ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಯತ್ನ

Last Updated 19 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಸಿರಿಧಾನ್ಯಗಳು ಆಧುನಿಕ ಜೀವನ ಶೈಲಿಗೆ ಎಷ್ಟು ಪ್ರಸ್ತುತವಾಗಿವೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ವಹಿವಾಟು ಆರಂಭಿಸಿದ್ದ ಕೊಟ್ಟಾರಂ ಅಗ್ರೊ ಫುಡ್ಸ್‌, ಆರೇಳು ವರ್ಷಗಳಲ್ಲಿ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿ ಹೆಜ್ಜೆ ಇಡುತ್ತಿದೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಎಂಬಿಎ ಓದಿರುವ ಪ್ರಶಾಂತ್‌ ಪರಮೇಶ್ವರನ್‌ (39), ಅವರು ವಿದೇಶದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಾರುಕಟ್ಟೆ ತಂತ್ರ ಕರಗತ ಮಾಡಿಕೊಂಡು ಭಾರತಕ್ಕೆ ಮರಳಿದ ಅವರು, 2011ರಲ್ಲಿ ಈ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಸಿರಿಧಾನ್ಯಗಳಿಗೆ ಹೊಸ ರೂಪ ನೀಡುವುದು, ಮಾರುಕಟ್ಟೆ ಕಲ್ಪಿಸುವುದು, ಬೆಳೆಗಾರರಿಗೆ ನೆರವಾಗುವುದು, ಹೊಸ ತಲೆಮಾರಿನವರಿಗೂ ಈ ಉತ್ಪನ್ನಗಳು ಇಷ್ಟವಾಗುವ ರೀತಿಯಲ್ಲಿ ತಯಾರಿಸಿ ಪರಿಚಯಿಸುವುದಕ್ಕೆ ಸಂಸ್ಥೆ ಆದ್ಯತೆ ನೀಡಿದೆ. ಸಿರಿಧಾನ್ಯಗಳ ಬಳಕೆ ಹೆಚ್ಚಿಸುವ ಮತ್ತು ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಸಾಂಪ್ರದಾಯಿಕ ಸಿರಿಧಾನ್ಯಗಳನ್ನು ಆಧುನಿಕ ಭಾರತದ ಗ್ರಾಹಕರ ಹೊಸ ಜೀವನ ಶೈಲಿಯ ಅಗತ್ಯಗಳನ್ನು ಈಡೇರಿಸುವ ರೀತಿಯಲ್ಲಿ ಒದಗಿಸುವ ಉದ್ದೇಶದಿಂದ ಈ ಉದ್ದಿಮೆ ಆರಂಭಿಸಲಾಗಿತ್ತು. ಸೋಲ್‌ಫುಲ್ ಬ್ರ್ಯಾಂಡ್‌ ಹೆಸರಿನಡಿ ರಾಗಿಯನ್ನು ರುಚಿಕರ, ಸವಿಯಾದ ಆರೋಗ್ಯಕರ ತಿಂಡಿ ರೂಪದಲ್ಲಿ ಆಧುನಿಕ ಆಕರ್ಷಕ ಪ್ಯಾಕೇಜಿಂಗ್‌ನಲ್ಲಿ ಪೂರೈಸುತ್ತಿದೆ.

‘ದೇಶಿ ಸಾಂಪ್ರದಾಯಿಕ ಧಾನ್ಯಗಳನ್ನು ಆಧುನಿಕ ಜೀವನಶೈಲಿಗೆ ಸರಿಹೊಂದುವ ಹೊಸ ಬಗೆಯಲ್ಲಿ ಪರಿಚಯಿಸುವುದು ನನ್ನ ಈ ಉದ್ದಿಮೆಯ ಮುಖ್ಯ ಉದ್ದೇಶವಾಗಿದೆ. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆರೋಗ್ಯಕರ ರಾಗಿಯನ್ನು ಜನರು ಏಕೆ ಮತ್ತು ಹೇಗೆ ಸೇವಿಸಬೇಕು ಎನ್ನುವುದಕ್ಕೆ ಸೋಲ್‌ಫುಲ್‌ ಉತ್ಪನ್ನಗಳಲ್ಲಿ ಖಚಿತ ಉತ್ತರ ಇದೆ’ ಎಂದು ಪ್ರಶಾಂತ್‌ ಹೇಳುತ್ತಾರೆ.

‘ದೇಶವು ಈಗ ಹಸಿವು ತೃಪ್ತಿಪಡಿಸಿಕೊಳ್ಳುವ ಹಂತದಿಂದ ಪೌಷ್ಟಿಕಾಂಶಭರಿತ ಆಹಾರ ಸೇವಿಸುವ ಹಂತಕ್ಕೆ ಪ್ರಗತಿ ಕಂಡಿದೆ. ಹೆಚ್ಚು ಪೋಷಕಾಂಶಯುಕ್ತ ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸುವ ಉದ್ದಿಮೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯು, ಗ್ರಾಹಕರ ಬದಲಾದ ಆದ್ಯತೆಗಳನ್ನು ಪೂರೈಸುತ್ತಿದೆ.

‘ಸೋಲ್‌ಫುಲ್‌ ಬ್ರ್ಯಾಂಡ್‌ನಡಿ ರಾಗಿಯೂ ಒಳಗೊಂಡಂತೆ ವಿವಿಧ ಬಗೆಯ ದವಸ – ಧಾನ್ಯಗಳನ್ನು ಬಳಸಿ ವೈವಿಧ್ಯಮಯ ಉತ್ಪನ್ನಗಳನ್ನು ಈ ಉದ್ದಿಮೆ ಸಂಸ್ಥೆಯು ತಯಾರಿಸುತ್ತಿದೆ. ವಿಭಿನ್ನ ಬಗೆಯ ದವಸ ಧಾನ್ಯಗಳನ್ನು ಬಳಸಿ ತಯಾರಿಸಿರುವ ವೈವಿಧ್ಯಮಯ ಉತ್ಪನ್ನಗಳನ್ನು ಬೆಳಗಿನ ತಿಂಡಿ ಅಥವಾ ಅಲ್ಪೋಪಹಾರಕ್ಕೆ ಬಳಸಬಹುದಾಗಿದೆ. ಸಿರಿಧಾನ್ಯಗಳನ್ನು ಹದವಾಗಿ ಮಿಶ್ರಣ ಮಾಡಿ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಈ ಉತ್ಪನ್ನಗಳಿಗೆ ದುಬೈ, ಸಿಂಗಪುರ ಮತ್ತು ಅಮೆರಿಕದಿಂದಲೂ ಬೇಡಿಕೆ ಕೇಳಿ ಬಂದಿದೆ.

‘ಸಂಸ್ಥೆಯು ಚಿಣ್ಣರು, ಯುವ ಜನಾಂಗ ಮತ್ತು ವಯಸ್ಕರಿಗೂ ಇಷ್ಟವಾಗುವ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಿದೆ.
ಕ್ಯಾಲ್ಸಿಯಂ ಸಮೃದ್ಧಿಯಾಗಿರುವ ರಾಗಿ ಜತೆ ಪ್ರೋಟಿನ್‌ ಹೆಚ್ಚಿಗೆ ಇರುವ ಬೇಳೆ ಸೇರಿಸಿ ಪರಿಪೂರ್ಣ ಆಹಾರ ಉತ್ಪನ್ನ ತಯಾರಿಸಲಾಗುತ್ತಿದೆ. ಗ್ರಾಹಕರಿಗೆ ಇಷ್ಟವಾಗುವ ಆಧುನಿಕ ಮತ್ತು ಆಕರ್ಷಕ ಪ್ಯಾಕೇಜ್‌ ಮೂಲಕ ಈ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಈ ಉತ್ಪನ್ನಗಳ ತಯಾರಿಕೆಯಲ್ಲಿ ಪಾಶ್ಚಿಮಾತ್ಯ ವಿಧಾನದ ಬಳಕೆ ಇಲ್ಲ. ದೇಶಿ ವಿಧಾನದಲ್ಲಿಯೇ ರುಚಿಕರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ.

‘ರಾಗಿ ಬೈಟ್ಸ್‌, ರಾಗಿ ಫ್ಲೇಕ್ಸ್‌, ಮಿಲೆಟ್‌ ಮ್ಯೂಸಲಿ, ದೇಶಿ ಮ್ಯೂಸಲಿ, ಮಲ್ಟಿಗ್ರೇನ್‌ ಲೂಪೀಸ್‌ ಉತ್ಪನ್ನಗಳನ್ನು ಪರಿಚಯಿಸಿದೆ. ಒಟ್ಟು 4 ವಿಭಾಗಗಳಲ್ಲಿ 28 ಬಗೆಯ ಉತ್ಪನ್ನಗಳನ್ನು ಸಂಸ್ಥೆಯು ತಯಾರಿಸುತ್ತಿದೆ. ರಾಗಿ, ಬಾರ್ಲಿ, ಹುರಳಿ, ಕಡಲೆ ಸೇರಿದಂತೆ 12 ಬಗೆಯ ಧಾನ್ಯಗಳು ಮತ್ತು ಸಕ್ಕರೆ ಬದಲಿಗೆ ಬೆಲ್ಲ ಸೇರಿಸಿ ತಕ್ಷಣ ಸೇವಿಸಬಹುದಾದ ಆರೋಗ್ಯಕರ ಪೇಯ ಸ್ಮೂಥಿಕ್ಸ್‌ ತಯಾರಿಸಿ ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿದೆ. ಇದೊಂದು ಸೇವಿಸಲು (ರೆಡಿ ಟು ಡ್ರಿಂಕ್‌) ಸಿದ್ಧ ಪೇಯವಾಗಿದೆ. ಇದರ ಬೆಲೆ ₹ 30. ಒಂದು ಬಾರಿ ಸೇವಿಸಿದರೆ 4 ಗಂಟೆಗಳ ಕಾಲ ಹಸಿವು ಆಗುವುದಿಲ್ಲ’ ಎಂದು ಪ್ರಶಾಂತ್ ಭರವಸೆ ನೀಡುತ್ತಾರೆ.

‘ಸಿರಿಧಾನ್ಯಗಳ ವೈವಿಧ್ಯಮಯ ಉತ್ಪನ್ನಗಳ ದೇಶಿ ಮಾರುಕಟ್ಟೆ ಗಾತ್ರವು ₹ 10 ಸಾವಿರ ಕೋಟಿಗೂ ಹೆಚ್ಚು ಇದೆ.ಸಂಸ್ಥೆಯು ಸಿರಿಧಾನ್ಯಗಳ ಪ್ಯಾಕೇಜ್‌ ಫುಡ್‌ ವಿಭಾಗದಲ್ಲಿ ಮುಂಚೂಣಿಯಲ್ಲಿ ಇದೆ. ಸಿರಿಧಾನ್ಯಗಳನ್ನು ಗ್ರಾಹಕರಿಗೆ ಮರಳಿ ಪರಿಚಯಿಸುವುದೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಗ್ರಾಹಕರ ರುಚಿ, ವೈಜ್ಞಾನಿಕ ರೀತಿಯಲ್ಲಿ ಹೊಸ ತಂತ್ರಜ್ಞಾನ ಆಧರಿಸಿ ಈ ಉತ್ಪನ್ನಗಳನ್ನು ತಯಾರಿಸಲಾಗಿದೆ. ಈ ಉತ್ಪನ್ನಕ್ಕೆ ಐ.ಟಿ ಮತ್ತಿತರ ವಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಉತ್ತಮ ಬೇಡಿಕೆ ಇದೆ.

ರೈತರಿಂದ ನೇರವಾಗಿ ರಾಗಿ ಖರೀದಿಸಲಾಗುವುದು. ಸಂಸ್ಥೆಯ ಉತ್ಪನ್ನಗಳ ಬೆಲೆ ₹ 10 ರಿಂದ ₹ 500ವರೆಗೆ ಇದೆ. ಸಿರಿಧಾನ್ಯಗಳಿಂದ ರುಚಿಕರ, ಆರೋಗ್ಯಕರ ತಿಂಡಿಗಳನ್ನು ತಯಾರಿಸಲು ಸಂಸ್ಥೆ ಗಮನ ಕೇಂದ್ರೀಕರಿಸಿದೆ. ಇದುವರೆಗೆ ಈ ಉದ್ದಿಮೆಯಲ್ಲಿ ₹ 65 ಕೋಟಿ ಬಂಡವಾಳ ತೊಡಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT