ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಂಕರ್‌ಗಳಿಂದ ‘ಸೆಲ್ಫಿ ವಿತ್ ಎಟಿಎಂ’!

ಸದಾ ಸೇವೆ ಒದಗಿಸಲು ಅನುಕೂಲವಾಗುವಂತೆ ಬ್ಯಾಂಕ್‌ಗಳ ಕ್ರಮ
Published : 24 ಮಾರ್ಚ್ 2021, 19:31 IST
ಫಾಲೋ ಮಾಡಿ
Comments

ಕಾರವಾರ: ವಾರಾಂತ್ಯ, ರಜಾ ದಿನಗಳು, ಹಬ್ಬಗಳ ಸಂದರ್ಭದಲ್ಲಿ ಎ.ಟಿ.ಎಂ. ನಿರ್ವಹಣೆಯಿಲ್ಲದೇ ‘ಹಣವಿಲ್ಲ’, ‘ಸೇವೆಗೆ ಅಲಭ್ಯ’ ಮುಂತಾದ ಫಲಕಗಳು ಕಾಣಿಸುವುದು ಸಾಮಾನ್ಯ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ಕೆನರಾ ಸೇರಿದಂತೆ ವಿವಿಧ ಬ್ಯಾಂಕ್‌ಗಳು ‘ಸೆಲ್ಫಿ ವಿತ್ ಎಟಿಎಂ’ (ಎಟಿಎಂ ಜೊತೆ ಸೆಲ್ಫಿ) ಜಾರಿ ಮಾಡಿವೆ.

ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಹಾಗೂ ಪ್ರಾದೇಶಿಕ ವ್ಯವಸ್ಥಾಪಕರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿರುವ ಐದು ಎಟಿಎಂಗಳಿಗೆ ಪ್ರತಿ ಭಾನುವಾರ ಅಥವಾ ರಜಾ ದಿನಗಳಲ್ಲಿ ಭೇಟಿ ನೀಡುತ್ತಾರೆ. ಅವು ಚಾಲನೆಯಲ್ಲಿರುವುದನ್ನು ಖಾತ್ರಿಪಡಿಸಿಕೊಂಡು ಎಟಿಎಂ ಯಂತ್ರದ ಮುಂದೆ ನಿಂತು ಮೊಬೈಲ್ ಫೋನ್‌ನಲ್ಲಿ ‘ಸೆಲ್ಫಿ’ ತೆಗೆದುಕೊಳ್ಳುತ್ತಾರೆ. ಬಳಿಕ ಅದನ್ನು ಕೇಂದ್ರೀಕೃತ ವ್ಯವಸ್ಥೆಯ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಿ ದೃಢಪಡಿಸುತ್ತಾರೆ.

ಕೆಲವು ಖಾಸಗಿ ಬ್ಯಾಂಕ್‌ಗಳಲ್ಲಿ ಈಗಾಗಲೇ ಈ ಪದ್ಧತಿ ಜಾರಿಯಲ್ಲಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳೂ ಅನುಸರಿಸುತ್ತಿವೆ. ಈ ಕ್ರಮದಿಂದ ದೂರುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.

‘ಉತ್ತರ ಕನ್ನಡದಲ್ಲಿ ಖಾಸಗಿ, ರಾಷ್ಟ್ರೀಕೃತ, ಕೆ.ಡಿ.ಸಿ.ಸಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳ ಸುಮಾರು 290 ಎಟಿಎಂಗಳಿವೆ. ಕೋವಿಡ್ ಸಂಬಂಧ ಲಾಕ್‌ಡೌನ್ ಆದ ಬಳಿಕ ಸಾರ್ವಜನಿಕರು ಹಣಕಾಸು ವ್ಯವಹಾರಗಳಿಗೆ ಎಟಿಎಂ ಕೇಂದ್ರಗಳನ್ನು ಹೆಚ್ಚು ಅವಲಂಬಿಸಿದರು. ಆದರೆ, ಆಗಿನಿಂದ ದೂರುಗಳೂ ಹೆಚ್ಚಾದವು. ಅದನ್ನು ಕಡಿಮೆ ಮಾಡಲು ಈ ಪದ್ಧತಿಯನ್ನು ಜಾರಿ ಮಾಡಲಾಯಿತು. ಈಗ ಶೇ 98ರಷ್ಟು ದೂರುಗಳು ಕಡಿಮೆಯಾಗಿವೆ’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಸಹವರ್ತಿ ಬ್ಯಾಂಕ್‌ನ ವ್ಯವಸ್ಥಾಪಕ ಪೀರ್‌ಸಾಬ್ ಪಿಂಜರ್.

‘ಬ್ಯಾಂಕ್‌ಗಳಲ್ಲಿ ಕೇಂದ್ರೀಕೃತ ವ್ಯವಸ್ಥೆ’

‘ಎಟಿಎಂ. ಕೇಂದ್ರಗಳು ಸದಾ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಲು ಕೆಲವು ಬ್ಯಾಂಕ್‌ಗಳಲ್ಲಿ ಕೇಂದ್ರೀಕೃತ ವ್ಯವಸ್ಥೆಯಿದೆ. ಎಟಿಎಂಗಳ ಬಗ್ಗೆ ನಿಗಾ ವಹಿಸಲೆಂದೇ ವಿಚಕ್ಷಣಾ ತಂಡವಿದೆ. ಒಂದುವೇಳೆ, ಒಂದು ತಾಸಿನ ಅವಧಿಯಲ್ಲಿ ಎಟಿಎಂಗಳಲ್ಲಿ ಯಾವುದೇ ಚಟುವಟಿಕೆಗಳು ನಡೆಯದಿದ್ದರೆ ಸಂಬಂಧಿಸಿದ ಶಾಖಾ ವ್ಯವಸ್ಥಾಪಕರಿಗೆ ತಂಡದವರು ಕರೆ ಮಾಡಿ ವಿಚಾರಿಸುತ್ತಾರೆ’ ಎಂದು ಪೀರ್‌ಸಾಬ್ ಪಿಂಜರ್ ತಿಳಿಸಿದರು.

‘ಯಾವ ಎಟಿಎಂ ಎಷ್ಟು ಹೊತ್ತಿನಿಂದ ನಿಷ್ಕ್ರಿಯವಾಗಿದೆ ಎಂದು ತಂಡವು ಸಾಫ್ಟ್‌ವೇರ್ ಮೂಲಕ ಗಮನಿಸುತ್ತದೆ. ಗ್ರಾಹಕರು ಕನಿಷ್ಠ ತಮ್ಮ ಖಾತೆಯಲ್ಲಿರುವ ಹಣದ ಮಾಹಿತಿಯನ್ನಾದರೂ ಪಡೆಯಬೇಕು. ಅಲ್ಲಿ ಏನೂ ಚಟುವಟಿಕೆ ನಡೆಯದಿದ್ದರೆ ನಿಷ್ಕ್ರಿಯವಾಗಿದೆ ಎಂದು ಭಾವಿಸಿ ವಿವರಣೆ ಪಡೆಯಲಾಗುತ್ತದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT