ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೂ ಜನೌಷಧ ಕೇಂದ್ರ ವಿಸ್ತರಣೆ: ಅಮಿತ್‌ ಶಾ

Published 8 ಜನವರಿ 2024, 16:07 IST
Last Updated 8 ಜನವರಿ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ‘ಗ್ರಾಮೀಣ ಪ್ರದೇಶದ ಬಡವರು ಮತ್ತು ರೈತರಿಗೆ ಕೈಗೆಟುಕುವ ದರದಲ್ಲಿ ಔಷಧ ನೀಡಲು ದೇಶದ 241 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್‌) ಜನೌಷಧ ಕೇಂದ್ರ ಆರಂಭಿಸಲಾಗಿದೆ’ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ತಿಳಿಸಿದರು.

ಪ್ಯಾಕ್ಸ್‌ಗಳಲ್ಲಿ ಜನೌಷಧ ಕೇಂದ್ರ ಆರಂಭಿಸುವ ಸಂಬಂಧ ಸೋಮವಾರ  ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಗರ ಪ್ರದೇಶದಲ್ಲಿ ಜನೌಷಧ ಕೇಂದ್ರಗಳು ಹೆಚ್ಚಿದ್ದು, ಬಡವರಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತಿದೆ. ಸದ್ಯ ಗ್ರಾಮೀಣರಿಗೂ ಈ ಸೇವೆ ವಿಸ್ತರಿಸಲಾಗಿದೆ’ ಎಂದು ತಿಳಿಸಿದರು.

‘ಜನೌಷಧ ಕೇಂದ್ರ ಸ್ಥಾಪನೆಗಾಗಿ ಕಳೆದ ಆರು ತಿಂಗಳಲ್ಲಿ ದೇಶದಾದ್ಯಂತ 4,470 ಸಂಘಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು. ಈ ಪೈಕಿ 2,373 ಸಂಘಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ವಿವರಿಸಿದರು.

ಅರ್ಹತೆ ಪಡೆದ ಐದು ಸಂಘಗಳಿಗೆ ‘ಸ್ಟೋರ್ ಕೋಡ್‌’ ಪ್ರಮಾಣ ಪತ್ರ ವಿತರಿಸಿದ ಅವರು, ‘ಬೈಲಾದಲ್ಲಿ ತಿದ್ದುಪಡಿ ಮಾಡಿಕೊಂಡು ಜನೌಷಧ ಕೇಂದ್ರ ತೆರೆಯುವ ಮೂಲಕ ಸಂಘಗಳು ತಮ್ಮ ವಾಣಿಜ್ಯ ಚಟುವಟಿಕೆಯನ್ನು ವಿಸ್ತರಿಸಬಹುದಾಗಿದೆ’ ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ಮಳಿಗೆಗಳಲ್ಲಿ ಜನರು ಈಗ ಕಡಿಮೆ ದರದಲ್ಲಿ ಜೆನೆರಿಕ್‌ ಔಷಧ ಖರೀದಿಸಬಹುದು. ಮುಕ್ತ ಮಾರುಕಟ್ಟೆಯಲ್ಲಿ ಕ್ಯಾನ್ಸರ್‌ ಔಷಧದ ಬೆಲೆ ₹2,250 ಇದೆ. ಈ ಔಷಧವು ಜೆನೆರಿಕ್‌ ಕೇಂದ್ರಗಳಲ್ಲಿ ₹250ಕ್ಕೆ ಸಿಗಲಿದೆ. ಗ್ರಾಮೀಣ ಹೆಣ್ಣುಮಕ್ಕಳು ₹1ಕ್ಕೆ ಸ್ಯಾನಿಟರಿ ನ್ಯಾಪ್‌ಕಿನ್‌ ಖರೀದಿಸಬಹುದಾಗಿದೆ ಎಂದರು.

ಬಡವರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸುವುದು ಕೇಂದ್ರ ಸರ್ಕಾರದ ಗುರಿ. ಬಡವರ ಆರೋಗ್ಯ ಸುಧಾರಣೆಯ ಆಶಯ ಇದರ ಹಿಂದಿದೆ ಎಂದ ಅವರು, ಜೆನೆರಿಕ್‌ ಔಷಧ ಖರೀದಿಸುವ ಮೂಲಕ ಕಳೆದ ಒಂಬತ್ತು ವರ್ಷಗಳಲ್ಲಿ ಜನರು ₹26 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ವಿವರಿಸಿದರು. 

ದೇಶದಲ್ಲಿ ಒಟ್ಟು 63 ಸಾವಿರ ಪ್ಯಾಕ್ಸ್‌ಗಳಿವೆ. ಅವುಗಳ ವಾಣಿಜ್ಯ ಚಟುವಟಿಕೆ ವಿಸ್ತರಿಸಲು ಕೇಂದ್ರ ಸರ್ಕಾರವು ಡಿಜಿಟಲೀಕರಣ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT