ಬುಧವಾರ, ನವೆಂಬರ್ 13, 2019
28 °C
ಇನ್ಫೊಸಿಸ್ ಅಧ್ಯಕ್ಷ

ದೇವರೂ ಇನ್ಫಿಯ ಅಂಕಿ ಅಂಶ ತಿರುಚಲಾರ: ನಂದನ್‌ ನಿಲೇಕಣಿ

Published:
Updated:
Prajavani

ನವದೆಹಲಿ: ‘ಇನ್ಫೊಸಿಸ್‌ನ ಕಾರ್ಪೊರೇಟ್‌ ಆಡಳಿತ ವಿಧಾನವು ಸದೃಢ ಮತ್ತು ಪಾರದರ್ಶಕವಾಗಿದ್ದು, ದೇವರು ಕೂಡ ಕಂಪನಿಯ ಹಣಕಾಸು ಸಾಧನೆಯ ಅಂಕಿ ಅಂಶಗಳನ್ನು ತಿರುಚಲು ಸಾಧ್ಯವಿಲ್ಲ’ ಎಂದು ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಹೇಳಿದ್ದಾರೆ.

ಕಂಪನಿಯ ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಿಎಫ್‌ಒ ನೀಲಾಂಜನ ರಾಯ್‌ ಅವರು ಲಾಭ ಮತ್ತು ವರಮಾನ ಹೆಚ್ಚಿಸಲು ಲೆಕ್ಕಪತ್ರ ತಪಾಸಿಗರಿಂದ ಕೆಲ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ. ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಎಸಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿರುವುದಕ್ಕೆ ಪ್ರತಿಯಾಗಿ ನಿಲೇಕಣಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಂಪನಿಯ ಹೂಡಿಕೆದಾರರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ‘ಕಂಪನಿಯ ಆಡಳಿತವು ತನ್ನ ಕಾರ್ಯತಂತ್ರವನ್ನು ಕಾರ್ಯಗತಗೊಳಿಸುವುದಕ್ಕೆ ನಿರ್ದೇಶಕ ಮಂಡಳಿಯು ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮೆಲ್ಲ ಗ್ರಾಹಕರು ಕಂಪನಿಯಲ್ಲಿ ದೃಢ ವಿಶ್ವಾಸ ಇರಿಸಿ ಬೆಂಬಲಕ್ಕೆ ನಿಂತಿದ್ದಾರೆ. ಆಡಳಿತ ಮಂಡಳಿಯು ಎಂದಿನಂತೆ ವಹಿವಾಟು ನಡೆಸುವ ಬಗ್ಗೆ ಗಮನ ಕೇಂದ್ರೀಕರಿಸಿದ’ ಎಂದೂ ಹೇಳಿದ್ದಾರೆ. ದೂರುಗಳಿಗೆ ಸಂಬಂಧಿಸಿದಂತೆ ಕೆಲವರು ತಮ್ಮ ಹೂಡಿಕೆ ನಿರ್ಧಾರ ತಡೆಹಿಡಿಯಲಿದ್ದಾರೆ ಎನ್ನುವುದನ್ನೂ ನಂದನ್‌ ಅಲ್ಲಗಳೆದಿದ್ದಾರೆ.

ದಿಗಿಲು ಮೂಡಿಸಿದ ಊಹಾಪೋಹಗಳು: ಅಕ್ರಮಗಳನ್ನು ಬಯಲಿಗೆ ಎಳೆಯುವವರು ಇತ್ತೀಚೆಗೆ ಕಂಪನಿಯ ಉನ್ನತ ಅಧಿಕಾರಿಗಳ ವಿರುದ್ಧ ಮಾಡಿರುವ ಲೆಕ್ಕಪತ್ರ ಅಕ್ರಮಗಳ ಆರೋಪಗಳಲ್ಲಿ ಸಹ ಸ್ಥಾಪಕರು ಮತ್ತು ಮಾಜಿ ಉದ್ಯೋಗಿಗಳ ಕೈವಾಡ ಇದೆ ಎನ್ನುವ ಊಹಾಪೋಹಗಳು ದಿಗಿಲು ಮೂಡಿಸಿವೆ’ ಎಂದು ನಂದನ್ ಕಳವಳ ವ್ಯಕ್ತಪಡಿಸಿದ್ದಾರೆ.

‘ಇಂತಹ ಊಹಾಪೋಹಗಳು ಅತ್ಯಂತ ಪ್ರತಿಭಾನ್ವಿತ ಮತ್ತು ಗೌರವಾನ್ವಿತ ವ್ಯಕ್ತಿಗಳ ವರ್ಚಸ್ಸಿಗೆ ಧಕ್ಕೆ ಒದಗಿಸುವ ಪ್ರಯತ್ನಗಳಾಗಿವೆ. ಉನ್ನತ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಸಹ ಸ್ಥಾಪಕರ ಮತ್ತು ಮಾಜಿ ಉದ್ಯೋಗಿಗಳ ಕೈವಾಡ ಇದೆ ಎನ್ನುವ ಅನಾಮಧೇಯ ಮೂಲಗಳ ದುರುದ್ದೇಶಪೂರಿತ ಆರೋಪಗಳನ್ನು ಖಂಡಿಸಲಾಗುತ್ತಿದೆ’ ಎಂದು ನಿಲೇಕಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಮ್ಮೆಲ್ಲ ಸಹ ಸ್ಥಾಪಕರು ಸಂಸ್ಥೆಯ ಏಳಿಗೆಗೆ ತಮ್ಮ ಜೀವಮಾನ ಪೂರ್ತಿ ಶ್ರಮಿಸಿದ್ದಾರೆ. ಸಂಸ್ಥೆಯ ಉನ್ನತಿಗೆ ಸ್ವಾರ್ಥರಹಿತವಾಗಿ ದುಡಿದಿದ್ದಾರೆ. ತಾವು ಕಟ್ಟಿ ಬೆಳೆಸಿದ ಸಂಸ್ಥೆಯ ದೀರ್ಘಾವಧಿಯ ಯಶಸ್ಸಿಗೆ ಅವರೆಲ್ಲ ಈಗಲೂ ಕಟಿಬದ್ಧರಾಗಿದ್ದಾರೆ. ಈ ಎಲ್ಲ ಕಾರಣಕ್ಕೆ ನನ್ನಲ್ಲಿ ಅವರ ಬಗ್ಗೆ ಅಪಾರ ಗೌರವ ಭಾವನೆ ಇದೆ’ ಎಂದು ಹೇಳಿದ್ದಾರೆ.

‘ದೂರುಗಳಿಗೆ ಸಂಬಂಧಿಸಿದಂತೆ ಬಾಹ್ಯ ಕಾನೂನು ಸಂಸ್ಥೆಯು  ಸ್ವತಂತ್ರ ತನಿಖೆ ನಡೆಸುತ್ತಿದೆ. ತನಿಖೆಯ ಫಲಿತಾಂಶವನ್ನು ಕಂಪನಿಯ ಎಲ್ಲ ಭಾಗಿದಾರರ ಜತೆ ಹಂಚಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಸಿಬ್ಬಂದಿ ಕಡಿತ: ಸ್ಪಷ್ಟನೆ
ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಕಡಿತ ಮಾಡಲಾಗುತ್ತಿದೆ ಎನ್ನುವ ವರದಿಗಳಿಗೂ ಕಂಪನಿಯು ಸ್ಪಷ್ಟನೆ ನೀಡಿದೆ.

ಕಂಪನಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಥವಾ ನಿರಂತರವಾಗಿ ಕಾರ್ಯಕ್ಷಮತೆಯಲ್ಲಿ ಗರಿಷ್ಠ ಮಟ್ಟ ಕಾಯ್ದುಕೊಳ್ಳದವರನ್ನು ಕೈಬಿಡಲಾಗುತ್ತಿದೆ. ಕಂಪನಿಗಳಲ್ಲಿ ಇಂತಹ ಬೆಳವಣಿಗೆಗಳು ಸಹಜವಾಗಿ ನಡೆಯುತ್ತಿರುತ್ತವೆ. ಇದನ್ನು ಸಾಮೂಹಿಕ ಉದ್ಯೋಗ ಕಡಿತ ಎಂಬರ್ಥದಲ್ಲಿ ಪರಿಗಣಿಸಬಾರದು ಎಂದು ತಿಳಿಸಿದೆ.

ಕಂಪನಿ ಷೇರುಬೆಲೆ ಚೇತರಿಕೆ
ನಂದನ್‌ ಅವರ ಈ ಹೇಳಿಕೆಯ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಷೇರುಬೆಲೆಯು ಬುಧವಾರದ ವಹಿವಾಟಿನಲ್ಲಿ ಶೇ 3ರಷ್ಟು ಚೇತರಿಕೆ ಕಂಡಿತು.

ಪ್ರತಿಕ್ರಿಯಿಸಿ (+)