ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ | ಸೂಚ್ಯಂಕಗಳ ದಾಖಲೆಯ ಓಟಕ್ಕೆ ತಡೆ

ಲಾಭ ಗಳಿಕೆಗೆ ಹೂಡಿಕೆದಾರರು ಗಮನ l ಏಷ್ಯಾದ ಮಾರುಕಟ್ಟೆಗಳಲ್ಲಿ ತಗ್ಗಿದ ವಹಿವಾಟು
Published 7 ಡಿಸೆಂಬರ್ 2023, 16:09 IST
Last Updated 7 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳ ಏಳು ದಿನಗಳ ಓಟಕ್ಕೆ ಗುರುವಾರ ತಡೆ ಬಿದ್ದಿತು. ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದು ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿನ ಇಳಿಮುಖ ಚಲನೆಯು ಭಾರತದಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು. 

ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರಿಂದ ಸೋಮವಾರದಿಂದ ಬುಧವಾರದವರೆಗೆ ಷೇರುಪೇಟೆಗಳಲ್ಲಿ ಗೂಳಿ ಓಟ ಜೋರಾಗಿತ್ತು. ಮೂರು ದಿನವೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಅಂತ್ಯಗೊಂಡಿತ್ತು. ಆದರೆ, ಗುರುವಾರ ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕಗಳು ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 132 ಅಂಶ ಇಳಿಕೆ ಕಂಡು 69,521 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇನ) ನಿ‍ಫ್ಟಿ 36 ಅಂಶ ಇಳಿಕೆ ಕಂಡು 20,901 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಹಣಕಾಸು ನೀತಿಯ ನಿರ್ಧಾರಗಳನ್ನು ಪ್ರಕಟಿಸಲಿದೆ. ಹೀಗಾಗಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದು ವಹಿವಾಟು ಇಳಿಕೆಗೆ ಕಾರಣವಾಯಿತು ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ತ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ವಲಯವಾರು ಎಫ್‌ಎಂಸಿಜಿ ಶೇ 0.85, ಲೋಹ ಶೇ 0.75 ಮತ್ತು ಟೆಕ್‌ ಶೇ 0.38ರಷ್ಟು ಇಳಿಕೆ ಕಂಡಿತು. ಯುಟಿಲಿಟಿ ಶೇ 3.16 ಮತ್ತು ವಿದ್ಯುತ್ ಶೇ 2.67ರಷ್ಟು ಗಳಿಕೆ ಕಂಡಿತು.

ಏಷ್ಯಾದ ಮಾರುಕಟ್ಟೆಗಳಲ್ಲಿ ನಿಕೇಯ್‌ ಶೇ 1.79, ಹಾಂಗ್‌ಕಾಂಗ್ ಮತ್ತು ಶಾಂಘೈ ಕಾಂಪೋಸಿಟ್‌ ಇಳಿಕೆ ಕಂಡಿತು.

ಬ್ರೆಂಟ್ ಕಚ್ಚಾ ತೈಲ ದರ ಶೇ 1.01ರಷ್ಟು ಏರಿಕೆ ಕಂಡು ಬ್ಯಾರಲ್‌ಗೆ 75.05 ಡಾಲರ್‌ಗೆ ತಲುಪಿತು.‌

ತಗ್ಗಿದ ಪೇಟಿಎಂ ಷೇರು ಮೌಲ್ಯ: ಪೇಟಿಎಂನ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ ಷೇರು ಗುರುವಾರದ ವಹಿವಾಟಿನಲ್ಲಿ ಶೆ 19ರವರೆಗೆ ಇಳಿಕೆ ಕಂಡಿತು.

₹50 ಸಾವಿರಕ್ಕಿಂತ ಕಡಿಮೆ ಮೊತ್ತದ ಸಾಲ ನೀಡಿಕೆಯನ್ನು ಕಡಿಮೆ ಮಾಡುವುದಾಗಿ ಮತ್ತು ಗರಿಷ್ಠ ಮೊತ್ತದ ಸಾಲ ನೀಡಿಕೆಗೆ ಗಮನ ಹರಿಸುವುದಾಗಿ ಕಂಪನಿ ಹೇಳಿಕೆ ನೀಡಿದೆ. ಇದು ಕಂಪನಿಯ ಷೇರು ಮೌಲ್ಯ ಇಳಿಕೆ ಕಾಣುವಂತೆ ಮಾಡಿದೆ.

ಬಿಎಸ್‌ಇನಲ್ಲಿ ಷೇರು ಮೌಲ್ಯ ಶೇ 18.69ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹661.30ಕ್ಕೆ ಇಳಿಕೆ ಕಂಡಿತು.

ಎಲ್‌ಐಸಿ ಮೌಲ್ಯ ₹4.96 ಲಕ್ಷ ಕೋಟಿ

ನವದೆಹಲಿ: ಜೀವ ವಿಮಾ ನಿಗಮದ (ಎಲ್‌ಐಸಿ) ಮಾರುಕಟ್ಟೆ ಬಂಡವಾಳ ಮೌಲ್ಯವು ಗುರುವಾರದ ವಹಿವಾಟಿನ ಒಂದು ಹಂತದಲ್ಲಿ ಮತ್ತೆ ₹5 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು. ವಹಿವಾಟಿನ ಅಂತ್ಯದ ವೇಳೆಗೆ ₹4.96 ಲಕ್ಷ ಕೋಟಿಗೆ ತಗ್ಗಿತು. ಕಂಪನಿಯು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದೇ ಮಾರುಕಟ್ಟೆ ಮೌಲ್ಯ ಹೆಚ್ಚಾಗಲು ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಬಿಎಸ್‌ಇನಲ್ಲಿ ಷೇರು ಮೌಲ್ಯ ಶೇ 5.34ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹785.50ಕ್ಕೆ ತಲುಪಿತು. ಎನ್‌ಎಸ್ಇನಲ್ಲಿ ಶೇ 5.25ರಷ್ಟು ಏರಿಕೆ ಕಂಡು ₹785.15ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಎಲ್‌ಐಸಿ ಷೇರು ಮೌಲ್ಯವು ಎನ್‌ಎಸ್‌ಇನಲ್ಲಿ 52 ವಾರಗಳ ಗರಿಷ್ಠ ಮಟ್ಟವಾದ ₹800ಕ್ಕೆ ತಲುಪಿತ್ತು. ಬಿಎಸ್ಇನ್ಲಿ ₹799.90ರಷ್ಟು ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT