ಗುರುವಾರ , ಡಿಸೆಂಬರ್ 12, 2019
17 °C
ಸಕಾರಾತ್ಮಕ ಮಟ್ಟದಲ್ಲಿ ವಾರದ ವಹಿವಾಟು ಅಂತ್ಯ

ಹೂಡಿಕೆದಾರರ ಸಂಪತ್ತು ವೃದ್ಧಿ

Published:
Updated:

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕ ಮಟ್ಟದಲ್ಲಿ ಅಂತ್ಯಗೊಂಡಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯ ₹ 8 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.

ನವೆಂಬರ್‌ 2ರ ಅಂತ್ಯಕ್ಕೆ ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ₹ 133 ಲಕ್ಷ ಕೋಟಿಯಿಂದ ₹ 141 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಕ್ಟೋಬರ್‌ 26ರ ಅಂತ್ಯಕ್ಕೆ, ಐದು ದಿನಗಳ ವಹಿವಾಟು ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ₹ 4 ಲಕ್ಷ ಕೋಟಿಯಷ್ಟು ಕರಗಿತ್ತು. 

ಐದು ದಿನಗಳ ವಹಿವಾಟು ಅವಧಿಯಲ್ಲಿ ಮೂರು ದಿನಗಳು ಸೂಚ್ಯಂಕಗಳು ಏರಿಕೆ ಕಂಡರೆ, ಎರಡು ದಿನಗಳು ಇಳಿಕೆ ಕಂಡಿವೆ. ಈ ಏರಿಳಿತದ ಹೊರತಾಗಿಯೂ ಸಕಾರಾತ್ಮಕ ಮಟ್ಟದಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸೋಮವಾರ ಉತ್ತಮ ಆರಂಭ ಕಂಡುಕೊಂಡಿತು. ಸಂವೇದಿ ಸೂಚ್ಯಂಕ 718 ಅಂಶ ಜಿಗಿತ ಕಂಡು, 34,067 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು. ಆದರೆ ಮಂಗಳವಾರ 176 ಅಂಶ ಇಳಿಕೆ ಕಂಡು, 34 ಸಾವಿರದಿಂದ ಕೆಳಗಿಳಿಯಿತು. ಬುಧವಾರದ ವಹಿವಾಟಿನಲ್ಲಿ 551 ಅಂಶ ಏರಿಕೆ ಕಂಡು ಮತ್ತೆ 34 ಸಾವಿರದ ಗಡಿ ದಾಟಿತು. ಆದರೆ ಗುರುವಾರ 10 ಅಂಶ ಇಳಿಕೆ ಕಂಡಿತು. ಶುಕ್ರವಾರದ ವಹಿವಾಟಿನಲ್ಲಿ 579 ಅಂಶಗಳಷ್ಟು ಏರಿಕೆ ದಾಖಲಿಸಿ 35 ಸಾವಿರಕ್ಕೆ ತಲುಪಿತು. 35, 011 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ. ಅಕ್ಟೋಬರ್‌ 26ರಿಂದ ನವೆಂಬರ್‌ 2ರವರೆಗೆ ಸೂಚ್ಯಂಕ 1,662 ಅಂಶಗಳಷ್ಟು ಭಾರಿ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 172 ಅಂಶ ಹೆಚ್ಚಾಗಿ 10,553 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಅಕ್ಟೋಬರ್‌ 26ರಿಂದ ನವೆಂಬರ್‌ 2ರವರೆಗೆ ನಿಫ್ಟಿ 523 ಅಂಶಗಳಷ್ಟು ಏರಿಕೆ ಕಂಡಿದೆ.

ಸಕಾರಾತ್ಮಕ ಅಂಶಗಳು: ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಚ್ಚಾ ತೈಲ ಪೂರೈಕೆ ಹೆಚ್ಚಾಗುತ್ತಿದೆ ಬ್ರೆಂಟ್‌ ತೈಲ ದರ ಶುಕ್ರವಾರ ಶೇ 3.48ರಷ್ಟು ಇಳಿಕೆ ಕಂಡ ಕಂಡು ಒಂದು ಬ್ಯಾರೆಲ್‌ಗೆ 72.65 ಡಾಲರ್‌ಗೆ ಇಳಿಕೆಯಾಗಿದೆ. ಇದು ಏಳು ತಿಂಗಳ ಕನಿಷ್ಠ ಮಟ್ಟವಾಗಿದೆ. 

ಅಕ್ಟೋಬರ್‌ ತಿಂಗಳ ಜಿಎಸ್‌ಟಿ ಸಂಗ್ರಹ ₹ 1 ಲಕ್ಷ ಕೋಟಿಯನ್ನು ದಾಟಿದೆ. ಹಬ್ಬದ ಖರೀದಿ ಮತ್ತು ತೆರಿಗೆ ವಂಚನೆ ತಡೆಯ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. ಈ ಸುದ್ದಿಗಳು ಷೇರು‍ಪೇಟೆಯಲ್ಲಿ ಸಕಾರಾತ್ಮಕ ವಹಿವಾಟಿಗೆ ನೆರವಾದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು