ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾರ, ರಸಗೊಬ್ಬರಕ್ಕೆ ₹3.98 ಲಕ್ಷ ಕೋಟಿ ಸಬ್ಸಿಡಿ?ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ

2024–25ನೇ ಹಣಕಾಸು ವರ್ಷಕ್ಕೆ ನಿಗದಿ: ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ
Published 17 ಜನವರಿ 2024, 23:30 IST
Last Updated 17 ಜನವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು 2024–25ನೇ ಹಣಕಾಸು ವರ್ಷಕ್ಕೆ ಆಹಾರ ಮತ್ತು ರಸಗೊಬ್ಬರದ ಸಬ್ಸಿಡಿ ಮೇಲಿನ ವೆಚ್ಚವನ್ನು ₹3,98,874 ಕೋಟಿಗೆ ನಿಗದಿಪಡಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ. 

ಲೋಕಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ, ಸಬ್ಸಿಡಿ ಮೊತ್ತ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 2023–24ನೇ ಹಣಕಾಸು ವರ್ಷದಲ್ಲಿ ಆಹಾರ, ರಸಗೊಬ್ಬರದ ಮೇಲಿನ ಸಬ್ಸಿಡಿ ಮೊತ್ತವನ್ನು ₹3.75 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ.

ಆಹಾರ ಸಬ್ಸಿಡಿ ಮೊತ್ತವನ್ನು ₹2.20 ಲಕ್ಷ ಕೋಟಿಗೆ ನಿಗದಿಪಡಿಸುವ ಅಂದಾಜಿಸಿದೆ. 2023–24ನೇ ಹಣಕಾಸು ವರ್ಷದಲ್ಲಿ ₹2 ಲಕ್ಷ ಕೋಟಿ ನಿಗದಿಪಡಿಸಿದೆ. ಇದಕ್ಕೆ ಹೋಲಿಸಿದರೆ ಶೇ 10ರಷ್ಟು ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ರಸಗೊಬ್ಬರದ ಸಬ್ಸಿಡಿ ಮೊತ್ತವನ್ನು ₹1.75 ಲಕ್ಷ ಕೋಟಿಗೆ ನಿಗದಿಪಡಿಸುವ ಸಾಧ್ಯತೆಯಿದೆ. 2022–23ನೇ ಹಣಕಾಸು ವರ್ಷದಲ್ಲಿ ₹2 ಲಕ್ಷ ಕೋಟಿ ನಿಗದಿಪಡಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಕಡಿಮೆಯಾಗಲಿದೆ ಎಂದು ತಿಳಿಸಿವೆ.

ಫೆಬ್ರುವರಿ 1ರಂದು ಮಂಡಿಸಲಿರುವ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಕಟಿಸಲಿದ್ದಾರೆ ಎಂದು ತಿಳಿಸಿವೆ.

ದೇಶದಲ್ಲಿ ವಿತ್ತೀಯ ಕೊರತೆ ನಿಯಂತ್ರಿಸುವ ಉದ್ದೇಶದಿಂದ ಈ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಸಚಿವಾಲಯ, ಕೇಂದ್ರ ಹಣಕಾಸು ಸಚಿವಾಲಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಪ್ರತಿಕ್ರಿಯೆ ನೀಡಿಲ್ಲ.

ಲೋಕಸಭಾ ಚುನಾವಣೆ ಬೆನ್ನಲ್ಲೇ ಈ ಎರಡು ಕ್ಷೇತ್ರಗಳಲ್ಲಿ ಸಬ್ಸಿಡಿಯನ್ನು ಸಮನಾಗಿ ನಿರ್ವಹಣೆ ಮಾಡುವುದು ಸರ್ಕಾರಕ್ಕೆ ಸವಾಲಾಗಿದೆ. ಆದರೂ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT