ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಏರಿಕೆ

13 ತಿಂಗಳ ಗರಿಷ್ಠ: ಆಹಾರ ಪದಾರ್ಥಗಳ ಬೆಲೆ ಹೆಚ್ಚಳ
Published 14 ಮೇ 2024, 15:48 IST
Last Updated 14 ಮೇ 2024, 15:48 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 1.26ರಷ್ಟು ಏರಿಕೆಯಾಗಿದ್ದು, 13 ತಿಂಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ.

ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದೇ ಹಣದುಬ್ಬರದ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ತರಕಾರಿಗಳ ಬೆಲೆ ಏರುಗತಿಯಲ್ಲಿದೆ.

ಫೆಬ್ರುವರಿಯಲ್ಲಿ ಶೇ 0.20ರಷ್ಟು ದಾಖಲಾಗಿದ್ದ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 0.53ಕ್ಕೆ ಏರಿಕೆಯಾಗಿತ್ತು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಶೇ 0.79ರಷ್ಟು ದಾಖಲಾಗಿತ್ತು. 

ಆಹಾರ ಪದಾರ್ಥಗಳು, ವಿದ್ಯುತ್‌, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ಆಹಾರ ಪದಾರ್ಥಗಳ ತಯಾರಿಕಾ ವೆಚ್ಚದಲ್ಲಿ ನಿರೀಕ್ಷೆಗೂ ಮೀರಿ ಬೆಲೆ ಏರಿಕೆಯಾಗಿದೆ. ಹಾಗಾಗಿ, ಸಗಟು ಹಣದುಬ್ಬರವು ಏರಿಕೆಯ ಪಥದಲ್ಲಿ ಸಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಮಂಗಳವಾರ ತಿಳಿಸಿದೆ.

ಮಾರ್ಚ್‌ನಲ್ಲಿ ಶೇ 6.88ರಷ್ಟಿದ್ದ ಆಹಾರ ಹಣದುಬ್ಬರವು, ಏಪ್ರಿಲ್‌ನಲ್ಲಿ ಶೇ 7.74ಕ್ಕೆ ಏರಿಕೆಯಾಗಿದೆ. ಇಂಧನ ಮತ್ತು ವಿದ್ಯುತ್ ಸೂಚ್ಯಂಕದಲ್ಲಿಯೂ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಶೇ (–) 0.77ರಷ್ಟು ಇದ್ದಿದ್ದು, ಏಪ್ರಿಲ್‌ನಲ್ಲಿ ಶೇ 1.38ಕ್ಕೆ ಹೆಚ್ಚಳವಾಗಿದೆ.

‘ಸಗಟು ಹಣದುಬ್ಬರವು ಜಾಗತಿಕ ಸರಕುಗಳ ಬೆಲೆಯೊಂದಿಗೆ ಬೆಸೆದುಕೊಂಡಿರುತ್ತದೆ. ಹಾಗಾಗಿ, ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತದೆ’ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

‘ಕಳೆದ ಕೆಲವು ತಿಂಗಳುಗಳಿಂದ ಕಚ್ಚಾ ತೈಲದ ಬೆಲೆ ಸೇರಿ ಹಲವು ಸರಕುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸದ್ಯದ ಸ್ಥಿತಿಯನ್ನು ಅವಲೋಕಿಸಿದರೆ ಮೇ ಮತ್ತು ಜೂನ್‌ನಲ್ಲಿ ಶೇ 2ರಷ್ಟು ದಾಟುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

2024–25ನೇ ಹಣಕಾಸು ವರ್ಷದಲ್ಲಿ ಸಗಟು ಹಣದುಬ್ಬರವು ಶೇ 3.3ರಷ್ಟು ಇರಲಿದೆ ಎಂದು ಐಸಿಆರ್‌ಎ ಅಂದಾಜಿಸಿದೆ.

ಮಾರ್ಚ್‌ನಲ್ಲಿ ಶೇ 19.52ರಷ್ಟಿದ್ದ ತರಕಾರಿ ಬೆಲೆಯು ಏಪ್ರಿಲ್‌ನಲ್ಲಿ ಶೇ 23.60ಕ್ಕೆ ಹೆಚ್ಚಳವಾಗಿದೆ. ಆಲೂಗೆಡ್ಡೆ ಬೆಲೆಯು ಶೇ 52.60ರಿಂದ ಶೇ 71.97ರಷ್ಟು ಹಾಗೂ ಈರುಳ್ಳಿ ಧಾರಣೆಯು ಶೇ 56.99ರಿಂದ ಶೇ 59.75ಕ್ಕೆ ಏರಿಕೆಯಾಗಿದೆ. 

‘ಪ್ರಸಕ್ತ ವರ್ಷದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಖಾರೀಫ್‌ ಅವಧಿಯಲ್ಲಿ ಬಿತ್ತನೆಯಾಗಿರುವ ಆಹಾರ ಧಾನ್ಯಗಳು ಮಂಡಿಗಳಿಗೆ ಪೂರೈಕೆಯಾಗುತ್ತವೆ. ಆಗ ಮಾರುಕಟ್ಟೆಯಲ್ಲಿ ಸಹಜವಾಗಿ ಪೂರೈಕೆ ಸರಪಳಿ ಹೆಚ್ಚಲಿದೆ. ಈ ಅವಧಿಯಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ’ ಎಂದು ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಂಜೀವ್ ಅಗರವಾಲ್ ಹೇಳಿದ್ದಾರೆ.

ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು 11 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದ್ದರೂ ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿಲ್ಲ. ಈಗ ಸಗಟು ಹಣದುಬ್ಬರವೂ ಏರಿಕೆಯಾಗಿದೆ. ಹಾಗಾಗಿ ಜೂನ್‌ 5ರಿಂದ 7ರ ವರೆಗೆ ನಡೆಯುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಚಿಲ್ಲರೆ ಹಣದುಬ್ಬರವು ಆರ್‌ಬಿಐ ಅಂದಾಜಿಸಿರುವ ಶೇ 2ರಿಂದ 6ರ ತಾಳಿಕೆಯ ಮಿತಿಯಲ್ಲಿಯೇ ಇದೆ. ಆದರೆ ಇದನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಆರ್‌ಬಿಐನ ಗುರಿಯಾಗಿದೆ. ಈ ಹಣದುಬ್ಬರ ಆಧಾರದ ಮೇಲೆ ಆರ್‌ಬಿಐ ಹಣಕಾಸು ನೀತಿಯನ್ನು ರೂಪಿಸುತ್ತದೆ.   ‘ಏಪ್ರಿಲ್‌ನಲ್ಲಿ ದಾಖಲಾಗಿರುವ ಚಿಲ್ಲರೆ ಹಾಗೂ ಸಗಟು ಹಣದುಬ್ಬರವನ್ನು ಅವಲೋಕಿಸಿದರೆ ಜೂನ್‌ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಕಡಿಮೆಯಿದೆ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT