ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ತಿಂಗಳೂ ಇಳಿಕೆ ಕಂಡ ಸಗಟು ಹಣದುಬ್ಬರ

Published 16 ಅಕ್ಟೋಬರ್ 2023, 14:26 IST
Last Updated 16 ಅಕ್ಟೋಬರ್ 2023, 14:57 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಹಣದುಬ್ಬರವು ಸತತ ಆರನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ಆಹಾರ ವಸ್ತುಗಳ ಬೆಲೆ ಕಡಿಮೆ ಆಗಿದ್ದರಿಂದ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ (–) 0.26ಕ್ಕೆ ಇಳಿಕೆ ಕಂಡಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಏಪ್ರಿಲ್‌ ತಿಂಗಳಿನಿಂದಲೂ ಶೂನ್ಯಕ್ಕಿಂತಲೂ ಕಡಿಮೆ ಮಟ್ಟದಲ್ಲಿಯೇ ದಾಖಲಾಗುತ್ತಿದೆ. ಆಗಸ್ಟ್‌ನಲ್ಲಿ ಶೇ (–) 0.52ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಶೇ (–) 0.26ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 10.55ರಷ್ಟು ಗರಿಷ್ಠ ಮಟ್ಟದಲ್ಲಿ ಇತ್ತು.

ಆಹಾರ ವಸ್ತುಗಳ ಹಣದುಬ್ಬರವು ಹಿಂದಿನ ಎರಡು ತಿಂಗಳವರೆಗೂ ಎರಡಂಕಿ ಮಟ್ಟದಲ್ಲಿ ಇದ್ದಿದ್ದು ಸೆಪ್ಟೆಂಬರ್‌ನಲ್ಲಿ ಶೇ 3.35ಕ್ಕೆ ಇಳಿಕೆ ಕಂಡಿದೆ. ಆಗಸ್ಟ್‌ನಲ್ಲಿ ಶೇ 10.60ರಷ್ಟು ಇತ್ತು. ರಾಸಾಯನಿಕ, ರಾಸಾಯನಿಕ ಉತ್ಪನ್ನಗಳು, ಜವಳಿ, ಲೋಹ ಮತ್ತು ಆಹಾರ ವಸ್ತುಗಳ ಬೆಲೆಯು ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಇಳಿಕೆ ಕಂಡಿದೆ. ಇದರಿಂದಾಗಿ ಸಗಟು ಹಣದುಬ್ಬರ ಇಳಿಕೆ ಕಾಣುವಂತಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಇಂಧನ ಮತ್ತು ವಿದ್ಯುತ್‌ ವಲಯಗಳ ದರವು ಆಗಸ್ಟ್‌ನಲ್ಲಿ ಶೇ (–) 6.03 ಇದ್ದಿದ್ದು ಸೆಪ್ಟೆಂಬರ್‌ನಲ್ಲಿ ಶೇ (–) 3.35ಕ್ಕೆ ಇಳಿಕೆ ಕಂಡಿದೆ. ತಯಾರಿಕಾ ವಸ್ತುಗಳ ಹಣದುಬ್ಬರವು ಶೇ (–) 2.37 ರಿಂದ ಶೇ (–) 1.34ಕ್ಕೆ ಇಳಿಕೆ ಕಂಡಿದೆ. ತರಕಾರಿಗಳ ಬೆಲೆಯು ಶೇ 48.39 ರಿಂದ ಶೇ (–)15ಕ್ಕೆ ಇಳಿಕೆ ಕಂಡಿದೆ. ಆಲೂಗಡ್ಡೆ ದರವು ಶೇ (–) 25.24ರಷ್ಟು ಆಗಿದೆ. ಆದರೆ, ಬೇಳೆಕಾಳು, ಈರುಳ್ಳಿ, ಹಾಲು ಮತ್ತು ಹಣ್ಣಿನ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 

‘ದ್ವಿತೀಯಾರ್ಧದಲ್ಲಿ ಹೆಚ್ಚಲಿದೆ ಹಣದುಬ್ಬರ’

ಕೋಲ್ಕತ್ತ: ಕಚ್ಚಾ ತೈಲ ದರ ಏರಿಕೆ ಮತ್ತು ಮುಂಗಾರು ಬಿತ್ತನೆ ಕಡಿಮೆ ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಗಟು ಹಣದುಬ್ಬರ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಮುಂಗಾರು ಮಳೆಯ ಕೊರತೆಯಿಂದಾಗಿ ಆಹಾರಧಾನ್ಯಗಳ ಬಿತ್ತನೆ ಕಡಿಮೆ ಆಗಿದೆ.  ಇದರೆ ಜೊತೆಗೆ ಕಚ್ಚಾ ತೈಲ ದರ ಏರಿಕೆ ಆಗುತ್ತಿರುವುದರಿಂದಾಗಿ ಸಗಟು ಹಣದುಬ್ಬರ ಏರಿಕೆ ಕಾಣುವ ಸಂಭವ ಇದೆ ಎಂದು ಕೇರ್‌ಎಡ್ಜ್‌ನ ಮುಖ್ಯ ಆರ್ಥಿಕ ತಜ್ಞೆ ರಜನಿ ಸಿನ್ಹಾ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಕಚ್ಚಾ ತೈಲ ದರ ಇಳಿಮುಖವಾಗಿದೆ. ಆದರೆ ರಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಲಿದೆ. ಅದರಿಂದಾಗಿ ಸಗಟು ಹಣದುಬ್ಬರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಸ್ಟ್ಯಾಟಿಸ್ಟಿಕ್ಸ್‌ನ ಅರ್ಥಶಾಸ್ತ್ರಜ್ಞ ಅಭಿರೂಪ್‌ ಸರ್ಕಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT