ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕೋ ಬ್ಯಾಂಕ್‌ ಬೆಳ್ಳಿಹಬ್ಬ ಸಂಭ್ರಮ

Last Updated 1 ಜನವರಿ 2019, 19:30 IST
ಅಕ್ಷರ ಗಾತ್ರ

ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ ಹೈದರಾಬಾದ್‌ ಕರ್ನಾಟಕದ ಹೆಮ್ಮೆಯ ಸುಕೋ ಬ್ಯಾಂಕ್‌ ಈಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.

ಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ನೇತೃತ್ವದಲ್ಲಿ ಹದಿನೈದು ಸಮಾನ ಮನಸ್ಕರ ಸಹಕಾರ ಮನೋಭಾವದಿಂದ ರಾಯಚೂರು ಜಿಲ್ಲೆಯಲ್ಲಿ ಮೊದಲು ಹುಟ್ಟಿದ್ದು ಸಿಂಧನೂರು ಕನ್ಸುಮರ್‌ ಕೋ ಆಪರೇಟಿವ್‌ ಸೊಸೈಟಿಯ ಜನತಾ ಬಜಾರ್‌.

ಆಗಿನ ಕಾಲಕ್ಕೇ ದಿನಸಿ ವಸ್ತುಗಳನ್ನು ಶುದ್ಧೀಕರಿಸಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಿದ್ದರಿಂದ ದೊರೆತ ಯಶಸ್ಸು ಇಪ್ಪತ್ತೈದು ವರ್ಷಗಳ ಹಿಂದೆ ಸಿಂಧನೂರು ಅರ್ಬನ್ ಕೋ ಆಪರೇಟಿವ್‌ ಬ್ಯಾಂಕ್‌ ಆಗಿ ಜನ್ಮ ತಾಳಿತು. ಎಲ್ಲರ ಬಾಯಲ್ಲಿ ಸಂಕ್ಷಿಪ್ತವಾಗಿ ‘ಸುಕೋ ಬ್ಯಾಂಕ್‌’ ಆದ ಬಳಿಕ ಹೆಸರನ್ನು ‘ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್‌’ ಬದಲಾಯಿಸಿಕೊಂಡಿತು.

ಹೈ–ಕ ಭಾಗದಲ್ಲಿ ಸಹಕಾರಿ ಕ್ಷೇತ್ರವು ಹಾಸಿಗೆ ಹಿಡಿದ ರೋಗಿಯಂತಾಗಿದ್ದ ಸನ್ನಿವೇಶದಲ್ಲಿ, ನಷ್ಟದಲ್ಲಿದ್ದ ರಾಯಚೂರು ಜಿಲ್ಲಾ ಸಹಕಾರಿ ಮಧ್ಯವರ್ತಿ ಬ್ಯಾಂಕ್‌ನಿಂದ ಸಾಲ ಪಡೆದು, ಸಾಲ ಕೊಡಿಸಿ ಅದನ್ನು ಲಾಭದತ್ತ ಕೊಂಡೊಯ್ದ ಕೀರ್ತಿಯೂ ಸುಕೋ ಬ್ಯಾಂಕ್‌ನದ್ದೇ. ಇಂಥ ಹಲವು ಕಾರ್ಯಗಳಿಂದ ಸುಕೋ ಬ್ಯಾಂಕ್‌ ಸಹಕಾರಿ ಕ್ಷೇತ್ರದ ಕುರಿತು ಜನರಲ್ಲಿ ಮತ್ತೊಮ್ಮೆ ಭರವಸೆಯನ್ನು ಬಿತ್ತಿದೆ.

ದೇಶದಲ್ಲಿ ಆರ್ಥಿಕ ಉದಾರೀಕರಣ ನೀತಿ ಜಾರಿಗೊಳಿಸಿದ ಬಳಿಕ ಸಹಕಾರಿ ಬ್ಯಾಂಕ್‌ಗಳ ಆರಂಭಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಉತ್ತೇಜನ ನೀಡಲಾರಂಭಿಸಿತು. ಆ ಸಂದರ್ಭದಲ್ಲಿ ಹೊಸ ಬ್ಯಾಂಕ್‌ ಅನ್ನು ಸಿಂಧನೂರಿನಲ್ಲಿ ಆರಂಭಿಸಲು ಮಸ್ಕಿ ಅವರು ಅರ್ಜಿ ಸಲ್ಲಿಸಿದ್ದರು. ಹದಿನೈದು ದಿನದೊಳಗೆ ಇಪ್ಪತ್ತು ಲಕ್ಷ ರೂಪಾಯಿ ಷೇರು ಬಂಡವಾಳವನ್ನು ಸಂಗ್ರಹಿಸುವ ಷರತ್ತು ಮೀರಿ 29 ಲಕ್ಷವನ್ನು ಸಂಗ್ರಹಿಸಿದ್ದು ಕೂಡ ದಾಖಲೆಯೇ. ನಂತರ 1995ರ, ಮೇ 5ರಂದು ಬ್ಯಾಂಕ್‌ ಆರಂಭವಾಯಿತು.

ವಹಿವಾಟಿನೊಂದಿಗೆ ರೈತ ಪರವಾಗಿಯೂ ಕಾರ್ಯಕ್ರಮಗಳನ್ನು ರೂಪಿಸಿರುವ ಬ್ಯಾಂಕ್‌, ಜಮೀನಿನಲ್ಲಿ ಗೋದಾಮು, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ರೈತರಿಗೆ ಸಾಲ ನೀಡಿದೆ. ರೈತರನ್ನು ಉತ್ತೇಜಿಸಲು ಎರಡು ವರ್ಷಗಳಿಂದ ರೈತರನ್ನು ಪ್ರೋತ್ಸಾಹಿಸಲು ಸುಕೋ–ಕೃಷಿ ಸಂಚಾಲನ ಪ್ರಶಸ್ತಿಯನ್ನೂ ಸ್ಥಾಪಿಸಿದೆ.

‘ಬ್ಯಾಂಕಿನ ಈ ಎಲ್ಲ ಸಾಧನೆಗಳ ಹಿಂದೆ ಮನೋಹರ ಮಸ್ಕಿ ಅವರ ಪರಿಶ್ರಮ ದೊಡ್ಡದು’ ಎನ್ನುತ್ತಾರೆ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್ವರರಾವ್‌.

‘ಮಸ್ಕಿ ಅವರು ಸಹಕಾರಿ ರಂಗದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಯಲು ಸೌಹಾರ್ದ ಸಹಕಾರಿ ಕಾಯ್ದೆ ರೂಪುಗೊಳ್ಳಲು ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮೊದಲ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆಯ ಕಾರಣಕ್ಕೇ ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೂ ಆಯ್ಕೆಯಾಗಿದ್ದರು’ ಎಂದೂ ಅವರು ಹೇಳುತ್ತಾರೆ.

ಬೆಳ್ಳಿ ಹಬ್ಬದ ಕಾರ್ಯಕ್ರಮಗಳು ಇದೇ 5ರಿಂದ ಬಳ್ಳಾರಿಯಲ್ಲಿ ‘ಸುಸ್ಥಿರ ಕೃಷಿಗೆ ಓಟ’ದಿಂದ ಆರಂಭವಾಗಲಿದ್ದು ಒಂದು ವರ್ಷ ಕಾಲ ನಡೆಯಲಿವೆ.

ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್‌ನ ಪ್ರಥಮಗಳು

  1. * ದೇಶದ ಮೊದಲ ಸಂಪೂರ್ಣ ಗಣಕೀಕೃತ, ಹವಾನಿಯಂತ್ರಿತ ಬ್ಯಾಂಕ್‌
  2. * ತನ್ನ ನಿರ್ದೇಶಕರು ಹಾಗೂ ಅವರ ಸಂಬಂಧಿಗಳಿಗೆ ಬ್ಯಾಂಕಿನಲ್ಲಿ ಸಾಲ ನಿರ್ಬಂಧ, ನಿರ್ದೇಶಕರ ಸಂಬಂಧಿಗಳಿಗೆ ನೌಕರಿ ನಿರ್ಬಂಧ
  3. * ಸಿಬ್ಬಂದಿಗೆ ಕಾರ್ಯದಕ್ಷತೆಯ ಭತ್ಯೆ
  4. * ಐಎಸ್‌ಒ ಪ್ರಮಾಣೀಕೃತ ಮೊದಲ ಬ್ಯಾಂಕ್‌
  5. * ತನ್ನದೇ ಎಟಿಎಂ ಕಾರ್ಡ್‌ ನೀಡಿ, ಎಟಿಎಂ ಜಾಲಕ್ಕೆ ಸೇರ್ಪಡೆಗೊಂಡ ಬ್ಯಾಂಕ್‌
  6. * ಡಿಬಿಟಿಎಲ್‌ (ನೇರ ಸಬ್ಸಿಡಿ ವರ್ಗಾವಣೆ) ನೀಡಲು ಆರಂಭಿಸಿದ ಬ್ಯಾಂಕ್‌
  7. * ಮೊಬೈಲ್‌ ಬ್ಯಾಂಕಿಂಗ್‌ ಸೇವೆ ನೀಡುತ್ತಿರುವ ನಾನ್‌ ಷೆಡ್ಯೂಲ್ಡ್‌ ಬ್ಯಾಂಕ್‌
  8. * ದಶಮಾನೋತ್ಸವ ಸಂಭ್ರಮಕ್ಕೆ ನಟಿ ಅನುಪ್ರಭಾಕರ್‌ ಪ್ರಚಾರ ರಾಯಭಾರಿಯಾಗಿದ್ದರು
  9. * 2016ರ ಆರ್ಥಿಕ ವರ್ಷದ ಅಂತ್ಯಕ್ಕೆ ಕಲಬುರ್ಗಿ ವಿಭಾಗದಲ್ಲಿ ಅತಿಹೆಚ್ಚು ಸ್ವಂತ ಬಂಡವಾಳ ಹೊಂದಿರುವ ಹೈದರಾಬಾದ್‌ ಕರ್ನಾಟಕದ ಬ್ಯಾಂಕ್‌
  10. * ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮಹಾಮಂಡಳದ ಸುವರ್ಣ ಮಹೋತ್ಸವದಲ್ಲಿ ‘ಅತ್ಯುತ್ತಮ ಬ್ಯಾಂಕ್‌’ ಪ್ರಶಸ್ತಿ
  11. * ಸಂಕಷ್ಟದಲ್ಲಿದ್ದ ಹುಬ್ಬಳ್ಳಿಯ ದಿ ವರ್ಧಮಾನ್‌ ಕೋ–ಆಪ್‌ ಬ್ಯಾಂಕ್‌ ಹಾಗೂ ಬಳ್ಳಾರಿಯ ಮಹಿಳಾ ಶಕ್ತಿ ಸಹಕಾರ ಬ್ಯಾಂಕ್‌ ಅನ್ನು ವಿಲೀನಗಳಿಸಿಕೊಂಡ ಬ್ಯಾಂಕ್

1 ಸಾವಿರ ಕೋಟಿ ವಹಿವಾಟು ಗುರಿ

2018ರ ಅಂತ್ಯಕ್ಕೆ ಬ್ಯಾಂಕಿನಲ್ಲಿ ₹ 553 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ₹ 913 ಕೋಟಿ ವಹಿವಾಟು ನಡೆದಿದೆ. ಇದೇ ಆರ್ಥಿಕ ವರ್ಷದಲ್ಲಿ ₹ 1 ಸಾವಿರ ಕೋಟಿ ವಹಿವಾಟು ನಡೆಸುವ ಗುರಿ ಇದೆ. ಈಗಾಗಲೇ ₹ 5.20 ಕೋಟಿ ಲಾಭ ಗಳಿಸಿದೆ.

11 ಜಿಲ್ಲೆಗಳಲ್ಲಿ ಶಾಖೆ

2009ರಿಂದ ಬಳ್ಳಾರಿಯಲ್ಲಿ ಮುಖ್ಯಶಾಖೆಯನ್ನು ಹೊಂದಿರುವ ಬ್ಯಾಂಕ್‌, ರಾಯಚೂರು, ಕೊಪ್ಪಳ, ಧಾರವಾಡ, ಯಾದಗಿರಿ, ಕಲಬುರ್ಗಿ, ಚಿತ್ರದುರ್ಗ, ದಾವಣರೆಗೆ, ಹಾವೇರಿ, ಗದಗ ಮತ್ತು ಬೆಳಗಾವಿ ಸೇರಿ 11 ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಅದರೊಂದಿಗೆ, ಬೀದರ್‌, ವಿಜಯಪುರ, ಬಾಗಲಕೋಟೆ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗೂ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT