ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌–ಇರಾನ್‌ ಬಿಕ್ಕಟ್ಟು ಉಲ್ಬಣ: ಕಚ್ಚಾ ತೈಲ ಪೂರೈಕೆಗೆ ಅಡ್ಡಿ?

Published : 2 ಅಕ್ಟೋಬರ್ 2024, 13:53 IST
Last Updated : 2 ಅಕ್ಟೋಬರ್ 2024, 13:53 IST
ಫಾಲೋ ಮಾಡಿ
Comments

ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಸರಕು ಸಾಗಣೆ ವೆಚ್ವವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್‌ ಹಾಗೂ ಕೃಷಿ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗುವ ಸಂಭವ ಹೆಚ್ಚಿದೆ ಎಂದು ರಫ್ತುದಾರರು ಹೇಳಿದ್ದಾರೆ.

ನೇರವಾಗಿ ಯುದ್ಧದಲ್ಲಿ ಭಾಗಿಯಾಗಿರುವ ದೇಶಗಳಿಗೆ ಭಾರತದಿಂದ ರಫ್ತು ಮಾಡುವುದಕ್ಕೆ ಸಂಬಂಧಿಸಿದಂತೆ ವಿಮಾ ವೆಚ್ಚದಲ್ಲಿ ಏರಿಕೆಯಾಗಿದೆ. ಇದು ರಫ್ತುದಾರರು ಹೂಡುವ ಬಂಡವಾಳದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

‘ಬಿಕ್ಕಟ್ಟಿನಿಂದಾಗಿ ಇಸ್ರೇಲ್‌, ಜೋರ್ಡಾನ್‌ ಹಾಗೂ ಲೆಬನಾನ್‌ ಜೊತೆಗೆ ಭಾರತ ಹೊಂದಿರುವ ವ್ಯಾಪಾರಕ್ಕೆ ಧಕ್ಕೆಯಾಗಲಿದೆ’ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ಹೇಳಿದೆ.

‘ಇರಾನ್‌ ಮತ್ತು ಇಸ್ರೇಲ್‌ ನಡುವೆ ತಲೆದೋರಿರುವ ಬಿಕ್ಕಟ್ಟು ಜಾಗತಿಕ ವ್ಯಾಪಾರ ಮತ್ತು ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ’ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ತಿಳಿಸಿದೆ.‌

‘ತೈಲ ಮಾರುಕಟ್ಟೆಯಲ್ಲಿ ಇರಾನ್‌ನ ಹಿಡಿತ ಹೆಚ್ಚಿದೆ. ಸದ್ಯ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇ 4ರಷ್ಟು ಏರಿಕೆಯಾಗಿದೆ. ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡರೆ ಕಚ್ಚಾ ತೈಲದ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದರಿಂದ ತೈಲ ಆಮದು ಅವಲಂಬಿತ ದೇಶಗಳು ಸಂಕಷ್ಟಕ್ಕೆ ಸಿಲುಕಲಿವೆ. ಇದು ಇಂಧನ ಬೆಲೆ ಏರಿಕೆಗೆ ಕಾರಣವಾಗಲಿದೆ’ ಎಂದು ಒಕ್ಕೂಟದ ಮಹಾ ನಿರ್ದೆಶಕ ಅಜಯ್ ಸಹಾಯ್ ಅಭಿಪ್ರಾಯಪಟ್ಟಿದ್ದಾರೆ.

‘ಹಾರ್ಮುಜ್ ಜಲಸಂಧಿ ಮೂಲಕವೇ ಜಗತ್ತಿನ ವಿವಿಧ ದೇಶಗಳಿಗೆ ತೈಲ ಪೂರೈಕೆಯಾಗುತ್ತದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣಗೊಂಡರೆ ಈ ಮಾರ್ಗದಲ್ಲಿ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಲಿದೆ’ ಎಂದು ಹೇಳಿದ್ದಾರೆ.

ಏಷ್ಯಾ ಭಾಗದಲ್ಲಿ ಭಾರತಕ್ಕೆ ಇಸ್ರೇಲ್‌ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.

‘ಭಾರತದಿಂದ ಇಸ್ರೇಲ್‌ಗೆ ಮಾಡುವ ರಫ್ತು ಪ್ರಮಾಣದಲ್ಲಿ ಶೇ 63.5, ಜೋರ್ಡಾನ್‌ಗೆ ಶೇ 38.5ರಷ್ಟು ಹಾಗೂ ಲೆಬನಾನ್‌ಗೆ ಶೇ 6.8ರಷ್ಟು ಕುಸಿತವಾಗಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಭಾರತದಿಂದ ಈ ದೇಶಗಳಿಗೆ ಭಾಸ್ಮತಿ ಅಕ್ಕಿ, ಕೈಮಗ್ಗದ ನೂಲು, ಸಿದ್ಧಉಡುಪು, ಹರಳು ಮತ್ತು ಚಿನ್ನಾಭರಣ, ಹತ್ತಿ ನೂಲು ಮತ್ತು ಹತ್ತಿ ಬಟ್ಟೆಗಳು ರಫ್ತಾಗುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT