ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಸಿಕ್ಕರೆ ಮರಳುವೆ ರಘುರಾಂ ರಾಜನ್‌ ಹೇಳಿಕೆ

Last Updated 27 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸದ್ಯಕ್ಕೆ ನಾನು ನಿರ್ವಹಿಸುತ್ತಿರುವ ಹುದ್ದೆಯಲ್ಲಿ ಸಂತೃಪ್ತನಾಗಿರುವೆ. ಒಂದು ವೇಳೆ ಅವಕಾಶ ಸಿಕ್ಕರೆ ಭಾರತಕ್ಕೆ ಮರಳುವುದಕ್ಕೆ ಸಿದ್ಧನಿರುವೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಆಗಿದ್ದ ರಘುರಾಂ ರಾಜನ್‌ ಹೇಳಿದ್ದಾರೆ.

ಇಲ್ಲಿ ನಡೆದ ತಮ್ಮ ಹೊಸ ಪುಸಕ್ತ ‘ದ ಥರ್ಡ್‌ ಪಿಲ್ಲರ್‌’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅಥವಾ ರಾಜಕೀಯ ಪಾತ್ರ ನಿರ್ವಹಿಸಲು ಭಾರತಕ್ಕೆ ಮರಳಲು ಇಚ್ಛಿಸುವೀರಾ ಎಂದು ಸಭಿಕರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ‘ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳುವೆ’ ಎಂದು ಉತ್ತರಿಸಿದ್ದಾರೆ. ಸದ್ಯಕ್ಕೆ ಅವರು ಷಿಕ್ಯಾಗೊ ವಿಶ್ವವಿದ್ಯಾಲಯದ ಬೂಥ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿಪಕ್ಷಗಳ ಮಹಾಘಟಬಂಧನವು ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಬಹುಮತಗಳಿಸಿದರೆ, ಕೇಂದ್ರ ಹಣಕಾಸು ಸಚಿವರನ್ನಾಗಿ ರಾಜನ್‌ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನುವ ಸುದ್ದಿಯು ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿದೆ.

‘ನೀತಿ ನಿರೂಪಣೆ ರೂಪಿಸುವ ಹುದ್ದೆಯನ್ನು ಒಪ್ಪಿಕೊಳ್ಳಲು ಕೆಲ ರಾಜಕೀಯ ಪಕ್ಷಗಳು ನಿಮ್ಮನ್ನು ಸಂಪರ್ಕಿಸಿರುವ ಸುದ್ದಿ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು’ ಎಂದು ಮಂಗಳವಾರ ಪ್ರಸಾರವಾದ ‘ಸಿಎನ್‌ಬಿಸಿ ಟಿವಿ18’ ಸಂದರ್ಶನ ಕಾರ್ಯಕ್ರಮದಲ್ಲಿ ಅವರನ್ನು ಪ್ರಶ್ನಿಸಲಾಗಿತ್ತು. ‘ಆ ವಿಷಯ ಚರ್ಚಿಸುವುದಕ್ಕೆ ಇದು ಸೂಕ್ತ ಸಮಯವಲ್ಲ’ ಎಂದಷ್ಟೇ ಅವರು ಹೇಳಿದ್ದರು.

‘ಭಾರತದ ಪಾಲಿಗೆ ಇದೊಂದು ಅತ್ಯಂತ ಮಹತ್ವದ ಚುನಾವಣೆಯಾಗಿದೆ. ದೇಶಕ್ಕೆ ಇನ್ನಷ್ಟು ಆರ್ಥಿಕ ಸುಧಾರಣಾ ಕ್ರಮಗಳ ಅಗತ್ಯ ಇದೆ. ಹೊಸ ಆಲೋಚನೆಗಳಿಗೆ ಒತ್ತು ನೀಡಲು ನಾನು ಕೂಡ ಇಷ್ಟಪಡುವೆ’ ಎಂದಿದ್ದರು.

‘ನ್ಯಾಯ’ ಯೋಜನೆ ರೂಪಿಸಲು ರಾಜನ್‌ ಸೇರಿದಂತೆ ಖ್ಯಾತ ಅರ್ಥಶಾಸ್ತ್ರಜ್ಞರ ಸಲಹೆ ಪಡೆಯಲಾಗಿತ್ತು ಎಂದು ಕಾಂಗ್ರೆಸ್‌ ರಾಹುಲ್‌ ಗಾಂಧಿ ಹೇಳಿಕೊಂಡಿದ್ದಾರೆ.

ಆರ್‌ಬಿಐ ಗವರ್ನರ್‌ ಹುದ್ದೆ ನಿರ್ವಹಿಸುವಾಗ ರಾಜನ್‌ ಅವರು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಿಸಲು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರು. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕತಜ್ಞ ಹುದ್ದೆ ನಿಭಾಯಿಸಿದ್ದ ರಾಜನ್‌ ಅವರ ಆರ್‌ಬಿಐ ಗವರ್ನರ್‌ ಅಧಿಕಾರಾವಧಿಯನ್ನು ಎರಡನೆ ಬಾರಿಗೆ ವಿಸ್ತರಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು
ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT