ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಟೆಸ್ಲಾ ಘಟಕ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾಹಿತಿ

Last Updated 13 ಫೆಬ್ರುವರಿ 2021, 16:50 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮೆರಿಕದ ಟೆಸ್ಲಾ ಕಂಪನಿ ಎಲೆಕ್ಟ್ರಿಕಲ್‌ ಕಾರು ತಯಾರಿಕಾ ಘಟಕವನ್ನು ಕರ್ನಾಟಕದಲ್ಲಿ ತೆರೆಯಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿರುವ ಮುಖ್ಯಾಂಶಗಳನ್ನು ಪಟ್ಟಿ ಮಾಡಿರುವ ಯಡಿಯೂರಪ್ಪ, ಆ ಪಟ್ಟಿಯಲ್ಲಿ ಟೆಸ್ಲಾ ಕಂಪನಿ ಎಲೆಕ್ಟ್ರಿಕಲ್‌ ಕಾರು ತಯಾರಿಕಾ ಘಟಕ ತೆರೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿರುವುದು ಕುತೂಹಲ ಮೂಡಿಸಿದೆ.

ಟೆಸ್ಲಾ ಕಂಪನಿ ಕಳೆದ ತಿಂಗಳು ‘ಟೆಸ್ಲಾ ಇಂಡಿಯಾ ಮೋಟಾರ್ಸ್‌ ಆ್ಯಂಡ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಯನ್ನು ಬೆಂಗಳೂರಿನಲ್ಲಿ ನೋಂದಣಿ ಮಾಡಿಕೊಂಡಿದೆ. ಬಳಿಕ, ಈ ಬಗ್ಗೆ ಟ್ವೀಟ್‌ ಮಾಡಿದ್ದ ಯಡಿಯೂರಪ್ಪ, ಎಲೆಕ್ಟ್ರಿಕ್‌ ಕಾರ್‌ ದೈತ್ಯ ಬೆಂಗಳೂರಿನಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ
ಆರಂಭಿಸುತ್ತಿದೆ’ ಎಂದಿದ್ದರು. ತಕ್ಷಣವೇ ಆ ಟ್ವೀಟ್‌ನ್ನು ಅಳಿಸಿಹಾಕಿದ್ದು, ಚರ್ಚೆಗೂ ಕಾರಣವಾಗಿತ್ತು. ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಟೆಸ್ಲಾ ಹೂಡಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

‘ತುಮಕೂರಿನಲ್ಲಿ ₹ 7,725 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್‌ (ಸಣ್ಣ ಸಣ್ಣ ಕೇಂದ್ರಗಳ) ನಿರ್ಮಾಣದಿಂದ 2.80 ಲಕ್ಷ ಉದ್ಯೋಗಾವಕಾಶ ಸಿಗಲಿದೆ’ ಎಂದೂ ಯಡಿಯೂರಪ್ಪ ಹೇಳಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಪಾಲಿಗೆ ಆಗಿರುವ ಲಾಭಗಳನ್ನು ಪಟ್ಟಿ ಮಾಡಿರುವ ಅವರು, ‘ರಾಜ್ಯದಲ್ಲಿ 1,197 ಕಿ.ಮೀ ಉದ್ದದ ಹೆದ್ದಾರಿ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ₹ 10,904 ಕೋಟಿ ಕೇಂದ್ರದಿಂದ ಸಿಗಲಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗ
ದಲ್ಲಿ ₹ 21 ಸಾವಿರ ಕೋಟಿ ವೆಚ್ಚದಲ್ಲಿ13 ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಒಪ್ಪಿಗೆ ನೀಡಿದೆ’ ಎಂದಿದ್ದಾರೆ.

‘2021–22ರಲ್ಲಿ ರಾಜ್ಯದಲ್ಲಿ ₹ 1,16,144 ಕೋಟಿಯಲ್ಲಿ ಮೂಲಸೌಕರ್ಯ ವ್ಯವಸ್ಥೆ ನಿರ್ಮಿಸಲಾಗುವುದು. 2ನೇ ಹಂತದ ಬೆಂಗಳೂರು ಮೆಟ್ರೊ ಯೋಜನೆಗೆ ₹ 14,788 ಕೋಟಿ, ಬೆಂಗಳೂರು ಉಪನಗರ ಯೋಜನೆಗೆ ₹ 23,093 ಕೋಟಿ, ರೈಲ್ವೆ ಯೋಜನೆಗಳಿಗೆ ₹ 4,870 ಕೋಟಿ ಸಿಗಲಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಕೊಚ್ಚಿ– ಮಂಗಳೂರು ಗ್ಯಾಸ್‌ ಪೈಪ್‌ಲೈನ್‌ ಲೋಕಾರ್ಪಣೆ ಮಾಡಲಾಗಿದ್ದು, ಬೆಂಗಳೂರು– ಮಂಗಳೂರು ಸಂಪರ್ಕ ಕೊಂಡಿ
ಯಾಗಿರುವ ಶಿರಾಡಿ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 13 ಕಿ.ಮೀ ಉದ್ದದ ಆರು ಸುರಂಗ ಮಾರ್ಗ, 1.5 ಕಿ.ಮೀ ಉದ್ದದ 10 ಸೇತುವೆಗಳ ನಿರ್ಮಾಣಕ್ಕೆ ₹ 10 ಸಾವಿರ ಕೋಟಿ ಬಿಡುಗಡೆ ಆಗಲಿದೆ’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT