ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಟ್ರಾನ್‌ ಘಟನೆ, ಆ್ಯಪಲ್ ತನಿಖೆ

Last Updated 14 ಡಿಸೆಂಬರ್ 2020, 13:59 IST
ಅಕ್ಷರ ಗಾತ್ರ

ನವದೆಹಲಿ: ಕೋಲಾರ ಜಿಲ್ಲೆಯ ನರಸೀಪುರದ ವಿಸ್ಟ್ರಾನ್‌ ಕಂಪನಿಯ ಆವರಣದಲ್ಲಿ ನಡೆದ ದಾಂದಲೆ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿರುವುದಾಗಿ ಆ್ಯಪಲ್ ಕಂಪನಿ ತಿಳಿಸಿದೆ.

‘ನಮಗೆ ಬಿಡಿಭಾಗಗಳನ್ನು, ಉತ್ಪನ್ನಗಳನ್ನು ಪೂರೈಸುವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಘನತೆಯಿಂದ ಮತ್ತು ಗೌರವದಿಂದ ನೋಡಿಕೊಳ್ಳುವ ವಾತಾವರಣ ಇರಬೇಕು. ವಿಸ್ಟ್ರಾನ್‌ ಕಂಪನಿಯ ನರಸೀಪುರ ಘಟಕದಲ್ಲಿ ವಿಸ್ತೃತ ತನಿಖೆಯನ್ನು ತಕ್ಷಣ ಆರಂಭಿಸಿದ್ದೇವೆ. ನಾವು ಅಲ್ಲಿಗೆ ಇನ್ನಷ್ಟು ಜನರನ್ನು ರವಾನಿಸುತ್ತಿದ್ದೇವೆ’ ಎಂದು ಆ್ಯಪಲ್‌ ಕಂಪನಿಯು ಇ–ಮೇಲ್‌ ಮೂಲಕ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ತನಗೆ ಬಿಡಿಭಾಗಗಳನ್ನು, ಉತ್ಪನ್ನಗಳನ್ನು ಪೂರೈಕೆ ಮಾಡುವವರು ಹೇಗೆ ವರ್ತಿಸಬೇಕು ಎಂಬ ವಿಚಾರದಲ್ಲಿಯೂ ಆ್ಯಪಲ್ ಕಂಪನಿಯು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ನಿಯಮಗಳ ಪಾಲನೆ ಆಗುತ್ತಿಲ್ಲ ಎಂಬ ವರದಿ ಆಧರಿಸಿ ಪರಿಶೀಲನೆ ಕೂಡ ನಡೆಸುತ್ತದೆ. ಬಿಡಿಭಾಗಗಳನ್ನು, ಉತ್ಪನ್ನಗಳನ್ನು ತನಗೆ ಪೂರೈಕೆ ಮಾಡುವ ಕಂಪನಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಅರಿಯಲು ಆ್ಯಪಲ್ ಕಂಪನಿಯು ಆ ಕಂಪನಿಗಳ ಒಟ್ಟು 52 ಸಾವಿರಕ್ಕಿಂತ ಹೆಚ್ಚಿನ ನೌಕರರನ್ನು 2019ರಲ್ಲಿ ಸಂದರ್ಶಿಸಿಸಿತ್ತು.

ವೇತನ ಮತ್ತು ಸೌಲಭ್ಯಗಳು, ವೇತನವನ್ನು ಕಾಲಕಾಲಕ್ಕೆ ಸರಿಯಾಗಿ ಪಾವತಿಸುವುದು ಸೇರಿದಂತೆ ಎಲ್ಲ ಕಾನೂನುಗಳನ್ನು ಪೂರೈಕೆದಾರರು ಪಾಲಿಸಬೇಕು ಎಂದು ಆ್ಯಪಲ್‌ನ ನಿಯಮಗಳು ಹೇಳುತ್ತವೆ. ‘ಶಿಸ್ತು ಕ್ರಮವಾಗಿ ವೇತನ ಕಡಿತ ಮಾಡುವುದು ನಿಷಿದ್ಧ. ಸ್ಥಳೀಯ ಕಾನೂನಿಗೆ ಅನುಗುಣವಾಗಿಯೇ ತಾತ್ಕಾಲಿಕ ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು’ ಎಂದೂ ಆ ನಿಯಮಗಳಲ್ಲಿ ಹೇಳಲಾಗಿದೆ.

ಪೆಗಾಟ್ರಾನ್‌ ಕಾರ್ಪ್‌ ಕಂಪನಿಯಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆಗಿದೆ ಎಂಬ ವರದಿಗಳು ಬಂದ ನಂತರ ಆ್ಯಪಲ್, ಆ ಕಂಪನಿ ಜೊತೆಗಿನ ಹೊಸ ವಾಣಿಜ್ಯ ಒಪ್ಪಂದವನ್ನು ನವೆಂಬರ್‌ನಲ್ಲಿ ಅಮಾನತು ಮಾಡಿತ್ತು. ವಿಸ್ಟ್ರಾನ್‌ ಕಂಪನಿಯು ಲೆನೊವೊ, ಮೈಕ್ರೊಸಾಫ್ಟ್‌ ಕಂಪನಿಗಳಿಗೂ ಉತ್ಪನ್ನಗಳನ್ನು ಸಿದ್ಧಪಡಿಸಿ ಕೊಡುತ್ತದೆ.

ಕೇಂದ್ರ ಸರ್ಕಾರ ಘೋಷಿಸಿರುವ ಉತ್ಪಾದನೆ ಆಧಾರಿತ ಉತ್ತೇಜನಾ ಕೊಡುಗೆ ಅಡಿಯಲ್ಲಿ ಆಯ್ಕೆಯಾಗಿರುವ 16 ಕಂಪನಿಗಳ ಪೈಕಿ ವಿಸ್ಟ್ರಾನ್‌ ಕೂಡ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT