ಶನಿವಾರ, ಜನವರಿ 16, 2021
24 °C

₹14 ಸಾವಿರ ದಾಟಿದ ಕೊಬ್ಬರಿ ಬೆಲೆ

ಸುಪ್ರತೀಕ್ ಎಚ್.ಬಿ. Updated:

ಅಕ್ಷರ ಗಾತ್ರ : | |

Prajavani

ತಿಪಟೂರು (ತುಮಕೂರು): ಬಹುದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಕೊಬ್ಬರಿ ಬೆಲೆ ಕೊಂಚ ಏರಿಕೆ ಕಂಡಿದ್ದು, ಕ್ವಿಂಟಲ್ ದರ ₹14 ಸಾವಿರ ಗಡಿ ದಾಟಿದೆ. ಅರಸೀಕೆರೆಯಲ್ಲಿ ಮಂಗಳವಾರ ಕ್ವಿಂಟಲ್ ಕೊಬ್ಬರಿ ಬೆಲೆ ₹14,070ಕ್ಕೆ ಏರಿಕೆಯಾಗಿದೆ.

ಲಾಕ್‍ಡೌನ್‌ಗೂ ಮೊದಲು ಕ್ವಿಂಟಲ್‌ಗೆ ₹ 10,500 ದರ ಇತ್ತು. ನಂತರ ಖರೀದಿ ಪುನರಾರಂಭಗೊಂಡಾಗ ಕ್ವಿಂಟಲ್‌ಗೆ ₹ 11,200ಕ್ಕೆ ಏರಿಕೆಯಾಗಿತ್ತು. ಆದರೆ, ದರ ₹8,800ಕ್ಕೆ ಕುಸಿದಿತ್ತು.

ಸುಮಾರು 3-4 ತಿಂಗಳು ಕೊಬ್ಬರಿಯ ಬೆಲೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ಕೊಬ್ಬರಿ ಖರೀದಿ ಕೇಂದ್ರ (ನಾಫೆಡ್‌) ನಿಗದಿ ಮಾಡಿದ ಬೆಲೆಗಿಂತ ಕಡಿಮೆ ಇತ್ತು. ನಾಫೆಡ್‌ ಕೊಬ್ಬರಿ ಖರೀದಿ ಕೇಂದ್ರ ಕಾರ್ಯಾರಂಭವಾದ ಬಳಿಕ ₹11 ಸಾವಿರ ಮತ್ತು ದೀಪಾವಳಿ ಸಂದರ್ಭದಲ್ಲಿ ₹13 ಸಾವಿರದ ಆಸುಪಾಸಿನಲ್ಲಿತ್ತು. ದೀಪಾವಳಿ ನಂತರ ಬೆಲೆ ಕಡಿಮೆಯಾಗಬಹುದೆಂಬ ಆತಂಕದಲ್ಲಿ ರೈತರು ಈಗಾಗಲೇ ಕೊಬ್ಬರಿ ಮಾರಾಟ ಮಾಡಿದ್ದಾರೆ. ಕೊಬ್ಬರಿ ಹೆಚ್ಚು ಬಳಸುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಲಾಕ್‍ಡೌನ್ ಸಡಿಲಿಕೆ ನಂತರ ಕೊಬ್ಬರಿ ಬೇಡಿಕೆ ಕೊಂಚ ಏರಿಕೆಯಾಗಿ, ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ವರ್ತಕರು.

*

ಇದೇ ಬೆಲೆ ಸಿಕ್ಕರೆ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ನಾಫೆಡ್‍ ಮೂಲ ಬೆಲೆ ಏರಿಕೆ ಮಾಡಿದರೆ ಬೆಲೆ ಕುಸಿತ ತಡೆಯಬಹುದು.
-ತಿಮ್ಲಾಪುರ ದೇವರಾಜು, ಹಸಿರುಸೇನೆ ತಾಲ್ಲೂಕು ಅಧ್ಯಕ್ಷ

*

ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಿ ಕ್ವಿಂಟಲ್ ಕೊಬ್ಬರಿಗೆ ನಾಫೆಡ್‍ ಮೂಲ ಬೆಲೆಯನ್ನು ₹15,000ಕ್ಕೆ ನಿಗದಿಪಡಿಸಬೇಕು.
-ಮಧುಸೂದನ್, ಎಪಿಎಂಸಿ ನಿರ್ದೇಶಕ, ತಿಪಟೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು