ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ವಿದೇಶಿ ಹೂಡಿಕೆಗೆ ಅಡ್ಡಿ ಸಂಭವ

Published 27 ಆಗಸ್ಟ್ 2023, 0:37 IST
Last Updated 27 ಆಗಸ್ಟ್ 2023, 0:37 IST
ಅಕ್ಷರ ಗಾತ್ರ

ಬೆಂಗಳೂರು: ಆಗಸ್ಟ್‌ ತಿಂಗಳಿನಲ್ಲಿ ಮುಂಗಾರು ದುರ್ಬಲ ಆಗಿರುವುದು ಹಾಗೂ ಎಲ್ಲೆಡೆಯೂ ಸಮನಾಗಿ ಮಳೆಯಾಗದೇ ಇರುವುದರಿಂದಾಗಿ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ. ಇದು ಷೇರುಪೇಟೆ ಮತ್ತು ವಿದೇಶಿ ಹೂಡಿಕೆಯ (ಎಫ್‌ಪಿಐ) ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ಆಹಾರ ವಸ್ತುಗಳ ದರವು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿರುವುದರಿಂದ ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಶೇ 7.44ಕ್ಕೆ ಏರಿಕೆ ಕಾಣುವ ಮೂಲಕ 15 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದೀಗ ಆಗಸ್ಟ್‌ನಲ್ಲಿ ಮಳೆ ಸುರಿಯುವ ಪ‍್ರಮಾಣ ಕಡಿಮೆ ಆಗುವ ಜೊತೆಗೆ ಎಲ್ಲೆಡೆಯೂ ಸಮನಾಗಿ ಮಳೆ ಆಗಿಲ್ಲ. ಹೀಗಾಗಿ ಹಣದುಬ್ಬರವು ಆಗಸ್ಟ್‌ನಲ್ಲಿಯೂ ಗರಿಷ್ಠ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಒಳಹರಿವು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆದಾರರು ಆಗಸ್ಟ್‌ ತಿಂಗಳಿನಲ್ಲಿ ಭಾರತದ ಬಂಡವಾಳ ಮಾರುಕಟ್ಟೆಯಿಂದ ಬಂಡವಾಳ ಹಿಂತೆಗೆತವನ್ನು ಮುಂದುವರಿಸಿದ್ದಾರೆ. ಆಗಸ್ಟ್‌ 1ರಿಂದ 26ರವರೆಗೆ ನಡೆದಿರುವ ವಹಿವಾಟಿನಲ್ಲಿ ₹15,817 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಮೆರಿಕದ ಡಾಲರ್ ಮೌಲ್ಯ ವೃದ್ಧಿಸುತ್ತಿರುವುದು ಹಾಗೂ ಅಮೆರಿಕದ ಬಾಂಡ್ ಗಳಿಕೆಯು ಶೇ 4.25ರ ಮಟ್ಟದಲ್ಲಿಯೇ ಇರುವುದು ಬಂಡವಾಳ ಹೊರಹರಿವಿಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ವಿದೇಶಿ ಹೂಡಿಕೆದಾರರು ಆರಂಭದಲ್ಲಿ ಬಂಡವಾಳ ಸರಕುಗಳಿಗೆ ಸಂಬಂಧಿಸಿದ ಷೇರುಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದರು. ನಂತರ ಹಣಕಾಸಿಗೆ ಸಂಬಂಧಿಸಿದ ಷೇರುಗಳನ್ನು ಮಾರಾಟ ಮಾಡಿದರು. ಡಾಲರ್‌ ಮೌಲ್ಯ ವೃದ್ಧಿ ಮತ್ತು ಅಮೆರಿಕದ ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುದರಿಂದ ಅಲ್ಪಾವಧಿಯಲ್ಲಿ ವಿದೇಶಿ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಲ್ಲಿ ಮಾರಾಟವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿಜಯಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಸತತ ಐದನೇ ವಾರವೂ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿದೆ. ಆಗಸ್ಟ್‌ 25ಕ್ಕೆ ಕೊನೆಗೊಂಡ ವಾರದಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 62 ಅಂಶ ಇಳಿಕೆ ಕಂಡಿದ್ದರೆ ನಿಫ್ಟಿ 44 ಅಂಶ ಇಳಿಕೆ ಆಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆ ವಿವರ (ಕೋಟಿಗಳಲ್ಲಿ)

ಆಗಸ್ಟ್‌ 21- ₹1,901

ಆಗಸ್ಟ್‌ 22- ₹495

ಆಗಸ್ಟ್‌ 23- ₹614 ಖರೀದಿ

ಆಗಸ್ಟ್‌ 24 - ₹1,525 ಖರೀದಿ

ಆಗಸ್ಟ್‌ 25 - ₹4,638

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT