ನವದೆಹಲಿ: ಭಾರತದ ಹೊರಗೂ ದ್ವಿಚಕ್ರ ವಾಹನಗಳ ತಯಾರಿಕೆಯ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ಟಿವಿಎಸ್ ಮತ್ತು ಜರ್ಮನಿಯ ಬಿಎಂಡಬ್ಲೂ ಮೊಟೊರಾಡ್ ಹೊಂದಿವೆ ಎಂದು ಕಂಪನಿ ಬುಧವಾರ ಹೇಳಿದೆ.
ಜಾಗತಿಕ ಮಾರುಕಟ್ಟೆಗೆ 500 ಸಿ.ಸಿ. ಒಳಗಿನ ದ್ವಿಚಕ್ರ ವಾಹನಗಳನ್ನು ತಯಾರಿಸುವ ಕುರಿತು ಈ ಎರಡೂ ಕಂಪನಿಗಳು 2013ರಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದವು. 310 ಸಿ.ಸಿ. ವಿಭಾಗದಲ್ಲಿ ಬಿಎಂಡಬ್ಲೂ ಜಿ 310ಆರ್, ಬಿಎಂಡಬ್ಲೂ 310 ಜಿಎಸ್, ಬಿಎಂಡಬ್ಲೂ ಜಿ 310 ಆರ್‌ಆರ್ ಬೈಕ್‌ಗಳು ಒಳಗೊಂಡಿವೆ. ಈ ಬೈಕ್‌ಗಳು ಜಾಗತಿಕ ಮಟ್ಟದ 100 ಮಾರುಕಟ್ಟೆಗಳಲ್ಲಿ ಲಭ್ಯ. ಮತ್ತೊಂದೆಡೆ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಅಪಾಚೆ ಆರ್‌ಆರ್ 310 ಮೋಟಾರ್‌ಸೈಕಲ್ ಕೂಡಾ ತಯಾರಿಸುತ್ತಿದೆ.
ಬಿಎಂಡಬ್ಲೂ ಮಟೊರಾಡ್‌ನ ಜಾಗತಿಕ ಮಾರುಕಟ್ಟೆಗೆ ಹೊಸೂರಿನಲ್ಲಿರುವ ಟಿವಿಎಸ್ ಮೋಟಾರ್ಸ್‌ನ ತಯಾರಿಕಾ ಘಟಕದಲ್ಲಿ ಸಿದ್ಧಗೊಳ್ಳುವ ಬೈಕ್‌ಗಳ ಪ್ರಮಾಣ ಶೇ 10ರಷ್ಟು ಮಾತ್ರ.
‘ಭವಿಷ್ಯದ ತಂತ್ರಜ್ಞಾನಕ್ಕೆ ಹಾಗೂ ಸುಸ್ಥಿರ ಪ್ರಯಾಣ ಮಾರ್ಗೋಪಾಯಕ್ಕಾಗಿ ಎರಡೂ ಕಂಪನಿಗಳು ಭಾರತದ ಹೊರಗೂ ಜಂಟಿಯಾಗಿ ಬೈಕ್‌ಗಳ ತಯಾರಿಸಲು ನಿರ್ಧರಿಸಿವೆ. ಇದರಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಬಿಎಂಡಬ್ಲೂ ಸಿಇ 02 ಬೈಕ್ ಕೂಡಾ ಸೇರಿದೆ’ ಎಂದು ಟಿವಿಎಸ್ ಮೋಟಾರ್ ಕಂಪನಿಯ ನಿರ್ದೇಶಕ ಹಾಗೂ ಸಿಇಒ ಕೆ.ಎನ್.ರಾಧಾಕೃಷ್ಣನ್ ಹೇಳಿದ್ದಾರೆ.
‘ಜಾಗತಿಕ ಮಟ್ಟದ ನಗರ ಕೇಂದ್ರಿತ ಮಾರುಕಟ್ಟೆಗಳು ಹಾಗೂ ಮುಂದಿನ ತಲೆಮಾರಿನ ‘ಉಬರ್–ಕೂಲ್’ ಮಾದರಿಯನ್ನೇ ಕೇಂದ್ರವಾಗಿಟ್ಟುಕೊಂಡು ಹೊಸ ಮಾದರಿಯ ಬೈಕ್‌ಗಳನ್ನು ಅಭಿವೃದ್ಧಿಪಡಿಸುವ ಕುರಿತು ಎರಡೂ ಕಂಪನಿಗಳು ಚರ್ಚೆ ನಡೆಸುತ್ತಿವೆ’ ಎಂದು ಹೇಳಿದ್ದಾರೆ.
ಬಿಎಂಡಬ್ಲೂ ಮೊಟೊರಾಡ್ ಕಂಪನಿ ಮುಖ್ಯಸ್ಥ ಮಾರ್ಕಸ್ ಷ್ರಾಮ್ ಅವರು ಪ್ರತಿಕ್ರಿಯಿಸಿ, ‘ಈ ಹತ್ತು ವರ್ಷಗಳಲ್ಲಿ ಎರಡೂ ಕಂಪನಿಗಳ ನಡುವೆ ಬಹಳಷ್ಟು ಉತ್ತಮ ಅಂಶಗಳು ಹಾಗೂ ಬಾಂಧವ್ಯ ವೃದ್ಧಿಯಾಗಿದೆ. 500 ಸಿ.ಸಿ. ಒಳಗಿನ ಬೈಕ್‌ಗಳ ವಿಭಾಗದಲ್ಲಿ ಉತ್ತಮ ಮಾದರಿಯ ಬೈಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದಿದ್ದಾರೆ.
‘ಒಂದು ಸಿಲಿಂಡರ್ ಹೊಂದಿರುವ ಬಿಎಂಡಬ್ಲೂ ಜಿ 310ಆರ್ ಹಾಗೂ ಬಿಎಂಡಬ್ಲೂ ಜಿ 310 ಜಿಎಸ್ ಬೈಕ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಜನಪ್ರಿಯತೆ ಸಿಕ್ಕಿದೆ. ಇವು ಬಿಎಂಡಬ್ಲೂ ಮೊಟೊರಾಡ್‌ನ ಜಾಗತಿಕ ಮಟ್ಟದಲ್ಲಿ ಸಿಕ್ಕ ಯಶಸ್ಸು ಆಗಿದೆ’ ಎಂದು ತಿಳಿಸಿದ್ದಾರೆ.
‘ಟಿವಿಎಸ್ ಮೋಟಾರ್ ಕಂಪನಿಯೊಂದಿಗೆ ಭವಿಷ್ಯದ ಉತ್ಪನ್ನಗಳನ್ನು ತಯಾರಿಸುವಲ್ಲಿ ಜತೆಯಾಗಿ ಹೆಜ್ಜೆ ಇಡಲಾಗುವುದು. ಜಾಗತಿಕ ಮಟ್ಟದಲ್ಲಿ 1.4 ಲಕ್ಷ ಗ್ರಾಹಕರು ಇದ್ದಾರೆ. ಯುರೋಪ್, ಅಮೆರಿಕ, ಲ್ಯಾಟಿನ್ ಅಮೆರಿಕ, ಜಪಾನ್, ಚೀನಾ ಹಾಗೂ ಭಾರತದಲ್ಲಿ ಈ ಬೈಕ್‌ಗಳಿಗೆ ಉತ್ತಮ ಬೇಡಿಕೆ ಇದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.