ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಮೇಲೆ ದೇಶಿ, ಜಾಗತಿಕ ವಿದ್ಯಮಾನಗಳ ಪ್ರಭಾವ: 917 ಅಂಶ ಜಿಗಿದ ಸೂಚ್ಯಂಕ

Last Updated 4 ಫೆಬ್ರುವರಿ 2020, 17:02 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಗೂಳಿ ಓಟ ಜೋರಾಗಿತ್ತು. ಹೂಡಿಕೆದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರಿಂದ ಉತ್ತಮ ಖರೀದಿ ವಹಿವಾಟು ನಡೆಯಿತು.

ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡುವ ನಿರೀಕ್ಷೆ ವ್ಯಕ್ತವಾಗಿದೆ. ಹೀಗಾಗಿ ಹೂಡಿಕೆದಾರರು ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದರು. ಇದರಿಂದಾಗಿ ದೇಶಿ ಷೇರುಪೇಟೆಗಳು ಬಜೆಟ್‌ ಮಂಡನೆಯಗೂ ಮುನ್ನ ಇದ್ದ ಸ್ಥಿತಿಗೆ ಮರಳುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 917 ಅಂಶ ಜಿಗಿತ ಕಂದ್ದು, 40,789 ಅಂಶಗಳಿಗೆ ಏರಿಕೆಯಾಗಿದೆ. ಮಧ್ಯಂತರ ವಹಿವಾಟಿನಲ್ಲಿ 40, 818 ಅಂಶಗಳಿಗೆ ಏರಿಕೆಯಾಗಿತ್ತು.ಬಜೆಟ್‌ ದಿನ (ಫೆ.1) 988 ಅಂಶ ಕುಸಿತ ಕಂಡು 39,735 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 271 ಅಂಶ ಹೆಚ್ಚಾಗಿ 11,979 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವಿದೇಶಿ ಬಂಡವಾಳ ಹೂಡಿಕೆ: ಷೇರುಪೇಟೆಯ ತಾತ್ಕಾಲಿಕ ಮಾಹಿತಿಯ ಪ್ರಕಾರ,ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದಿನದ ವಹಿವಾಟಿನಲ್ಲಿ ₹ 366 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಟೈಟಾನ್‌ ಷೇರು ಶೇ 7.97ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿದೆ. ಐಟಿಸಿ, ಎಚ್‌ಡಿಎಫ್‌ಸಿ, ಬಜಾಜ್‌ ಫೈನಾನ್ಸ್‌ ಮತ್ತು ಟಾಟಾ ಸ್ಟೀಲ್‌ ಷೇರುಗಳು ಏರಿಕೆಯಾಗಿವೆ.

ಇಳಿಕೆ: ಬಜಾಜ್‌ ಆಟೊ ಮತ್ತು ಎಚ್‌ಯುಎಲ್‌ ಷೇರುಗಳ ಮೌಲ್ಯದಲ್ಲಿ ಇಳಿಕೆ ಆಗಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 71.25ರಂತೆ ವಿನಿಮಯಗೊಂಡಿತು.

ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟು ಹಾಗೂ ಕೆಲವು ದಿನಗಳಿಂದ ಕಚ್ಚಾ ತೈಲ ದರದಲ್ಲಿನ ಇಳಿಕೆಯು ರೂಪಾಯಿ ಮೌಲ್ಯವರ್ಧನೆಗೆ ನೆರವಾಗಿವೆ ಎಂದು ವರ್ತಕರು ಹೇಳಿದ್ದಾರೆ.

ಕಚ್ಚಾ ತೈಲ ದರ ಇಳಿಕೆ: ಚೀನಾ ವೈರಸ್‌ ಪರಿಣಾಮದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್‌ ತೈಲ ದರ 13 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ಬ್ರೆಂಟ್ ತೈಲ ದರ ಒಂದು ಬ್ಯಾರೆಲ್‌ಗೆ 54.86 ಡಾಲರ್‌ಗಳಿಗೆ ತಲುಪಿದೆ. 2019ರ ಜನವರಿ 1 ರಂದು ಒಂದು ಬ್ಯಾರೆಲ್‌ಗೆ 53.80 ಡಾಲರ್‌ ಇತ್ತು.

ಹೂಡಿಕೆದಾರರ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ನಡೆದ ಸಕಾರಾತ್ಮಕ ಚಟುವಟಿಕೆಯಿಂದಾಗಿ ದಿನದ ವಹಿವಾಟಿನಲ್ಲಿ ಹೂಡಿಕೆದಾರ ಸಂಪತ್ತು ₹ 2.86 ಲಕ್ಷ ಕೋಟಿ ಹೆಚ್ಚಾಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹ 153.75 ಲಕ್ಷ ಕೋಟಿಗಳಿಂದ ₹156.61 ಲಕ್ಷ ಕೋಟಿಗೆ ತಲುಪಿದೆ.ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಒಟ್ಟಾರೆ ₹ 3.57 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT