ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ಖರೀದಿ ಭರಾಟೆ

ಕಚ್ಚಾ ತೈಲ ಅಗ್ಗ, ವಿದೇಶಿ ಬಂಡವಾಳ ಒಳಹರಿವು ಹೆಚ್ಚಳದ ಪರಿಣಾಮ
Last Updated 26 ಏಪ್ರಿಲ್ 2019, 19:05 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 336 ಅಂಶಗಳ ಏರಿಕೆ ದಾಖಲಿಸಿ ಮತ್ತೆ 39 ಸಾವಿರ ಅಂಶಗಳ ಗಡಿ ದಾಟಿತು.

ವಾರಪೂರ್ತಿ ತೀವ್ರ ಏರಿಳಿತ ಕಂಡಿದ್ದ ಸೂಚ್ಯಂಕವು ವಾರಾಂತ್ಯದಲ್ಲಿ ಗಮನಾರ್ಹ ಏರಿಕೆ ದಾಖಲಿಸಿತು.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ನಿಂದ ಕೆಳಗೆ ಇಳಿಕೆಯಾಗಿರುವುದು ಮತ್ತು ವಿದೇಶಿ ನಿಧಿಗಳ ಒಳಹರಿವು ನಿರಂತರವಾಗಿ ಮುಂದುವರೆದಿರುವುದು ಹೂಡಿಕೆದಾರರ ಖರೀದಿ ಉತ್ಸಾಹ ಹೆಚ್ಚಿಸಿವೆ. ಪ್ರಮುಖ ಸಂಸ್ಥೆಗಳ ಹಣಕಾಸು ಸಾಧನೆಯು ಕೂಡ ವಹಿವಾಟುದಾರರ ಪಾಲಿಗೆ ಉತ್ತೇಜನಕಾರಿಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ನಿಗದಿಗೆ ಮಾನದಂಡವಾಗಿರುವ ಬ್ರೆಂಟ್‌ ಕಚ್ಚಾ ತೈಲದ ವಾಯಿದಾ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇ 1.28ರಷ್ಟು ಕಡಿಮೆಯಾಗಿ 73.41 ಡಾಲರ್‌ಗೆ ಇಳಿದಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯ ವಹಿವಾಟಿನ ಮಧ್ಯಂತರದಲ್ಲಿ ರೂಪಾಯಿ ಬೆಲೆಯು ಡಾಲರ್‌ ಎದುರು 25 ಪೈಸೆ ಏರಿಕೆ ಕಂಡಿತ್ತು.

ಬ್ಯಾಂಕಿಂಗ್‌, ತೈಲ – ಅನಿಲ, ಲೋಹ ಮತ್ತು ಐ.ಟಿ ಷೇರುಗಳ ಬೆಲೆ ಹೆಚ್ಚಳದ ಪರಿಣಾಮವಾಗಿ ಸೂಚ್ಯಂಕ ಏರಿಕೆ ದಾಖಲಿಸಿತು.

ದಿನದ ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕವು ಖರೀದಿ ಭರಾಟೆಯ ಫಲವಾಗಿ 39,103 ಅಂಶಗಳಿಗೆ ತಲುಪಿತ್ತು. ವಹಿವಾಟಿನ ಅಂತ್ಯದಲ್ಲಿ 336.47 ಅಂಶಗಳ ಗಳಿಕೆ ಸಾಧಿಸಿ 39,067ರಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 113 ಅಂಶಗಳ ಏರಿಕೆ ಕಂಡು 11,754 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು.

ಲಾಭ ಕಂಡ ಷೇರುಗಳು: ಟಾಟಾ ಸ್ಟೀಲ್‌ ಗರಿಷ್ಠ ಲಾಭ ಬಾಚಿಕೊಂಡಿತು. ಸಂಸ್ಥೆಯ ಷೇರು ಬೆಲೆ ಶೇ 6.67ರವರೆಗೆ ಏರಿಕೆ ಕಂಡಿತ್ತು.

ಐಸಿಐಸಿಐ ಬ್ಯಾಂಕ್‌, ಟಿಸಿಎಸ್‌, ಎಸ್‌ಬಿಐ, ಆರ್‌ಐಎಲ್‌, ಇನ್ಫೊಸಿಸ್‌, ಎಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್‌ , ಬಜಾಜ್‌ ಫೈನಾನ್ಸ್‌, ಎಲ್‌ಆ್ಯಂಡ್‌ಟಿ, ಆ್ಯಕ್ಸಿಸ್‌ ಬ್ಯಾಂಕ್ ಮತ್ತು ಐಟಿಸಿ ಷೇರುಗಳು ಶೇ 3.05ರವರೆಗೆ ಗಳಿಕೆ ಕಂಡವು.

ನಷ್ಟಕ್ಕೆ ಗುರಿಯಾದ ಷೇರು: ಟಾಟಾ ಮೋಟರ್ಸ್‌, ಬಜಾಜ್‌ ಆಟೊ, ಮಾರುತಿ, ಭಾರ್ತಿ ಏರ್‌ಟೆಲ್‌, ಕೋಲ್‌ ಇಂಡಿಯಾ, ಎಂಆ್ಯಂಡ್‌ಎಂ ಮತ್ತು ವೇದಾಂತ್‌ ಷೇರುಗಳು ಶೇ 2.84ರವರೆಗೆ ಕುಸಿತ ದಾಖಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT