ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಆರ್ಥಿಕತೆ ಪುನಶ್ಚೇತನ: ಪಿಚೈ, ನಾದೆಲ್ಲ ಸೇರಿ ಆರು ಭಾರತ ಸಂಜಾತರ ನೇಮಕ

ಅಮೆರಿಕದ ಆರ್ಥಿಕತೆ ಚೇತರಿಕೆಗೆ ತಂಡ ರಚಿಸಿದ ಟ್ರಂಪ್‌
Last Updated 16 ಏಪ್ರಿಲ್ 2020, 3:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಡೊನಾಲ್ಡ್‌ ಟ್ರಂಪ್‌ ಸರ್ಕಾರವು ರಚಿಸಿರುವ ಉದ್ಯಮ ದಿಗ್ಗಜರ ತಂಡದಲ್ಲಿ ಭಾರತ ಸಂಜಾತ ಆರು ಮಂದಿ ಪ್ರತಿಭಾನ್ವಿತರು ಸೇರ್ಪಡೆಯಾಗಿದ್ದಾರೆ.

’ಕೊರೊನಾ–2’ ವೈರಾಣು ಪಿಡುಗು ಕೆಲವೇ ವಾರಗಳಲ್ಲಿಅಮೆರಿಕದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ. ಬಿಕ್ಕಟ್ಟಿನ ಬಲೆ ಒಳಗೆ ಸಿಲುಕಿರುವ ಅರ್ಥ ವ್ಯವಸ್ಥೆಯನ್ನು ಚೇತರಿಕೆಯ ಹಾದಿಗೆ ಮರಳಿ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಅಮೆರಿಕ ಸರ್ಕಾರವು 200 ಪರಿಣತರನ್ನು ಒಳಗೊಂಡ 18 ವಿವಿಧ ಬಗೆಯ ತಂಡಗಳನ್ನು ರಚಿಸಿದೆ. ವಿವಿಧ ಕೈಗಾರಿಕೆ ಮತ್ತು ವಲಯಗಳಿಂದ ಈ ತಜ್ಞರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ತಂತ್ರಜ್ಞಾನ ತಂಡದಲ್ಲಿ ಭಾರತ ಸಂಜಾತರಾದ ಗೂಗಲ್ ಸಿಇಒ ಸುಂದರ್‌ ಪಿಚೈ, ಮೈಕ್ರೊಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲ, ಐಬಿಎಂನ ಅರವಿಂದ ಕೃಷ್ಣಾ, ಮೈಕ್ರೊನ್ಸ್‌ ಸಂಜಯ್‌ ಮೆಹ್ರೋತ್ರಾ ಅವರೂ ಇದ್ದಾರೆ. ಈ ತಂಡದಲ್ಲಿ ಆ್ಯಪಲ್‌ನ ಟಿಮ್‌ ಕುಕ್‌, ಒರ್‍ಯಾಕಲ್‌ನ ಲ್ಯಾರಿ ಎಲಿಸನ್‌ ಮತ್ತು ಫೇಸ್‌ಬುಕ್‌ನ ಮಾರ್ಕ್‌ ಜುಕರ್‌ಬರ್ಗ್ ಇದ್ದಾರೆ.

ಭಾರತ ಸಂಜಾತ ಆ್ಯನ್‌ ಮುಖರ್ಜಿ ಅವರನ್ನು ತಯಾರಿಕಾ ತಂಡಕ್ಕೆ ನೇಮಿಸಲಾಗಿದೆ. ಮಾಸ್ಟರ್‌ಕಾರ್ಡ್‌ನ ಅಜಯ್ ಬಂಗಾ ಅವರನ್ನು ಹಣಕಾಸು ಸೇವಾ ತಂಡಕ್ಕೆ ಪರಿಗಣಿಸಲಾಗಿದೆ.

ಕೃಷಿ, ಬ್ಯಾಂಕಿಂಗ್‌, ನಿರ್ಮಾಣ, ಕಾರ್ಮಿಕರು, ರಕ್ಷಣೆ, ಇಂಧನ, ಹಣಕಾಸು ಸೇವೆ, ಆಹಾರ, ಆರೋಗ್ಯ, ಆತಿಥ್ಯ, ತಯಾರಿಕೆ, ರಿಯಲ್‌ ಎಸ್ಟೇಟ್‌, ರಿಟೇಲ್‌, ಸಂವಹನ, ಸಾರಿಗೆ ಮತ್ತು ಕ್ರೀಡಾ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಸರ್ಕಾರ ಮತ್ತು ಉದ್ದಿಮೆಯ ಪ್ರತಿನಿಧಿಗಳನ್ನು ಒಳಗೊಂಡಿರುವ ಈ ದ್ವಿಪಕ್ಷೀಯ ತಂಡಗಳು, ಶ್ವೇತಭವನದ ಸಹಯೋಗದಲ್ಲಿ ಕೆಲಸ ಮಾಡಲಿವೆ.

ಅಮೆರಿಕದ ಜನರ ಆರೋಗ್ಯ ಮತ್ತು ದೇಶದ ಸಂಪತ್ತಿನ ರಕ್ಷಣೆಯು ಈ ಪರಿಣತರ ತಂಡಗಳ ಪ್ರಮುಖ ಗುರಿಯಾಗಿರಲಿದೆ. ಸ್ವಾವಲಂಬಿ, ಸ್ವತಂತ್ರ ಮತ್ತು ಬಿಕ್ಕಟ್ಟಿನ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಬಗೆಯಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಕೈಗೊಳ್ಳಬೇಕಾದ ರಚನಾತ್ಮಕ ಕ್ರಮಗಳ ಬಗ್ಗೆ ಈ ತಂಡಗಳು ಸಲಹೆ ನೀಡಲಿವೆ ಎಂದು ಶ್ವೇತಭವನವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT