಇನ್‌ಕಮ್‌ ಪ್ಲ್ಯಾನ್‌

* ಕ್ರೆಡಿಟ್ ರಿಸ್ಕ್‌ ಫಂಡ್‌

* ಡೈನಾಮಿಕ್‌ ಅಕ್ರೂವಲ್‌ ಫಂಡ್‌

* ಇನ್‌ಕಮ್‌ ಅಪಾರ್ಚುನಿಟೀಸ್‌ ಫಂಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT