ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಬ್ಯಾಸ್ಕೆಟ್‌ನಲ್ಲಿ ಟಾಟಾ ಗ್ರೂಪ್ ಶೇ 68ರಷ್ಟು ಪಾಲು; ₹9,500 ಕೋಟಿ ಹೂಡಿಕೆ

Last Updated 17 ಫೆಬ್ರುವರಿ 2021, 4:49 IST
ಅಕ್ಷರ ಗಾತ್ರ

ನವದೆಹಲಿ: ದಿನಸಿ ವಸ್ತುಗಳನ್ನು ಪೂರೈಸುವ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ 'ಬಿಗ್‌ಬ್ಯಾಸ್ಕೆಟ್‌'ನಲ್ಲಿ ಟಾಟಾ ಗ್ರೂಪ್‌ ಸುಮಾರು ₹9,500 ಕೋಟಿ ಹೂಡಿಕೆ ಮಾಡುವ ಮೂಲಕ ಶೇ 68ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳುತ್ತಿದೆ.

ಸಾಲ್ಟ್‌ ಟು ಸಾಫ್ಟ್‌ವೇರ್‌ (ಉಪ್ಪಿನಿಂದ ಸಾಫ್ಟ್‌ವೇರ್‌ ವರೆಗೂ) ಎಲ್ಲ ವಲಯಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಟಾ ಗ್ರೂಪ್‌, ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ–ಕಾಮರ್ಸ್‌ನಲ್ಲಿ ವಹಿವಾಟು ವಿಸ್ತರಿಸಿಕೊಳ್ಳುವ ಭಾಗವಾಗಿ ಬಿಗ್‌ಬ್ಯಾಸ್ಕೆಟ್‌ನಲ್ಲಿ ಗರಿಷ್ಠ ಪಾಲುದಾರಿಕೆ ಪಡೆಯಲು ಮುಂದಾಗಿದೆ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಬಿಗ್‌ಬ್ಯಾಸ್ಕೆಟ್‌ನೊಂದಿಗೆ ಈಗ ಒಪ್ಪಂದಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಮೂಲಕ ಜಾಕ್‌ ಮಾ ನಿಯಂತ್ರಿತ ಅಲಿಬಾಬಾ ಸೇರಿದಂತೆ ಹಲವು ಹೂಡಿಕೆದಾರರು ಬಿಗ್‌ಬ್ಯಾಸ್ಕೆಟ್‌ನಿಂದ ಹೂಡಿಕೆ ಹಿಂಪಡೆಯುವ ಹಾದಿ ಸೃಷ್ಟಿಯಾಗಿದೆ. ಈ ಬಗ್ಗೆ ಟಾಟಾ ಗ್ರೂಪ್‌, ಬಿಗ್‌ಬ್ಯಾಸ್ಕೆಟ್‌ ಹಾಗೂ ಅಲಿಬಾಬಾ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಆನ್‌ಲೈನ್‌ ಶಾಪಿಂಗ್‌ ವ್ಯವಸ್ಥೆ ವೇಗ ಪಡೆದುಕೊಂಡಿರುವ ಬೆನ್ನಲ್ಲೇ ಈ ಒಪ್ಪಂದ ನಡೆದಿದೆ. ಟಾಟಾ ಗ್ರೂಪ್‌ನ ಸ್ವಾಧೀನ ಪ್ರಕ್ರಿಯೆಯಿಂದಾಗಿ ಬಿಗ್‌ಬ್ಯಾಸ್ಕೆಟ್‌ ಉದ್ಯಮದ ಮೌಲ್ಯ ₹13,500 ಕೋಟಿಯಾಗಿದೆ.

ದೇಶದಲ್ಲಿ ಅಮೆಜಾನ್‌, ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಇ–ಕಾಮರ್ಸ್‌ ವಲಯದಲ್ಲಿ ಪ್ರಾಬಲ್ಯ ಸಾಧಿಸಿವೆ. ರಿಲಯನ್ಸ್‌ ರಿಟೇಲ್‌ ಸಹ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಗ್ರಾಹಕರಿಗೆ ಅಗತ್ಯವಾದ ಎಲ್ಲ ವಸ್ತುಗಳು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಗೆ ಸಿಗುವಂತೆ ಮಾಡುವ 'ಸೂಪರ್‌ ಆ್ಯಪ್‌' ಅನ್ನು ಟಾಟಾ ಗ್ರೂಪ್‌ ಅಭಿವೃದ್ಧಿ ಪಡಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ವರಿದಿಯಾಗಿದೆ.

2019ರ ಮಾರ್ಚ್‌ನಲ್ಲಿ ಬಿಗ್‌ಬ್ಯಾಸ್ಕೆಟ್‌ ಅಲಿಬಾಬಾ, ಮಿರೆ, ಸಿಡಿಸಿ ಗ್ರೂಪ್‌ನಿಂದ 150 ಮಿಲಿಯನ್‌ ಅಮೆರಿಕನ್‌ ಡಾಲರ್‌ ಸಂಗ್ರಹಿಸಿತು. ಆ ಮೂಲಕ 1 ಬಿಲಿಯನ್‌ ಡಾಲರ್‌ಗಿಂತ ಅಧಿಕ ಮೌಲ್ಯವಿರುವ ಸಂಸ್ಥೆಯಾಗಿ ಬಿಗ್‌ಬ್ಯಾಸ್ಕೆಟ್‌, ಯೂನಿಕಾರ್ನ್‌ ಕ್ಲಬ್‌ಗೆ ಸೇರ್ಪಡೆಯಾಯಿತು. ಸಂಗ್ರಹಿತ ಮೊತ್ತವನ್ನು ಪೂರೈಕೆ ಜಾಲ ವಿಸ್ತರಿಸಿಕೊಳ್ಳಲು ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿತ್ತು.

2011ರಲ್ಲಿ ಸ್ಥಾಪಿಸಲಾದ ಬಿಗ್‌ಬ್ಯಾಸ್ಕೆಟ್‌ ಭಾರತದ 25 ನಗರಗಳಲ್ಲಿ ಕಾರ್ಯಾಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT