ಮಂಗಳವಾರ, ಆಗಸ್ಟ್ 9, 2022
20 °C

ಮಲ್ಯ, ನೀರವ್, ಚೋಕ್ಸಿಯಿಂದ ₹ 9 ಸಾವಿರ ಕೋಟಿ ವಸೂಲು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಿಂದ ಪರಾರಿ ಆಗಿರುವ ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಅವರಿಂದ ಬ್ಯಾಂಕ್‌ಗಳಿಗೆ ‘ವಂಚನೆ’ಯಾಗಿದೆ ಎನ್ನಲಾದ ಮೊತ್ತದಲ್ಲಿ ಶೇಕಡ 40ರಷ್ಟನ್ನು ವಸೂಲು ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.

ತಾನು ಮುಟ್ಟುಗೋಲು ಹಾಕಿಕೊಂಡಿದ್ದ ₹ 5,800 ಕೋಟಿ ಮೌಲ್ಯದ ಷೇರುಗಳು ಬುಧವಾರ ಮಾರಾಟವಾದ ನಂತರ ಇ.ಡಿ. ಈ ವಿವರ ನೀಡಿದೆ. ಬುಧವಾರ ಮಾರಾಟ ಆಗಿರುವ ಷೇರುಗಳ ಮೊತ್ತವನ್ನು ಪರಿಗಣಿಸಿದರೆ ಬ್ಯಾಂಕ್‌ಗಳು ವಸೂಲು ಮಾಡಿಕೊಂಡಿರುವ ಒಟ್ಟು ಮೊತ್ತವು ₹ 9,041.5 ಕೋಟಿ ಆಗುತ್ತದೆ. ಈ ಮೂವರು ಉದ್ಯಮಿಗಳಿಂದ ಆಗಿದೆ ಎನ್ನಲಾದ ವಂಚನೆಯ ಮೊತ್ತವು ₹ 22 ಸಾವಿರ ಕೋಟಿಗಿಂತ ಹೆಚ್ಚು.

ದೇಶಬಿಟ್ಟು ಪಲಾಯನ ಮಾಡಿರುವ ಮೆಹುಲ್‌ ಚೋಕ್ಸಿ, ನೀರವ್ ಮೋದಿ ಮತ್ತು ವಿಜಯ್ ಮಲ್ಯ ವಿರುದ್ಧ ಸಿಬಿಐ ಹಾಗೂ ಇ.ಡಿ. ತನಿಖೆ ನಡೆಸುತ್ತಿವೆ. ದೇಶದ ಬ್ಯಾಂಕಿಂಗ್ ವಲಯದಲ್ಲಿ ನಡೆದ ಅತಿದೊಡ್ಡ ವಂಚನೆ ಪ್ರಕರಣಗಳಲ್ಲಿ ಈ ಮೂವರು ಆರೋಪಿಗಳು.

ನೀರವ್ ಮೋದಿ ಮತ್ತು ಅವರ ಮಾವ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 13 ಸಾವಿರ ಕೋಟಿ ವಂಚಿಸಿದ್ದಾರೆ ಎಂಬ ಆರೋಪ ಇದೆ. ಮಲ್ಯ ಅವರು ತಮ್ಮ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪನಿ ಮೂಲಕ ₹ 9 ಸಾವಿರ ಕೋಟಿ ವಂಚಿಸಿದ್ದಾರೆ ಎಂಬ ಆರೋಪವಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಹೊಂದಿರುವ ಇ.ಡಿ., ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹ 18,170 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದರಲ್ಲಿ ವಿದೇಶದಲ್ಲಿ ಇದ್ದ ಆಸ್ತಿಗಳೂ ಸೇರಿವೆ.

‘ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಮೌಲ್ಯವು ಬ್ಯಾಂಕ್‌ಗಳಿಗೆ ಆಗಿರುವ ನಷ್ಟದ ಶೇಕಡ 80.45ರಷ್ಟು’ ಎಂದು ಇ.ಡಿ. ಹೇಳಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯಲ್ಲಿ, ಯುನೈಟೆಡ್ ಬ್ರೀವರೀಸ್‌ಗೆ ಸೇರಿದ ₹ 5,824 ಕೋಟಿ ಮೌಲ್ಯದ ಷೇರುಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಪರವಾಗಿ ಸಾಲ  ವಸೂಲಾತಿ ನ್ಯಾಯಮಂಡಳಿಯು (ಡಿಆರ್‌ಟಿ) ಬುಧವಾರ ಮಾರಾಟ ಮಾಡಿತು ಎಂದು ಇ.ಡಿ. ವಿವರ ನೀಡಿದೆ.

ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಸೂಚನೆ ಅನುಸಾರ ಇ.ಡಿ. ಅಧಿಕಾರಿಗಳು, ಯುನೈಟೆಡ್ ಬ್ರೀವರೀಸ್ ಕಂಪನಿಯ ₹ 6,624 ಕೋಟಿ ಮೌಲ್ಯದ ಷೇರುಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ವರ್ಗಾವಣೆ ಮಾಡಿದ್ದರು. ‘ಷೇರುಗಳ ಮಾರಾಟದ ಮೂಲಕ ಇನ್ನೂ ₹ 800 ಕೋಟಿ ವಸೂಲು ಶುಕ್ರವಾರದೊಳಗೆ ಆಗಲಿದೆ’ ಎಂದು ಇ.ಡಿ. ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು