ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸಿನ ಅಗತ್ಯಕ್ಕೆ ವ್ಯವಸ್ಥಿತ ವಿಮೆ

Last Updated 25 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಸಿಪ್’ ಎಂದ ಕೂಡಲೇ ಎಲ್ಲರೂ ಮ್ಯೂಚುವಲ್ ಫಂಡಗಳಿಗೆ ಸಂಬಂಧಿಸಿದ ಯೋಜನೆ (Systematic Investment Plan-SIP) ಎಂದೆ ತಿಳಿಯುತ್ತಾರೆ. ಅದು ನಿಜವೂ ಹೌದು. ಆದರೆ, ಜೀವ ವಿಮೆಯನ್ನು ಸಹಿತ ಒಂದು ಸಿಸ್ಟೆಮೆಟಿಕ್ ಇನ್ಷೂರೆನ್ಸ್ ಪ್ಲ್ಯಾನ್ ಎಂದೂ ಪಡೆಯಬಹುದು ಎನ್ನುವುದು ಬಹಳ ಜನರಿಗೆ ತಿಳಿದಿಲ್ಲ.

ಯಾವಾಗಲೋ ಒಂದು ಜೀವ ವಿಮಾ ಪಾಲಿಸಿ ಪಡೆದು ಎಲ್ಲಾ ಸಮಯಕ್ಕೂ ಅದೇ ಒಂದು ಜೀವ ವಿಮಾ ಪಾಲಿಸಿ ಅಂತಿಮ ಎಂದು ತಿಳಿಯುವುದು ಸರಿಯಲ್ಲ. ಏಕೆಂದರೆ ಜೀವನದ ಪ್ರತಿ ಹಂತದಲ್ಲಿ ಹಣಕಾಸು ಜವಾಬ್ದಾರಿಗಳು ಬದಲಾಗುತ್ತಿರುತ್ತವೆ. ಹಾಗೆಯೇ ಆದಾಯವೂ ಬೆಳೆಯುತ್ತಿರುತ್ತದೆ. ಹೀಗಾಗಿ ಕುಟುಂಬಕ್ಕೆ ಆರ್ಥಿಕ ರಕ್ಷಣೆಯ ಅವಶ್ಯಕತೆ ಹೆಚ್ಚಾಗುವ ಕಾರಣ ಜೀವ ವಿಮೆಯನ್ನು ಜೀವನದ ಪ್ರತಿಯೊಂದು ಪ್ರಮುಖ ಹಂತಗಳಲ್ಲಿ ಪುನರ್ ವಿಮರ್ಶಿಸಿ ಪಡೆಯುವುದು ವೈಯಕ್ತಿಕ ಹಣಕಾಸು ಯೋಜನೆಯಲ್ಲಿ ಮಹತ್ವದ ಸಂಗತಿಯಾಗಿದೆ.

ಮೊದಲೆಲ್ಲಾ ಅವಿಭಕ್ತ ಕುಟುಂಬಗಳಿದ್ದವು. ವ್ಯವಸಾಯ ಹಾಗೂ ವ್ಯವಹಾರಗಳಲ್ಲಿ ಒಂದಿಡೀ ಕುಟುಂಬವು ಭಾಗಿಯಾಗಿ ಜೀವನ ಸಾಗಿಸುತ್ತಿತ್ತು. ಹಾಗಾಗಿ ಜೀವ ವಿಮೆಯ ಬಗ್ಗೆ ಅಷ್ಟೊಂದು ವಿಚಾರ ಮಾಡುತ್ತಿರಲಿಲ್ಲ. ಈಗ ಉದ್ಯೋಗಾವಕಾಶಗಳು ಹೆಚ್ಚಾಗಿರುವುದರಿಂದ ಹಾಗೂ ಮೂರು- ನಾಲ್ಕು ಜನರಿರುವ ಪುಟ್ಟ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಕುಟುಂಬದ ಯಜಮಾನ ಅಂದರೆ ಕುಟುಂಬಕ್ಕೆ ಆದಾಯ ತರುವ ವ್ಯಕ್ತಿ ಹಾಗೂ ಕುಟುಂಬದ ಎಲ್ಲಾ ಸದಸ್ಯರು ಜೀವ ವಿಮೆ ಹೊಂದುವುದು ಬದುಕಿನ ಅನಿವಾರ್ಯಗಳಲ್ಲಿ ಒಂದಾಗಿದೆ.

ಯಾವುದೋ ಜೀವ ವಿಮೆಯ ಪಾಲಿಸಿ ಪಡೆಯುವ ಬದಲು, ನಮ್ಮ ಜೀವನದಲ್ಲಿ ಬರುವ ಮುಂದಿನ ಹಣಕಾಸು ಜವಾಬ್ದಾರಿಗಳನ್ನು ನೀಗಿಸಿಕೊಳ್ಳಲು ಜೀವ ವಿಮೆಯನ್ನು ವ್ಯವಸ್ಥಿತವಾಗಿ ಪಡೆದರೆ ಉತ್ತಮ.

ಉದ್ಯೋಗದ ಅಥವಾ ಆದಾಯ ಗಳಿಕೆಯ ಪ್ರಾರಂಭದ ದಿನಗಳಲ್ಲಿ ಅಷ್ಟೊಂದು ಹಣಕಾಸಿನ ಜವಾಬ್ದಾರಿಗಳಿರುವುದಿಲ್ಲ ಹಾಗೂ ದೀರ್ಘಾವಧಿಯವರೆಗೆ ಉದ್ಯೋಗದಲ್ಲಿರುವ ಕಾರಣ, ಪ್ರಾರಂಭದಲ್ಲಿ ದೀರ್ಘಕಾಲದವರೆಗೆ ಹೆಚ್ಚು ವಿಮಾ ರಕ್ಷಣೆ ನೀಡುವ ಎಂಡೋಮೆಂಟ್ ತರಹದ ಅಥವಾ ಜೀವನ್ ಆನಂದ್ (ಜೀವನದ ಜೊತೆಗೂ ಜೀವನದ ನಂತರವೂ ವಿಮಾ ರಕ್ಷಣೆ) ಪಾಲಿಸಿ ಪಡೆಯಬಹುದು. ಏಕೆಂದರೆ ದೀರ್ಘ ಕಾಲದ ವಿಮಾ ಅವಧಿ ಪಡೆದರೆ ಹೆಚ್ಚು ಮೊತ್ತದ ವಿಮಾ ರಕ್ಷಣೆ ಹಾಗೂ ಬೋನಸ್ ಮೊತ್ತದ ಕ್ರೋಡೀಕರಣವಾಗಿ ಕೊನೆಯಲ್ಲಿ ಆಕರ್ಷಕ ಮೊತ್ತವು ಕೈಸೇರುವುದು.ಇಂತಹ ವಿಮೆ ಯೋಜನೆಗಳನ್ನು ಸುಮಾರು 30ವರ್ಷಗಳ ಅವಧಿಗೆ ಪಡೆದರೆ ಒಳ್ಳೆಯದು.

ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುವ ಕಾರಣ ಖರ್ಚಿನ ಬಾಬತ್ತು ಹೆಚ್ಚುತ್ತದೆ. ಪ್ರತಿ ನಾಲ್ಕು ವರ್ಷ ಅಥವಾ ಐದು ವರ್ಷಗಳ ಅವಧಿಗೆ ಹಣ ಮರಳಿ ಪಡೆಯಲು ಮನಿಬ್ಯಾಕ್ ಪಾಲಿಸಿಯನ್ನು ಪಡೆಯಬಹುದು. ಇದರಿಂದ ನಿಗದಿತ ಸಮಯಕ್ಕೆ ಒಂದು ನಿಗದಿತ ಮೊತ್ತವು ಸಿಗುವುದರಿಂದ ಆಯಾ ಸಮಯದ ಅವಶ್ಯಕತೆಗೆ ಸಹಕಾರಿಯಾಗುತ್ತದೆ. ಮನಿಬ್ಯಾಕ್ ಪಾಲಿಸಿಗಳಲ್ಲಿ ನಿಗದಿತ ಅವಧಿಗೆ ನಿಗದಿತ ಮೊತ್ತ ನೀಡುವುದರ ಜೊತೆಗೆ ವಿಮಾ ರಕ್ಷಣೆಯು ಅವಧಿ ಮುಗಿಯುವವರೆಗೆ ಹಾಗೇ ಮುಂದುವರೆಯುತ್ತದೆ. ಅವಧಿಯ ನಂತರ ಉಳಿದ ವಿಮಾ ಮೊತ್ತ ಹಾಗೂ ಬೋನಸ್ ಎರಡೂ ಸೇರಿ ಉತ್ತಮ ಮೊತ್ತವು ತಮಗೆ ದೊರೆಯುತ್ತದೆ. ಈ ಯೋಜನೆಯನ್ನು 25ವರ್ಷಗಳ ಅವಧಿಗೆ ಪಡೆಯುವುದು ಉತ್ತಮ.

ದಾಂಪತ್ಯ ಜೀವನ ಪ್ರಾರಂಭವಾಗಿ ವರ್ಷ ಅಥವಾ ಎರಡು ವರ್ಷಗಳಲ್ಲಿ ಕುಟುಂಬಕ್ಕೆ ಪುಟ್ಟ ಕಂದನ ಆಗಮನವಾಗುವ ಸಮಯ. ಇಂತಹ ಸಂತಸದ ಸಮಯದ ಜೊತೆಗೆ ಹಣಕಾಸಿನ ಜವಾಬ್ದಾರಿಯು ಮತ್ತೆ ಹೆಚ್ಚಾಗುತ್ತದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಅವಶ್ಯ. ಮಕ್ಕಳಿಗಾಗಿ ಇರುವ ವಿಮಾ ಯೋಜನೆಗಳಲ್ಲಿ ಉಳಿತಾಯ ಮಾಡಿದರೆ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ.

ಹೂಡಿಕೆ ಹಾಗೂ ವಿಮೆ ರಕ್ಷಣೆಗಾಗಿ ಯುಲಿಪ್ ಪಾಲಿಸಿ ಪಡೆಯುವುದು ಉತ್ತಮ. ಯುಲಿಪ್ ಪಾಲಿಸಿಗಳಲ್ಲಿ ತುಂಬುವ ಪ್ರೀಮಿಯಂ ನಲ್ಲಿ ಸ್ವಲ್ಪ ಭಾಗ ವಿಮಾ ರಕ್ಷಣೆಗಾಗಿ ಮುರಿದುಕೊಂಡು ಹೆಚ್ಚಿನ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇವುಗಳಲ್ಲಿ ಪಾಲಿಸಿದಾರರು ಆಯ್ಕೆ ಮಾಡಿಕೊಂಡ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ದೀರ್ಘಾವಧಿಯವರೆಗೆ ಅಂದರೆ 15ರಿಂದ 20 ವರ್ಷಗಳ ಅವಧಿಯವರೆಗೆ ಪಾಲಿಸಿ ಪಡೆದರೆ ವಿಮಾ ರಕ್ಷಣೆಯ ಜೊತೆಗೆ ಫಂಡ್‌ ವ್ಯಾಲ್ಯೂ ಬೆಳೆದು ಮ್ಯಾಚುರಿಟಿ ಸಮಯದಲ್ಲಿ ಉತ್ತಮ ಮೊತ್ತ ಕೈ ಸೇರುತ್ತದೆ. ಕನಿಷ್ಠ ವಾರ್ಷಿಕ ಶೇ 10ರ ದರದಲ್ಲಿ ಹೂಡಿಕೆಯ ಮೊತ್ತವು ಗಳಿಕೆಯಾಗುವದರಲ್ಲಿ ಸಂಶಯವಿಲ್ಲ.

ಹಾಗೆಯೇ ಇಂದು ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳು ಸಿಗುವ ಕಾರಣ ವೈದ್ಯಕೀಯ ವೆಚ್ಚಗಳು ಹೆಚ್ಚಾಗಿವೆ. ಕುಟುಂಬದ ಎಲ್ಲರೂ ಸೇರಿ ಆರೋಗ್ಯ ವಿಮೆ ಪಡೆಯುವುದು ಸಹಿತ ಒಂದು ಜಾಣತನದ ನಿರ್ಧಾರವಾಗಿರಲಿದೆ.

ದುಡಿಮೆಯ ಒಂದು ಹಂತದಲ್ಲಿ ನಿವೃತ್ತಿಯನ್ನು ಪಡೆಯುವುದು ಅನಿವಾರ್ಯ. ಏಕೆಂದರೆ ವಯಸ್ಸಿನ ಕಾರಣಕ್ಕಾಗಿ ನಿವೃತ್ತಿ ಅನಿವಾರ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ಆದಾಯವೂ ಕಡಿಮೆಯಾಗುತ್ತದೆ. ಮಕ್ಕಳು ಸ್ವತಂತ್ರವಾಗಿ ತಮ್ಮ ಬದುಕಿನ ದಾರಿ ಕಂಡುಕೊಂಡ ನಂತರ ಪಾಲಕರ ಎಷ್ಟೋ ಜವಾಬ್ದಾರಿಗಳು ಮುಗಿಯುತ್ತವೆ. ಆದಾಯ ಗಳಿಸುವ ದಿನಗಳಲ್ಲಿ ನಿವೃತ್ತಿ ಯೋಜನೆಗಾಗಿ ಕೂಡಿಡುವುದು ಉತ್ತಮ. ಅಥವಾ ಕೂಡಿಟ್ಟ ಮೊತ್ತದಲ್ಲಿ ಪಿಂಚಣಿಗಾಗಿ ಒಂದೇ ಸಲ ಹೂಡಿಕೆ ಮಾಡಿ ಪಿಂಚಣಿ ಪಡೆಯಬಹುದು. ಇಲ್ಲವೇ ನಿವೃತ್ತಿಯ ಒಂದು ವಯಸ್ಸನ್ನು ನಿಗದಿಪಡಿಸಿಕೊಂಡು ಆದಾಯದ ದಿನಗಳಲ್ಲಿ ಪಿಂಚಣಿ ಯೋಜನೆಗಳಲ್ಲಿ ಉಳಿತಾಯ ಮಾಡಬೇಕು. ಸೇವಾ ನಿವೃತ್ತಿಯ ನಂತರ ನಿಯಮಿತವಾಗಿ ಪಿಂಚಣಿಯನ್ನು ಪಡೆಯಬಹುದು.

ಹೀಗೆ ಜೀವನದ ಪ್ರತಿ ಘಟ್ಟಗಳಲ್ಲಿ ಎದುರಾಗುವ ಹಣಕಾಸು ಅಗತ್ಯಗಳನ್ನು ಈಡೇರಿಸಿಕೊಳ್ಳಲು, ಎದುರಾಗುವ ಆಕಸ್ಮಿಕಗಳನ್ನು ಎದುರಿಸಲು ಆಯಾ ಕಾಲಘಟ್ಟದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ವ್ಯವಸ್ಥಿತವಾಗಿ (Systematic Insurance Plan -SIP) ವಿಮಾ ಪಾಲಿಸಿಗಳನ್ನು ಪಡೆದುಕೊಳ್ಳಲು ಮರೆಯಬಾರದು. ಇದರಿಂದ ಹಣಕಾಸು ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಜೆ.ಸಿ.ಜಾಧವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT