ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಮಟ್ಟಕ್ಕೆ ಸಗಟು ಹಣದುಬ್ಬರ

Last Updated 14 ಜೂನ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ: ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರ ಪ್ರಮಾಣವು ದಾಖಲೆಯ ಶೇಕಡ 15.88ಕ್ಕೆ ಏರಿಕೆ ಆಗಿದೆ. ಕಚ್ಚಾ ತೈಲದ ಬೆಲೆ ಹೆಚ್ಚಳ, ಬಿಸಿಗಾಳಿಯ ಪರಿಣಾಮವಾಗಿ ತರಕಾರಿ ಮತ್ತು ಹಣ್ಣುಗಳ ಬೆಲೆ ಜಾಸ್ತಿ ಆಗಿದ್ದು ಈ ಏರಿಕೆಗೆ ಕಾರಣ.

ಸಗಟು ಹಣದುಬ್ಬರದ ಏರಿಕೆಯು, ರೆಪೊ ದರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮತ್ತೆ ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಇನ್ನಷ್ಟು ಬಲಗೊಳಿಸಿದೆ.

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ)ಆಧಾರಿತ ಹಣದುಬ್ಬರ ಪ್ರಮಾಣವು ಸತತ ಮೂರು ತಿಂಗಳುಗಳಿಂದ ಹೆಚ್ಚಾಗುತ್ತಿದೆ. ಅಲ್ಲದೆ, ಸತತ 14 ತಿಂಗಳುಗಳಿಂದ ಎರಡಂಕಿ ಮಟ್ಟದಲ್ಲಿ ಇದೆ.

‘ಖನಿಜ ತೈಲ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ವಸ್ತುಗಳು, ಮೂಲ ಲೋಹಗಳು, ಆಹಾರೇತರ ವಸ್ತುಗಳು, ರಾಸಾಯನಿಕಗಳು, ರಾಸಾಯನಿಕ ಉತ್ಪನ್ನಗಳ ಬೆಲೆ ಹೆಚ್ಚಳವು ಹಣದುಬ್ಬರ ಏರಿಕೆಗೆ ‍ಪ್ರಮುಖ ಕಾರಣ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 15.08ರಷ್ಟು ಇತ್ತು. ಹಿಂದಿನವರ್ಷದ ಮೇ ತಿಂಗಳಲ್ಲಿ ಇದು
ಶೇ 13.11ರಷ್ಟಾಗಿತ್ತು. ಹಳೆಯ ಹಣದುಬ್ಬರ ಸರಣಿಯನ್ನೂ ಪರಿಗಣಿಸಿದರೆ, 1991ರ ಆಗಸ್ಟ್‌
(ಶೇ 16.06) ನಂತರದ ಗರಿಷ್ಠ ಪ್ರಮಾಣದ ಹಣದುಬ್ಬರ ಮೇನಲ್ಲಿ ದಾಖಲಾಗಿದೆ.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ನಾಲ್ಕು ತಿಂಗಳ ನಂತರ ಎರಡಂಕಿ ಮಟ್ಟವನ್ನು ದಾಟಿದೆ. ಮೇ ತಿಂಗಳಲ್ಲಿ ಅದು ಶೇ 12.34 ಆಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಶೇ 7.04ಕ್ಕೆ ಕಡಿಮೆ ಆಗಿದೆ. ಮಿತಿಯನ್ನು ಮೀರಿರುವ ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ 2 ಬಾರಿ ರೆಪೊ ದರ ಹೆಚ್ಚಿಸಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿರುವ ಕಾರಣ, ಸಗಟು ಹಣದುಬ್ಬರ ಪ್ರಮಾಣವು ಜೂನ್‌ ತಿಂಗಳಿನಲ್ಲಿಯೂ ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಹಣದುಬ್ಬರದ ಮೇಲೆ ಒತ್ತಡ ಸೃಷ್ಟಿಸಲಿದೆ. ಇದರಿಂದಾಗಿ ಜೂನ್ ತಿಂಗಳಿನಲ್ಲಿಯೂ ಸಗಟು ಹಣದುಬ್ಬರ ಪ್ರಮಾಣವು ಶೇ 15ರಿಂದ 16ರ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಹೇಳಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಮುಂದಿನ ಎರಡು ಸಭೆಗಳಲ್ಲಿ ರೆಪೊ ದರವನ್ನು ಒಟ್ಟು ಶೇ 0.60ರಷ್ಟು ಹೆಚ್ಚಿಸುವಸಾಧ್ಯತೆ ಇದೆ ಎಂದೂ ನಯ್ಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT