ಸೋಮವಾರ, ಸೆಪ್ಟೆಂಬರ್ 20, 2021
29 °C

ಜುಲೈನಲ್ಲಿ ಸಗಟು ಹಣದುಬ್ಬರ ಶೇ 11.16

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಜುಲೈನಲ್ಲಿ ಶೇಕಡ 11.16ರಷ್ಟಾಗಿದೆ. ಜೂನ್‌ನಲ್ಲಿ ಇದ್ದ ಶೇ 12.07ಕ್ಕೆ ಹೋಲಿಸಿದರೆ ತುಸು ಇಳಿಕೆ ಕಂಡಿದೆ. ಆಹಾರ ವಸ್ತುಗಳ ಬೆಲೆಯೇರಿಕೆಯು ತುಸು ತಗ್ಗಿರುವುದರಿಂದ ಒಟ್ಟಾರೆ ಹಣದುಬ್ಬರದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಮೇ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆಯ ಮಟ್ಟವಾದ ಶೇ 12.94ಕ್ಕೆ ತಲುಪಿತ್ತು. ಇದಕ್ಕೆ ಹೋಲಿಸಿದರೆ ಜೂನ್‌ ಮತ್ತು ಜುಲೈನಲ್ಲಿ ಸಗಟು ಹಣದುಬ್ಬರವು ಇಳಿಮುಖವಾಗಿದೆಯಾದರೂ ಎರಡಂಕಿ ಮಟ್ಟದಲ್ಲಿಯೇ ಇದೆ. ಸಗಟು ಹಣದುಬ್ಬರವು 2020ರ ಜುಲೈನಲ್ಲಿ ಶೇ (–) 0.25ರಷ್ಟಿತ್ತು.

ಈ ವರ್ಷದ ಜುಲೈನಲ್ಲಿ ಹಣದುಬ್ಬರ ದರವು ಗರಿಷ್ಠ ಮಟ್ಟದಲ್ಲಿ ಇರಲು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ, ತಯಾರಿಕಾ ಉತ್ಪನ್ನಗಳು, ಆಹಾರ ಉತ್ಪನ್ನಗಳು, ಜವಳಿ, ರಾಸಾಯನಿಕ ಮತ್ತು ಅದರ ಉತ್ಪನ್ನಗಳ ಬೆಲೆ ಏರಿಕೆಯೇ ಪ್ರಮುಖ ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಆಹಾರ ಹಣದುಬ್ಬರವು ಸತತ ಮೂರನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ಜೂನ್‌ನಲ್ಲಿ ಶೇ 3.09ರಷ್ಟು ಇದ್ದಿದ್ದು ಜುಲೈನಲ್ಲಿ ಶೂನ್ಯಕ್ಕೆ ಇಳಿದಿದೆ. ಆದರೆ, ಈರುಳ್ಳಿ ಹಣದುಬ್ಬರವು ಶೇ 72.01ರಷ್ಟಿದೆ. ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಹಣದುಬ್ಬರವು ಶೇ 36.34ರಿಂದ ಶೇ 40.28ಕ್ಕೆ ಏರಿದೆ. ತಯಾರಿಕಾ ವಸ್ತುಗಳ ಹಣದುಬ್ಬರವು ಶೇ 10.88ರಿಂದ ಶೇ 11.20ಕ್ಕೆ ಹೆಚ್ಚಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಚಿಲ್ಲರೆ ಹಣದುಬ್ಬರದ ಅಂಕಿ–ಅಂಶಗಳನ್ನು ಪರಿಗಣಿಸಿ ಬಡ್ಡಿದರ ಪರಾಮರ್ಶೆ ನಡೆಸುತ್ತದೆ. ಕಳೆದ ವಾರ ನಡೆಸಿದ್ದ ಸಭೆಯಲ್ಲಿ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. 2021–22ರಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.7ರ ಮಟ್ಟದಲ್ಲಿ ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ.

ಕಳೆದ ವಾರ ಬಿಡುಗಡೆ ಆಗಿರುವ ಮಾಹಿತಿಯ ಪ್ರಕಾರ, ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ 5.59ರಷ್ಟಿದೆ. ಜೂನ್‌ನಲ್ಲಿ ಇದ್ದ ಶೇ 6.26ರಷ್ಟಕ್ಕೆ ಹೋಲಿಸಿದರೆ ಇಳಿಕೆ ಆಗಿದೆ.

ಅಂಕಿ–ಅಂಶ

ಸಗಟು ಹಣದುಬ್ಬರ (%)

ಏಪ್ರಿಲ್‌;10.74

ಮೇ;12.94

ಜೂನ್‌;12.07

ಜುಲೈ;11.16

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು