ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್‌ 1,245, ನಿಫ್ಟಿ 355 ಅಂಶ ಜಿಗಿತ

Published 1 ಮಾರ್ಚ್ 2024, 15:58 IST
Last Updated 1 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಮುಂಬೈ: ‌ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ನಿರೀಕ್ಷೆ ಮೀರಿ ಜಿಗಿತ ಕಂಡಿರುವುದು ಹಾಗೂ ವಿದೇಶಿ ಬಂಡವಾಳದ ಒಳಹರಿವಿನ ಹೆಚ್ಚಳವು ಗೂಳಿ ಓಟಕ್ಕೆ ಉತ್ತೇಜನ ನೀಡಿತು. 

ವಾರದಿಂದಲೂ ಏರಿಳಿತಕ್ಕೆ ಸಾಕ್ಷಿಯಾಗಿದ್ದ ಸೂಚ್ಯಂಕಗಳು ಬೆಳಿಗ್ಗಿನ ವಹಿವಾಟಿನಲ್ಲಿ ಏರಿಕೆಯ ಹಾದಿ ಹಿಡಿದವು. ಜಾಗತಿಕ ಮಾರುಕಟ್ಟೆಯಲ್ಲಿ ನಡೆದ ಸ್ಥಿರ ವಹಿವಾಟು ಕೂಡ ಈ ಏರಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ. 

ಸೆನ್ಸೆಕ್ಸ್‌ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದು, ವಹಿವಾಟುದಾರರ ಪಾಲಿಗೆ ವರದಾನವಾಯಿತು. ಹೂಡಿಕೆದಾರರ ಸಂಪತ್ತಿನ ಮೌಲ್ಯವು‌‌ ₹4.29 ಲಕ್ಷ ಕೋಟಿಗೆ ಏರಿಕೆ ಆಗಿದೆ. ‌

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,245 ಅಂಶ ಜಗಿತ ಕಂಡು (ಶೇ 1.72) 73,475 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನಲ್ಲಿ 1,318 ಅಂಶ ಏರಿಕೆ ಕಂಡು, 73,819ಕ್ಕೆ ತಲುಪಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 355 ಅಂಶ ಏರಿಕೆ ಕಂಡು 22,338ಕ್ಕೆ ಮುಟ್ಟಿದೆ. ದಿನದ ವಹಿವಾಟಿನಲ್ಲಿ 370 ಅಂಶ ಏರಿಕೆ ಕಂಡು, 22,353ಕ್ಕೆ ತಲುಪಿತ್ತು.

ಸೆನ್ಸೆಕ್ಸ್‌ ಗುಚ್ಛದಲ್ಲಿರುವ ಟಾಟಾ ಸ್ಟೀಲ್‌ ಷೇರಿನ ಮೌಲ್ಯ ಶೇ 6.46 ಹಾಗೂ ಜೆಎಸ್‌ಡಬ್ಲ್ಯು ಷೇರಿನ ಮೌಲ್ಯ ಶೇ 4.46ರಷ್ಟು ಹೆಚ್ಚಳವಾಗಿದೆ. ಪೇಟಿಎಂ ಷೇರಿನ ಮೌಲ್ಯ ಶೇ 5ರಷ್ಟು ಏರಿಕೆ ಆಗಿದೆ. ಲಾರ್ಸನ್‌ ಆ್ಯಂಡ್‌ ಟರ್ಬೊ, ಟೈಟನ್‌, ಮಾರುತಿ, ಇಂಡಸ್‌ಅಂಡ್‌ ಇಂಡ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಟಾಟಾ ಮೋಟರ್ಸ್ ಉತ್ತಮ ಗಳಿಕೆ ಕಂಡಿವೆ. 

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೊಸಿಸ್‌ ಮತ್ತು ಟೆಕ್‌ ಮಹೀಂದ್ರ ಷೇರುಗಳು ಇಳಿಕೆ ಕಂಡಿವೆ. 

ಟೊಕಿಯೊ, ಶಾಂಘೈ ಹಾಗೂ ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲೂ ಸಕಾರಾತ್ಮಕ ವಹಿವಾಟು ನಡೆದಿದೆ. ಅಮೆರಿಕದ ಷೇರು ಮಾರುಕಟ್ಟೆಯೂ ಗಳಿಕೆ ಕಂಡಿದೆ. 

ವಿದೇಶಿ ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ಒಟ್ಟು ₹3,568 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆಯ ಅಂಕಿ ಅಂಶಗಳು ತಿಳಿಸಿವೆ.

ಜಿಡಿಪಿ ಪ್ರಗತಿ ವರದಾನ

2023–24ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 8.4ರಷ್ಟು ಪ್ರಗತಿ ದಾಖಲಿಸಿದೆ. ಅಲ್ಲದೆ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆಯು 7.6ರಷ್ಟು ಬೆಳವಣಿಗೆ ಕಾಣಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯ ವರದಿ ಹೇಳಿದೆ. ಮತ್ತೊಂದೆಡೆ ಫೆಬ್ರುವರಿಯಲ್ಲಿ ತಯಾರಿಕಾ ವಲಯದ ಚಟುವಟಿಕೆಗಳು ಏರಿಕೆ ಕಂಡಿವೆ. ಈ ಅಂಶಗಳು ಷೇರುಪೇಟೆ ಏರಿಕೆಗೆ ಕಾರಣವಾಗಿವೆ. ಅಮೆರಿಕದಲ್ಲಿ ಹಣದುಬ್ಬರ ಇಳಿಕೆಯಾಗಿದೆ. ಹಾಗಾಗಿ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಜೂನ್‌ನಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ. ಇದು ಹೂಡಿಕೆದಾರರ ಉತ್ಸಾಹ ಹೆಚ್ಚಿಸಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯಸ್ಥ (ಸಂಶೋಧನೆ) ವಿನೋದ್‌ ನಾಯರ್‌ ಹೇಳಿದ್ದಾರೆ.  

ಮಾರುತಿ ಷೇರು ಏರಿಕೆ

ಪ್ರಯಾಣಿಕ ವಾಹನ ತಯಾರಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾದ ಷೇರಿನ ಮೌಲ್ಯ ಶೇ 3ರಷ್ಟು ಏರಿಕೆ ಆಗಿದೆ. ಇದರಿಂದ ಕಂಪನಿಯು ಒಂದೇ ದಿನ ₹10648 ಕೋಟಿ ಗಳಿಸಿಕೊಂಡಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು ₹3.64 ಲಕ್ಷ ಕೋಟಿಗೆ ಮುಟ್ಟಿದೆ. ಫೆಬ್ರುವರಿಯಲ್ಲಿ ಕಂಪನಿ ವಾಹನಗಳ ಮಾರಾಟವು ಹೆಚ್ಚಳವಾಗಿರುವುದರಿಂದ  ಷೇರು ಮೌಲ್ಯ ಏರಿಕೆ ಕಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT