ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ

ಮೊದಲ ಬಾರಿಗೆ 77 ಸಾವಿರ ಅಂಶ ದಾಟಿದ ಸೆನ್ಸೆಕ್ಸ್‌
Published 10 ಜೂನ್ 2024, 14:33 IST
Last Updated 10 ಜೂನ್ 2024, 14:33 IST
ಅಕ್ಷರ ಗಾತ್ರ

ಮುಂಬೈ: ಸತತ ಮೂರು ದಿನದ ಓಟದ ನಂತರ ಸೋಮವಾರ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.

ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಷೇರು ಸೂಚ್ಯಂಕಗಳು ಐ.ಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಕುಸಿತ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 203 ಅಂಶ ಇಳಿಕೆಯಾಗಿ 76,490ಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 385 ಅಂಶ ಏರಿಕೆಯಾಗಿ 77,079 ಅಂಶಕ್ಕೆ ಮುಟ್ಟಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 30 ಅಂಶ ಕಡಿಮೆಯಾಗಿ 23,259ಕ್ಕೆ ಕೊನೆಗೊಂಡಿತು. ವಹಿವಾಟಿನ ವೇಳೆ 121 ಅಂಶ ಹೆಚ್ಚಳವಾಗಿ 23,411ಕ್ಕೆ ಏರಿಕೆಯಾಗಿತ್ತು. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್‌ 77,079 ಅಂಶ ಮತ್ತು ನಿಫ್ಟಿ 23,411 ಅಂಶಗಳಿಗೆ ತಲುಪಿವೆ. 

ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ್ದ ಸೆನ್ಸೆಕ್ಸ್‌, ಐ.ಟಿ, ಲೋಹ, ತೈಲ ಮತ್ತು ಅನಿಲದ ಷೇರುಗಳ ಹೂಡಿಕೆದಾರರು ಮಾರಾಟಕ್ಕೆ ಮುಂದಾಗಿದ್ದರಿಂದ ಇಳಿಕೆ ಕಂಡವು. ಅಮೆರಿಕದ ಫೆಡರಲ್ ದರ ಕಡಿತವು ಶೀಘ್ರದಲ್ಲೇ ಆಗದಿರಬಹುದು ಎಂಬ ಸೂಚನೆಯಿಂದ ಸೂಚ್ಯಂಕಗಳು ಇಳಿದವು ಎಂದು ಮೆಹ್ತಾ ಸೆಕ್ಯುರಿಟೀಸ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್‌ ತಾಪ್ಸೆ ಹೇಳಿದ್ದಾರೆ.

ಸೆನ್ಸೆಕ್ಸ್‌ ಗುಚ್ಛದಲ್ಲಿ ಟೆಕ್‌ ಮಹೀಂದ್ರ, ಇನ್ಫೊಸಿಸ್‌, ವಿಪ್ರೊ, ಬಜಾಜ್‌ ಫೈನಾನ್ಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಷೇರಿನ ಮೌಲ್ಯ ಇಳಿಕೆ ಕಂಡಿವೆ.

ಅಲ್ಟ್ರಾಟೆಕ್‌ ಸಿಮೆಂಟ್‌, ಪವರ್‌ಗ್ರಿಡ್‌, ನೆಸ್ಲೆ, ಎನ್‌ಟಿಪಿಸಿ, ಟಾಟಾ ಸ್ಟೀಲ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಗಳಿಕೆ ಕಂಡಿವೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 1.04 ಮತ್ತು ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 0.56ರಷ್ಟು ಏರಿಕೆಯಾಗಿವೆ. ಸರ್ವಿಸಸ್‌ ಶೇ 1.61, ರಿಯಾಲ್ಟಿ ಶೇ 1.34, ಸರಕುಗಳು ಶೇ 1.28, ಯುಟಿಲಿಟಿ ಶೇ 1.11, ಹೆಲ್ತ್‌ಕೇರ್‌ ಶೇ 0.77 ಏರಿಕೆ ಕಂಡಿವೆ. ಐ.ಟಿ, ಆಟೊ, ಲೋಹ ಷೇರುಗಳು ಇಳಿಕೆ ಕಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರದ ವಹಿವಾಟಿನಲ್ಲಿ ₹4,391 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆ ಅಂಕಿ ಅಂಶಗಳು ತಿಳಿಸಿವೆ.

ಏಷ್ಯಾದ ಮಾರುಕಟ್ಟೆಯಲ್ಲಿ ಟೋಕಿಯೊ ಗಳಿಕೆ ಕಂಡರೆ, ಸೋಲ್‌ ಇಳಿದಿದೆ. ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ ಶೇ 0.18ರಷ್ಟು ಹೆಚ್ಚಾಗಿದ್ದು, 79.76 ಡಾಲರ್‌ಗೆ (₹6,660) ಮುಟ್ಟಿದೆ.

ಗಳಿಕೆ ಕಂಡ ಕಂಪನಿಗಳು (ಶೇಕಡಾವಾರು)

ಅಲ್ಟ್ರಾಟೆಕ್‌ ಸಿಮೆಂಟ್‌; 3.19

ಪವರ್‌ಗ್ರಿಡ್‌; 2.07

ನೆಸ್ಲೆ ಇಂಡಿಯಾ; 1.74

ಎಕ್ಸಿಸ್‌ ಬ್ಯಾಂಕ್‌; 1.16

ಎನ್‌ಟಿಪಿಸಿ; 1.07

ಇಳಿಕೆ ಕಂಡ ಕಂಪನಿಗಳು (ಶೇಕಡಾವಾರು)

ಟೆಕ್‌ ಮಹೀಂದ್ರ; 2.72

ಇನ್ಫೊಸಿಸ್‌; 2.20

ವಿಪ್ರೊ; 1.95

ಮಹೀಂದ್ರ ಆ್ಯಂಡ್‌ ಮಹೀಂದ್ರ; 1.73

ಬಜಾಜ್‌ ಫೈನಾನ್ಸ್‌; 1.42

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT