ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ

Published 22 ಏಪ್ರಿಲ್ 2024, 13:37 IST
Last Updated 22 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ನವದೆಹಲಿ: ‘ಆಶಾದಾಯಕ ಮಳೆಗಾಲ, ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಉತ್ತಮಗೊಂಡ ಜಾಗತಿಕ ವ್ಯವಹಾರಗಳಿಂದಾಗಿ ಭಾರತದ ಸುಸ್ಥಿರ ಆರ್ಥಿಕತೆಯು 2024–25ನೇ ಸಾಲಿನಲ್ಲಿ ಶೇ 7ರ ದರದಲ್ಲಿ ಬೆಳವಣಿಗೆ ಕಾಣಲಿದೆ’ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸದಸ್ಯ ಶಶಾಂಕ ಭಿಡೆ ಸೋಮವಾರ ಹೇಳಿದ್ದಾರೆ.

‘2023-24ನೇ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆ ಶೇ 8ರ ದರದಲ್ಲಿ ಬೆಳವಣಿಗೆ ಕಂಡಿತ್ತು. ಈ ಅವಧಿಯಲ್ಲಿ ತಯಾರಿಕೆ ಮತ್ತು ನಿರ್ಮಾಣ ಕ್ಷೇತ್ರದ ಬೆಳವಣಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದವು. ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆಗೆ ಕೃಷಿ ವಲಯದ ಕೊಡುಗೆ ಹೆಚ್ಚಿನದ್ದಾಗಿರಲಿದೆ’ ಎಂದು ಅವರು ಅಂದಾಜಿಸಿದ್ದಾರೆ.

‘ದೀರ್ಘಕಾಲದಲ್ಲಿ ಉತ್ಪಾದನಾ ಕ್ಷೇತ್ರ ಉತ್ತಮವಾಗಿದ್ದಲ್ಲಿ ಆಹಾರ ಪದಾರ್ಥಗಳ ಬೆಲೆಯೂ ಸ್ಥಿರತೆ ಕಾಯ್ದುಕೊಳ್ಳಲಿದೆ. ಜಾಗತಿಕ ಮಾರುಕಟ್ಟೆಯ ಮಂದಗತಿಯ ಚೇತರಿಕೆ ಹಾಗೂ ಪೂರಕ ಸರಪಳಿಯ ಅಡಚಣೆಯೂ ಇದರೊಂದಿಗಿದೆ. ಜಾಗತಿಕ ರಾಜಕೀಯ ಸಂಘರ್ಷಗಳು ಶೀಘ್ರದಲ್ಲಿ ಕೊನೆಯಾಗದಿದ್ದಲ್ಲಿ, ಬೆಲೆ ಏರಿಕೆಯ ಬಿಸಿ ಮುಂದುವರಿಯಲಿದೆ’ ಎಂದು ಭಿಡೆ ಹೇಳಿದ್ದಾರೆ.

‘ಭಾರತದ ಆರ್ಥಿಕ ಪ್ರಗತಿ ಶೇ 6.8ರಷ್ಟು ಇರಲಿದೆ ಎಂದು ಐಎಂಎಫ್‌ ಹೇಳಿದೆ. ದೇಶೀಯ ಬೇಡಿಕೆ ಹಾಗೂ ಹೆಚ್ಚುತ್ತಿರುವ ವೃತ್ತಿನಿರತರ ವಯೋಮಾನವೂ ದೇಶದ ಒಟ್ಟಾರೆ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಕೂಡಾ ದೇಶದ ಆರ್ಥಿಕ ಬೆಳವಣಿಗೆ ಶೇ 6.7ರಿಂದ 7ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. ಈ ಬೆಳವಣಿಗೆಯು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಾರ್ವಜನಿಕರ ಹೂಡಿಕೆ ಪ್ರಮಾಣ ಹಾಗೂ ಗ್ರಾಹಕ ವಲಯದಲ್ಲಿನ ಮಂದ ಬೆಳವಣಿಗೆಗಳು ಇದಕ್ಕೆ ಕಾರಣವಾಗಲಿವೆ’ ಎಂದು ವಿವರಿಸಿದ್ದಾರೆ.

ಏರುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಭಿಡೆ, ‘ಇದಕ್ಕೆ ಪ್ರಮುಖ ಕಾರಣ ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಅಸಮರ್ಪಕ ಮಳೆ ಸುರಿಯುವಿಕೆ. ಇದರಿಂದ ಕೊಳೆಯಬಹುದಾದ ತರಕಾರಿ ಬೆಲೆ ಅನಿಯಂತ್ರಿತವಾಗಿದೆ. ಆದಾಗ್ಯೂ, ಈ ಬೆಲೆ ಏರಿಕೆಯು ತಾತ್ಕಾಲಿಕ, ಆದರೂ ಪರಿಣಾಮಕಾರಿ. ಇಂಥ ಕೊಳೆಯಬಹುದಾದ ಪದಾರ್ಥಗಳನ್ನು ಮೊದಲೇ ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿದಲ್ಲಿ ಇಂಥ ನಷ್ಟಗಳನ್ನು ತಡೆಗಟ್ಟಬಹುದು’ ಎಂದಿದ್ದಾರೆ.

‘ಕೆಲವೊಂದು ನೀತಿ ನಿರೂಪಣೆಯಿಂದಾಗಿ ಕಳೆದ ಕೆಲ ವರ್ಷಗಳಿಂದ ವಿದೇಶಿ ನೇರ ಬಂಡವಾಳ ಹೂಡಿಕೆಯು ಉತ್ತಮ ಸ್ಥಿತಿಯಲ್ಲಿದೆ. ಆದರೆ ಜಾಗತಿಕ ಬೇಡಿಕೆಯು ಮಂದಗತಿಯಲ್ಲಿದ್ದರೂ ಭಾರತದಲ್ಲಿನ ಹೂಡಿಕೆಯೂ ಅದೇ ರೀತಿ ಸಾಗಬೇಕೆಂದೇನೂ ಇಲ್ಲ. ಚೀನಾಕ್ಕೆ ಹೋಲಿಸಿದಲ್ಲಿ, ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಭಾರತ ಆಕರ್ಷಿಸುತ್ತಿದೆ’ ಎಂದಿದ್ದಾರೆ.

‘2024–25ರಲ್ಲಿ ಬೆಲೆ ಏರಿಕೆ ಪ್ರಮಾಣವು ಶೇ 4.5ರ ದರದಲ್ಲಿ ಇರಲಿದೆ. 2023–24ರಲ್ಲಿ ಇದು ಶೇ 5.4ರಷ್ಟಿತ್ತು. 2022–23ರಲ್ಲಿ ಇದು ಶೇ 6.7ರಷ್ಟಿತ್ತು’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಹೇಳಿದ್ದರು. 

ಈ ನಡುವೆ ಚೀನಾದಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ. 2022ರಿಂದ ಮೊದಲ ಒಂಭತ್ತು ತಿಂಗಳಲ್ಲಿ ಇದರ ಪ್ರಮಾಣ ಶೇ 12.5ರಷ್ಟು ಕುಸಿದಿದೆ. 2023ರಲ್ಲಿ ಶೇ 1.7ರಷ್ಟು ಕುಸಿದಿದೆ. ಆದರೆ ಇದೇ ಅವಧಿಯಲ್ಲಿ ಅಮೆರಿಕ, ಕೆನಡಾ, ಮೆಕ್ಸಿಕೊ, ಬ್ರೆಜಿಲ್, ಪೊಲ್ಯಾಂಡ್ ಹಾಗೂ ಜರ್ಮನಿಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT