ಗುರುವಾರ , ಜನವರಿ 23, 2020
23 °C
ಪರಿಹಾರ ರೂಪದಲ್ಲಿ ₹ 35,298 ಕೋಟಿ

ಜಿಎಸ್‌ಟಿ: ರಾಜ್ಯಗಳಿಗೆ ಹಣ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

GST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ರಾಜ್ಯಗಳ ನಷ್ಟಭರ್ತಿ ಮಾಡಲು ಕೇಂದ್ರ ಸರ್ಕಾರವು ನೀಡಬೇಕಾದ ₹ 35,298 ಕೋಟಿ ಮೊತ್ತದ ಪರಿಹಾರವನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಹಣ ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಟ್ವೀಟ್‌ ಮಾಡಿದೆ.

ಪರಿಹಾರ ಧನ ವಿಳಂಬವಾಗಿರುವುದಕ್ಕೆ ಬಿಜೆಪಿಯೇತರ ರಾಜ್ಯ ಸರ್ಕಾರಗಳಿಂದ ಕೇಂದ್ರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಜಿಎಸ್‌ಟಿಯ ಉನ್ನತ ಮಂಡಳಿಯು ಇದೇ 18ರಂದು ಸಭೆ ಸೇರಲಿದೆ. ಅಲ್ಲಿ ವಿಳಂಬ ಪಾವತಿ ವಿಷಯ ಪ್ರಸ್ತಾಪಿಸಲು ಈ ರಾಜ್ಯ ಸರ್ಕಾರಗಳು ನಿರ್ಧರಿಸಿದ್ದವು.

2017ರ ಜುಲೈ 1ರಂದು ದೇಶದಾದ್ಯಂತ ಜಿಎಸ್‌ಟಿ ಜಾರಿಗೆ ಬಂದ ಸಂದರ್ಭದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ರದ್ದತಿಯಾಗಿತ್ತು.   ಹೊಸ ತೆರಿಗೆ ವಿಧಿಸುವ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಂಡಿತ್ತು. ಇದರಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಭರ್ತಿ ಮಾಡಿಕೊಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಪರಿಹಾರ ಮೊತ್ತವನ್ನು ಶೇ 14ರ ದರದಲ್ಲಿ ನಿಗದಿಪಡಿಸಲಾಗಿತ್ತು. ತಂಬಾಕಿನ ಉತ್ಪನ್ನ, ಸಿಗರೇಟ್‌, ತಂಪು ಪಾನೀಯ, ವಾಹನ ಮತ್ತು ಕಲ್ಲಿದ್ದಲು ಮೇಲಿನ ಜಿಎಸ್‌ಟಿ ದರಗಳಿಗೆ ಹೆಚ್ಚುವರಿಯಾಗಿ ವಿಧಿಸುವ ಸೆಸ್‌ನಿಂದ ಸಂಗ್ರಹವಾಗುವ ಮೊತ್ತವನ್ನು ರಾಜ್ಯಗಳಿಗೆ ಪರಿಹಾರ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ಎರಡು ತಿಂಗಳಿಗೊಮ್ಮೆ ಪರಿಹಾರ ಧನ ವಿತರಿಸಲಾಗುತ್ತಿತ್ತು. ಆದರೆ, ಈ ಬಾರಿ ಆಗಸ್ಟ್ ತಿಂಗಳಿನಿಂದಲೇ ಕೇಂದ್ರ ಸರ್ಕಾರವು ಈ ಮೊತ್ತವನ್ನು ರಾಜ್ಯಗಳಿಗೆ ವಿತರಿಸಿರಲಿಲ್ಲ. ಇದಕ್ಕೆ ರಾಜ್ಯಗಳಿಂದ ಅದರಲ್ಲೂ ವಿಶೇಷವಾಗಿ ಬಿಜೆಪಿಯೇತರ ರಾಜ್ಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

 ರಾಜ್ಯಗಳಿಗೆ ವಿತರಿಸುವ ಪರಿಹಾರ ಧನದ ವಾಗ್ದಾನದಿಂದ ಕೇಂದ್ರ ಸರ್ಕಾರವು ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸಲಾರದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಪರಿಹಾರ ಧನ ವಿತರಣೆಯ ಆದೇಶ ಹೊರಬಿದ್ದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು