ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ 34 ತಿಂಗಳ ಕನಿಷ್ಠ

Published 15 ಮೇ 2023, 14:29 IST
Last Updated 15 ಮೇ 2023, 14:29 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡ (–) 0.92ಕ್ಕೆ ಇಳಿಕೆ ಕಾಣುವ ಮೂಲಕ 34 ತಿಂಗಳ ಕನಿಷ್ಠ ಮಟ್ಟ ತಲುಪಿದೆ.

2020ರ ಜೂನ್‌ನಲ್ಲಿ ಸಗಟು ದರ ಸೂಚ್ಯಂಕವು (ಡಬ್ಲ್ಯುಪಿಐ) ಶೇ (–) 1.81ರಷ್ಟು ಇತ್ತು. ಅದಾದ ನಂತರ, ಸಗಟು ಹಣದುಬ್ಬರವು ಶೂನ್ಯಕ್ಕಿಂತ ಕಡಿಮೆ ಆಗಿರುವುದು ಈ ವರ್ಷದ ಏಪ್ರಿಲ್‌ನಲ್ಲಿ.

ಜಾಗತಿಕ ಮಟ್ಟದಲ್ಲಿ ಸರಕುಗಳ ದರ ಇಳಿಕೆ ಆಗಿರುವುದರಿಂದ ಆಹಾರ, ಇಂಧನ ದರ ಮತ್ತು ತಯಾರಕರ ಇತರ ವೆಚ್ಚಗಳು ಕಡಿಮೆ ಆಗಿವೆ. ಹೀಗಾಗಿ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೂನ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. 2023ರ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ 29 ತಿಂಗಳ ಕನಿಷ್ಠ ಮಟ್ಟವಾದ ಶೇ 1.34ರಷ್ಟು ಆಗಿತ್ತು. ಸಗಟು ಹಣದುಬ್ಬರ ನಕಾರಾತ್ಮಕ ಮಟ್ಟದಲ್ಲಿ ಇದ್ದರೆ ತಾಂತ್ರಿಕವಾಗಿ ಅದನ್ನು ‘ಹಣದುಬ್ಬರವಿಳಿತ’ ಎಂದು ಕರೆಯಲಾಗುತ್ತದೆ.

2022ರ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 15.38ರ ಗರಿಷ್ಠ ಮಟ್ಟದಲ್ಲಿ ಇತ್ತು.

ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ಆಹಾರೇತರ ಉತ್ಪನ್ನಗಳು, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ರಬ್ಬರ್‌ ಮತ್ತು ಪ್ಲಾಸ್ಟಿಕ್‌ ಉತ್ಪನ್ನಗಳ ದರ ಇಳಿಕೆ ಆಗಿರುವುದರಿಂದ ಏಪ್ರಿಲ್‌ನಲ್ಲಿ ಹಣದುಬ್ಬರದ ಪ್ರಮಾಣ ಕಡಿಮೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೋಮವಾರ ತಿಳಿಸಿದೆ.

ಚಿಲ್ಲರೆ ಹಣದುಬ್ಬರದ ಬಳಿಕ ಇದೀಗ ಸಗಟು ಹಣದುಬ್ಬರವೂ ಇಳಿಕೆ ಆಗಿದೆ. ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟಕ್ಕೆ (ಶೇ 4.70) ಇಳಿಕೆಯಾಗಿದೆ.

ಹಣದುಬ್ಬರವಿಳಿತದ ಸ್ಥಿತಿಯು ಮುಂದಿನ ಎರಡರಿಂದ ಮೂರು ತಿಂಗಳವರೆಗೆ ಮುಂದುವರಿಯುವ ನಿರೀಕ್ಷೆ ಇದ್ದು, ಪೂರ್ತಿ ವರ್ಷಕ್ಕೆ ಶೇ 1–2ರ ಆಸುಪಾಸಿನಲ್ಲಿ ಇರಲಿದೆ ಎಂದು ಕೇರ್‌ಎಡ್ಜ್‌ ರೇಟಿಂಗ್ಸ್‌ನ ಮುಖ್ಯ ಆರ್ಥಿಕ ತಜ್ಞೆ ರಜನಿ ಸಿನ್ಹಾ ಹೇಳಿದ್ದಾರೆ.

11ನೇ ತಿಂಗಳಿನಿಂದಲೂ ಇಳಿಕೆ ಹಾದಿಯಲ್ಲಿ ಡಬ್ಲ್ಯುಪಿಐ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವೂ ಇಳಿಕೆ ಕಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT