ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ | ಐಪಿಒ ಹೂಡಿಕೆಯಲ್ಲಾಗುವ 5 ತಪ್ಪುಗಳು

Last Updated 17 ಜುಲೈ 2022, 18:20 IST
ಅಕ್ಷರ ಗಾತ್ರ

ಕಳೆದ 18 ತಿಂಗಳ ಅವಧಿಯಲ್ಲಿ ದೇಶದ ನೂರಾರು ಕಂಪನಿಗಳು ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಷೇರುಪೇಟೆ ಪ್ರವೇಶಿಸಿವೆ. 2021ರಲ್ಲಿ ಒಟ್ಟು 125 ಕಂಪನಿ ಗಳು ಐಪಿಒ ನಡೆಸಿ ಸುಮಾರು ₹ 1.3 ಲಕ್ಷ ಕೋಟಿ ಸಂಗ್ರಹ ಮಾಡಿವೆ. ಅಂದರೆ,ಪ್ರತಿ ಮೂರು ದಿನಕ್ಕೆ ಒಂದು ಕಂಪನಿ ಐಪಿಒ ನಡೆಸಿದಂತಾಗಿದೆ.

ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ಇಲ್ಲದಿದ್ದರೂ 2022ರಲ್ಲಿ ಸುಮಾರು 53 ಕಂಪನಿ ಗಳು ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟು ಅಂದಾಜು ₹ 45 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿವೆ. ಆನ್‌ಲೈನ್ ಮತ್ತು ಮೊಬೈಲ್ ಅಪ್ಲಿಕೇಷನ್‌ಗಳಿಂದಾಗಿ ಐಪಿಒ ಹೂಡಿಕೆ ಸರಳವಾಗಿರುವ ಕಾರಣ, ಇತ್ತೀಚೆಗೆ ನಡೆದ ಬಹುತೇಕ ಐಪಿಒಗಳು ನಿರೀಕ್ಷೆಗೂ ಮೀರಿ ಸಬ್‌ಸ್ಕ್ರೈಬ್ ಆಗಿದ್ದವು. ಐಪಿಒ ವೇಳೆ ಷೇರು ಪಡೆದುಕೊಂಡರೆ ಆ ಷೇರು ಲಿಸ್ಟ್ ಆಗುವ ದಿನ (ಷೇರುಪೇಟೆ ಪ್ರವೇಶಿಸುವ ದಿನ) ಲಾಭ ನಿಶ್ಚಿತ ಎನ್ನುವ ಕುರುಡು ಲೆಕ್ಕಾಚಾರ ಮಾಡಿ ಕೆಲವರು ಲಾಭ ಗಳಿಸಿದ್ದಾರೆ. ಅನೇಕರು ಕೈ ಸುಟ್ಟುಕೊಂಡಿದ್ದಾರೆ.

ನಿಮಗೆ ಗೊತ್ತಿರಲಿ, ಕೆಲವು ತಿಂಗಳ ಹಿಂದೆ 13,157 ಅಂಶಗಳಲ್ಲಿದ್ದ ಬಿಎಸ್ಇ ಐಪಿಒ ಸೂಚ್ಯಂಕ ಜೂನ್ 15ರ ಸುಮಾರಿಗೆ ಧುತ್ತೆಂದು 8,761 ಅಂಶಗಳಿಗೆ ಕುಸಿದಿದೆ. ಐಪಿಒದಿಂದ ದುಡ್ಡು ಬೆಳೆಸುವ ಆಸೆಯನ್ನು ಹಿಂದೆ–ಮುಂದೆ ಯೋಚಿಸದೆ ಬೆಳೆಸಿಕೊಂಡ ಕೆಲವರು ಈಗ ತಮಗೆ ತಾವೇ ಶಾಪ ಹಾಕಿಕೊಳ್ಳುತ್ತಿದ್ದಾರೆ. ಹಾಗಾದರೆ ಅವರು ಮಾಡಿದ ತಪ್ಪೇನು?

1. ಅರೆಬರೆ ಮಾಹಿತಿ: ಐಪಿಒ ಹೂಡಿಕೆ ಮಾಡು ವಾಗ ಅರೆಬರೆ ಮಾಹಿತಿ ಆಧರಿಸಿ ಹೂಡಿಕೆ ಮಾಡುವುದು ಬಹುತೇಕರು ಮಾಡುವ ತಪ್ಪು. ಯಾವುದೋ ಲೇಖನ ಓದಿ, ಯೂಟ್ಯೂಬ್ ವಿಡಿಯೊ ನೋಡಿ, ನಿರ್ದಿಷ್ಟ ಕಂಪನಿಯಲ್ಲಿ ಹೂಡಿಕೆ ಮಾಡುವುದೋ ಬೇಡವೋ ಎನ್ನುವ ತೀರ್ಮಾನಕ್ಕೆ ಅನೇಕರು ಬರುತ್ತಾರೆ. ಆದರೆ ಕೇವಲ ಒಂದು ಲೇಖನ, ಯೂಟ್ಯೂಬ್ ವಿಡಿಯೊ ಆಧರಿಸಿ ಹೂಡಿಕೆ ನಿರ್ಧಾರ ಸರಿಯಲ್ಲ. ಕಂಪನಿ ಯಾವ ವಹಿವಾಟು ನಡೆಸುತ್ತದೆ, ಅದು ಒದಗಿಸುವ ಸರಕು-ಸೇವೆಗಳೇನು, ಗ್ರಾಹಕರು ಯಾರು, ಪ್ರತಿಸ್ಪರ್ಧಿ ಕಂಪನಿಗಳು ಯಾವುವು, ಹಣಕಾಸು ಸ್ಥಿತಿಗತಿ ಹೇಗಿದೆ, ಸಾಲದ ಪ್ರಮಾಣ ಎಷ್ಟಿದೆ, ವ್ಯಾಜ್ಯಗಳೇನಾದರೂ ಇವೆಯಾ, ಕಂಪನಿಯ ಆಡಳಿತ ಮಂಡಳಿಯಲ್ಲಿ ಅನುಭವಿಗಳು ಮತ್ತು ವಿಶ್ವಾಸಾರ್ಹ ವ್ಯಕ್ತಿಗಳಿದ್ದಾರಾ... ಹೀಗೆ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಎಲ್ಲ ಲೆಕ್ಕಾಚಾರ ಮಾಡಿದ ಬಳಿಕ ಹೂಡಿಕೆ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ಐಪಿಒ ಹೂಡಿಕೆ ಜೂಜಾಟದಂತಾಗು ತ್ತದೆ.

2. ಮೌಲ್ಯಮಾಪನದಲ್ಲಿ ವೈಫಲ್ಯ: ಇತ್ತೀಚಿನವ ರೆಗೂ ತೆರಿಗೆ ಪಾವತಿಗೂ ಮುನ್ನ ಯಾವ ಕಂಪನಿಗಳು ಕನಿಷ್ಠ ₹ 15 ಕೋಟಿ ಲಾಭ ಹೊಂದಿರುತ್ತವೆಯೋ ಅಂತಹ ಕಂಪನಿಗಳು ಮಾತ್ರ ಷೇರು ಮಾರುಕಟ್ಟೆ ಪ್ರವೇಶಿಸ ಬಹುದು ಎನ್ನುವ ನಿಯಮವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಜಾರಿಯಲ್ಲಿಟ್ಟಿತ್ತು. ಇದರಿಂದ ತಂತ್ರಜ್ಞಾನ ಆಧಾರಿತವಾದ ಬಹುತೇಕ ಕಂಪನಿಗಳು ಷೇರು ಮಾರು ಕಟ್ಟೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ 2020ರಲ್ಲಿ ಸೆಬಿ ತನ್ನ ನಿಯಮ ಬದಲಾ ಯಿಸಿತು. ಸಾಂಸ್ಥಿಕ ಹೂಡಿಕೆದಾರರು ಶೇ 75 ರಷ್ಟು ಷೇರುಗಳನ್ನು ಹೊಂದಿದ್ದರೆ ನಷ್ಟ ಅನುಭವಿಸುತ್ತಿರುವ ಕಂಪನಿಗಳೂ ಷೇರು ಮಾರುಕಟ್ಟೆ ಪ್ರವೇಶಿಸಬಹುದು ಎಂದು ಹೇಳಿತು. ಇದರ ನಂತರ ಪೇಟಿಎಂ ಮತ್ತು ಜೊಮ್ಯಾಟೊದಂತಹ ತಂತ್ರಜ್ಞಾನ ಆಧಾರಿತ ಕಂಪನಿಗಳು ಷೇರುಪೇಟೆ ಪ್ರವೇಶಿಸಲು ಸಾಧ್ಯವಾಯಿತು.

ಹೊಸ ತಲೆಮಾರಿನ ಕಂಪನಿಗಳ ಮಾರುಕಟ್ಟೆ ಮೌಲ್ಯ ಅಳೆಯುವುದು ಸದ್ಯದ ಮಟ್ಟಿಗೆ ಇರುವ ದೊಡ್ಡ ಸವಾಲು. ಷೇರಿನ ಬೆಲೆ ನಿಗದಿ ಯಾವ ರೀತಿ ಆಗಿದೆ, ಕಂಪನಿಯ ಷೇರು ನಿಜಕ್ಕೂ ಅಷ್ಟು ಮೌಲ್ಯ ಹೊಂದಿದೆಯಾ, ನಷ್ಟದಲ್ಲಿರುವ ಕಂಪನಿಯ ಷೇರಿನ ಮೌಲ್ಯ ಅಳೆಯುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಹೂಡಿಕೆದಾರರಲ್ಲಿ ಇವೆ. ಇದರ ಅಂದಾಜಿಲ್ಲದೆ ಐಪಿಒ ಹೂಡಿಕೆ ನಿರ್ಧಾರ ಮಾಡುವ ಹೂಡಿಕೆದಾರರು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ.

3. ಲಿಸ್ಟಿಂಗ್ ಲಾಭಕ್ಕಾಗಿ ಹೂಡಿಕೆ: ಕಂಪನಿಯ ವಹಿವಾಟು ಏನು, ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಲಿಸ್ಟಿಂಗ್ ಗೇನ್ಸ್‌ಗಾಗಿ ಹೂಡಿಕೆ ಮಾಡುವುದು ತಪ್ಪು. ಷೇರುಪೇಟೆ ಸೂಚ್ಯಂಕದಲ್ಲಿ ಕಂಪನಿಯೊಂದು ಮೊದಲ ಬಾರಿಗೆ ಸ್ಥಾನ ಪಡೆದುಕೊಳ್ಳುವಾಗ ಅದರ ಬೆಲೆ ಹೆಚ್ಚಳವಾಗಿ ಐಪಿಒದಲ್ಲಿ ಷೇರು ಪಡೆದವರಿಗೆ ಲಾಭವಾಗುವುದನ್ನು ಲಿಸ್ಟಿಂಗ್ ಗೇನ್ಸ್ ಎನ್ನುತ್ತಾರೆ. ಕಂಪನಿ ಷೇರುಪೇಟೆ ಪ್ರವೇಶಿಸಿದ ಮೊದಲ ದಿನವೇ ಇಲ್ಲಿ ಹೂಡಿಕೆದಾರ ಲಾಭಗಳಿಸಿಕೊಳ್ಳುವ ಲೆಕ್ಕಾಚಾರ ದಲ್ಲಿರುತ್ತಾನೆ. ಆದರೆ ಲಿಸ್ಟಿಂಗ್ ದಿನ ಷೇರಿನ ಬೆಲೆ ಹೆಚ್ಚಳವಾಗುತ್ತದೆ ಎನ್ನುವುದಕ್ಕೆ ಖಾತರಿ ಇರುವುದಿಲ್ಲ; ನಷ್ಟದ ಸಾಧ್ಯತೆಯೂ ಇರುತ್ತದೆ.

2020-21ರಲ್ಲಿ ನಡೆದ ಹಲವು ಐಪಿಒಗಳಲ್ಲಿ ಲಾಭ–ನಷ್ಟ ಎರಡೂ ಆದ ಉದಾಹರಣೆ ನಮ್ಮ ಮುಂದಿದೆ. ಹಾಗಾಗಿ ವಾಸ್ತವಕ್ಕೆ ಹತ್ತಿರದ ಅಂಶಗಳನ್ನು ಅರಿತು ಹೂಡಿಕೆ ತೀರ್ಮಾನ ಮಾಡುವುದು ಜಾಣತನ.

4. ಗ್ರೇ ಮಾರ್ಕೆಟ್ ಪ್ರೀಮಿಯಂ ಬಗ್ಗೆ ಅತಿ ವಿಶ್ವಾಸ: ಷೇರು ಮಾರುಕಟ್ಟೆಗೆ ಸೇರ್ಪಡೆಗೊಳ್ಳದ ಷೇರುಗಳಲ್ಲಿ ಹೂಡಿಕೆದಾರರು ಅನಧಿಕೃತವಾಗಿ ವಹಿವಾಟು ನಡೆಸುವುದನ್ನು ಗ್ರೇ ಮಾರ್ಕೆಟ್ ಎಂದು ಕರೆಯುತ್ತಾರೆ. ಅನೇಕರು ಐಪಿಒ ಹೂಡಿಕೆ ನಿರ್ಧಾರವನ್ನು ಗ್ರೇ ಮಾರ್ಕೆಟ್ ಪ್ರೀಮಿಯಂ ಆಧರಿಸಿ ತೆಗೆದುಕೊಳ್ಳುತ್ತಾರೆ. ಗ್ರೇ ಮಾರ್ಕೆಟ್ ಪ್ರೀಮಿಯಂ ಹೆಚ್ಚಿಗೆ ಇದೆ ಎಂದರೆ ಲಿಸ್ಟಿಂಗ್ ಗೇನ್ಸ್ ಖಂಡಿತ ಸಿಗುತ್ತದೆ ಎನ್ನುವ ಅಂದಾಜು ಕೆಲವು ಹೂಡಿಕೆದಾರರದ್ದು. ಆದರೆ ಗ್ರೇ ಮಾರ್ಕೆಟ್ ಪ್ರೀಮಿಯಂ ನಂಬಿಕೆಗೆ ಅರ್ಹವಲ್ಲ. ಅದೊಂದು ರೀತಿಯ ಅರ್ಧಸತ್ಯ, ಯಾವಾಗ ಬೇಕಾದರೂ ಪೂರ್ತಿ ಸುಳ್ಳಾಗಬಹುದು.

5. ಗುಂಪಲ್ಲಿ ಗೋವಿಂದ ಎನ್ನುವ ಲೆಕ್ಕಾಚಾರ: ಯಾಕೆ ಐಪಿಒ ಹೂಡಿಕೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಕೇಳಿದರೆ ‘ನನ್ನ ಸ್ನೇಹಿತ ಹೇಳಿದ ಎಂದು ಮಾಡಿದೆ. ನನ್ನ ಅಕ್ಕ ಹೇಳಿದ್ರು ಅಂತ ಬಿಡ್ ಮಾಡಿದೆ’ ಎನ್ನುವವರು ಇದ್ದಾರೆ. ಹೂಡಿಕೆ ಮಾಡುವಾಗ ಗುಂಪಲ್ಲಿ ಗೋವಿಂದ ಎನ್ನುವ ಸಮೂಹ ಸನ್ನಿಯ ಮನಃಸ್ಥಿತಿ ಬೇಡ. ರಾತ್ರಿ ಕಂಡ ಬಾವಿಗೆ ಹಗಲು ಬೀಳಬಾರದು ಎನ್ನುವ ಮಾತು ನೆನಪಿರಲಿ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT