ಶುಕ್ರವಾರ, ಫೆಬ್ರವರಿ 28, 2020
19 °C

ಪ್ರತಿ ಗಂಟೆಗೆ ನಿಮ್ಮ ದುಡಿಮೆ ಎಷ್ಟು?

ನರಸಿಂಹ ಬಿ. Updated:

ಅಕ್ಷರ ಗಾತ್ರ : | |

prajavani

ನನ್ನ ಪ್ರತಿ ಗಂಟೆಯ ದುಡಿಮೆ ಎಷ್ಟು. ದಿನಕ್ಕೆ ಎಷ್ಟು ದುಡಿಯುತ್ತೀನೆ. ವಾರಕ್ಕೆ ನನ್ನ ಗಳಿಕೆ ಎಷ್ಟು– ಬಹುಶಃ ಇಂತಹ ಪ್ರಶ್ನೆಗಳನ್ನು ನಿಮಗೆ ನೀವು ಕೇಳಿಕೊಂಡಿರುವುದಿಲ್ಲ. ಶ್ರೀಮಂತರಾಗುವ ಇಚ್ಛೆ ನಿಮಗಿದ್ದಲ್ಲಿ ಈ ಪ್ರಶ್ನೆಗಳನ್ನು ನೀವು ಕೇಳಿಕೊಳ್ಳಲೇಬೇಕು. ಸಮಯದ ಮೌಲ್ಯ ಹೆಚ್ಚಿಸಿಕೊಂಡಾಗ ಮಾತ್ರ ಶ್ರೀಮಂತಿಕೆ ನಿಮ್ಮ ಸ್ವತ್ತಾಗುತ್ತದೆ. ಸಮಯದ ಮೌಲ್ಯ ವೃದ್ಧಿಸಬೇಕು ಅಂದರೆ ನಿರ್ದಿಷ್ಟ ಕಾರ್ಯಕ್ಷೇತ್ರದಲ್ಲಿ ಸಾಮರ್ಥ್ಯ ಮತ್ತು ಕೌಶಲಗಳ ಸದ್ಬಳಕೆಯನ್ನು ಸಿದ್ಧಿಸಿಕೊಳ್ಳಬೇಕು. ಈ ಅಂಕಣದಲ್ಲಿ ನಿಮ್ಮ ಸಮಯದ ಮೌಲ್ಯ ಎಷ್ಟು. ಗಳಿಕೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ವಿರಾಟ್ ಗಳಿಕೆ: ವಿರಾಟ್ ಕೊಹ್ಲಿ ಅವರು ಇಡೀ ಜಗತ್ತಿಗೆ ಪರಿಚಿತರಾಗಿರೋದು ಒಬ್ಬ ಶ್ರೇಷ್ಟ ಕ್ರಿಕೆಟಿಗನಾಗಿ. ಆದರೆ, ಅವರ ₹252.72 ವಾರ್ಷಿಕ ಆದಾಯದ ಪೈಕಿ ₹24 ಕೋಟಿ ಮಾತ್ರ ಕ್ರಿಕೆಟ್‌ನಿಂದ ಬರುತ್ತದೆ. ಬಿಸಿಸಿಐ ವೇತನದ ರೂಪದಲ್ಲಿ ₹7 ಕೋಟಿ ನೀಡಿದರೆ, ರಾಯಲ್ ಚಾಲೆಂಜರ್ಸ್ ಐಪಿಎಲ್ ತಂಡದಿಂದ  ₹17 ಕೋಟಿ ಸಿಗುತ್ತಿದೆ. ಇನ್ನುಳಿದ ₹228 ಕೋಟಿ ಜಾಹೀರಾತು, ಸಹಭಾಗಿತ್ವ, ಉದ್ದಿಮೆಗಳ ಜತೆಗಿನ ಒಪ್ಪಂದ ಮುಂತಾದ ಮೂಲಗಳಿಂದ ಬರುತ್ತಿದೆ. ಅವರ ಒಂದು ದಿನದ ದುಡಿಮೆ ₹69.23 ಲಕ್ಷ. ಪ್ರತಿ ಗಂಟೆಯ ಗಳಿಕೆ ₹2.88 ಲಕ್ಷ.

ನಿಮ್ಮ ಆದಾಯದ ಮೂಲ ಹೆಚ್ಚಿಸಿಕೊಳ್ಳಿ: ನಮ್ಮಲ್ಲಿ ಬಹುತೇಕರು ಒಂದೇ ಆದಾಯದ ಮೂಲವನ್ನು ನೆಚ್ಚಿಕೊಂಡು ಬದುಕುತ್ತಾರೆ. ಆದರೆ, ಶ್ರೀಮಂತರಾಗಬೇಕು ಅಂದರೆ ಆದಾಯದ ಮೂಲಗಳು ಹೆಚ್ಚಬೇಕು.ಆದಾಯದ ಮೂಲಗಳ ಹೆಚ್ಚಬೇಕು ಅಂದರೆ ನಾವು ಮಾಡುವ ಕೆಲಸವನ್ನು ಸರ್ವಶ್ರೇಷ್ಠ ರೀತಿಯಲ್ಲಿ ನಿರ್ವಹಿಸುವ ಜತಗೆ ನಿರ್ದಿಷ್ಠ ಕಾರ್ಯಕ್ಷೇತ್ರದಲ್ಲಿ ಪರಿಣತಿ ಹೆಚ್ಚಿಸಿಕೊಳ್ಳಬೇಕು.

ಉದಾಹರಣೆಗೆ ಒಬ್ಬ ಸಾಮಾನ್ಯ ಶಿಕ್ಷಕ, ಪಾಠ ಮಾಡಿದಾಗ ಬರುವ ಮಾಸಿಕ ವೇತನದಿಂದ ಜೀವನ ನಡೆಸುತ್ತಿರುತ್ತಾನೆ. ಆದರೆ, ಒಬ್ಬ ಮೇಧಾವಿ ಶಿಕ್ಷಕ ಪಾಠ ಮಾಡುತ್ತಾನೆ. ಪುಸ್ತಕಗಳನ್ನು ಬರೆಯುತ್ತಾನೆ. ದೊಡ್ಡ ವೇದಿಕೆಗಳಲ್ಲಿ ಉಪನ್ಯಾಸ ನೀಡುತ್ತಾನೆ. ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಾನೆ. ಶಿಕ್ಷಣ ತಜ್ಞನಾಗಿ ಕೆಲಸ ಮಾಡುತ್ತಾನೆ. ಶಾಲೆ ಆರಂಭಿಸುತ್ತಾನೆ.

ಹೀಗೆ ಒಂದೇ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ. ತನ್ಮೂಲಕ ತನ್ನ ಆದಾಯ ಹೆಚ್ಚಿಸಿಕೊಂಡು ಸ್ಥಿತಿವಂತನಾಗುತ್ತಾನೆ.

ಆದಾಯಕ್ಕೆ ಹತ್ತಾರು ದಾರಿ: ವೇತನ, ಸಂಭಾವನೆ, ಕೃಷಿ ಆದಾಯ, ಬಾಡಿಗೆ ಆದಾಯ, ಬಡ್ಡಿ ಆದಾಯ, ಷೇರು ಮಾರುಕಟ್ಟೆ ಹೂಡಿಕೆ ಮೇಲೆ ಲಾಭಾಂಶ, ಹಕ್ಕುಸ್ವಾಮ್ಯ (ರೈಟ್ಸ್), ರಾಯಲ್ಟಿ (ರಾಯಧನ), ಸೇರಿ ಹಲವು ರೀತಿಯ ಆದಾಯಗಳಿರುತ್ತವೆ. ಈ ರೀತಿಯ ಆದಾಯದ ಮೂಲಗಳನ್ನು ನೀವು ಎಷ್ಟರಮಟ್ಟಿಗೆ ಹೆಚ್ಚಿಸಿಕೊಳ್ಳುವಿರೋ ನೀವು ಅಷ್ಟು ಶ್ರೀಮಂತರಾಗುವಿರಿ.

ಬಜೆಟ್ ನಂತರ ಪೇಟೆ ಚೇತರಿಕೆ

ಕೇಂದ್ರ ಬಜೆಟ್ ಮಂಡನೆ ದಿನ 900 ಕ್ಕೂ ಹೆಚ್ಚು ಅಂಶಗಳ ಇಳಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಚೇತರಿಕೆ ಹಾದಿಗೆ ಮರಳಿವೆ. ಕಚ್ಚಾ ತೈಲ ಬೆಲೆ ಇಳಿಕೆ, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ರಿಯಲ್ ಎಸ್ಟೇಟ್ ಮತ್ತು ಸಣ್ಣ-ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕೆ ಘೋಷಣೆಗಳು, ರೆಪೊ ದರ ಯಥಾಸ್ಥಿತಿ ಸೇರಿದಂತೆ ಪ್ರಮುಖ ಬೆಳವಣಿಗೆಗಳು ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಕೆಗೆ ನೆರವಾಗಿವೆ.

ಆದರೆ 800 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್‌ನಿಂದ ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟಿನ ಉತ್ಸಾಹ ಬತ್ತಿದೆ.

41,142 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅಧಿಯಲ್ಲಿ ಶೇ 1 ರಷ್ಟು ಗಳಿಕೆ ಕಂಡಿದೆ. 12,098 ಅಂಶಗಳಲ್ಲಿ ವಹಿವಾಟು ಮುಗಿಸಿರುವ ‘ನಿಫ್ಟಿ’ ಶೇ 1.1 ರಷ್ಟು ಸುಧಾರಿಸಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ ಕೂಡ ಶೇ 2 ರಷ್ಟು ಗಳಿಸಿದೆ.

ವಲಯವಾರು ಪ್ರಗತಿ: ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 5 ರಷ್ಟು ಜಿಗಿದಿದೆ. ಮಾಹಿತಿ ತಂತ್ರಜ್ಞಾನ ವಲಯ ಶೇ 2, ಫಾರ್ಮಾ ವಲಯ ಶೇ 2.5 , ಬ್ಯಾಂಕ್ ಶೇ 1.2 ರಷ್ಟು ಜಿಗಿದಿವೆ. ಆದರೆ, ರಿಯಲ್ ಎಸ್ಟೇಟ್ ಶೇ 3.3, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.2 ಸೇರಿ ವಾಹನ ತಯಾರಿಕಾ ವಲಯ ಕೂಡ ಕುಸಿತ ದಾಖಲಿಸಿವೆ.

ಗಳಿಕೆ - ಇಳಿಕೆ: ಜೆಎಸ್‌ಡಬ್ಲ್ಯು ಸ್ಟೀಲ್ ಶೇ 14.12, ಟಾಟಾ ಸ್ಟೀಲ್ ಶೇ 11.14, ಬಿಪಿಸಿಎಲ್ ಶೇ 10.80, ಬಜಾಜ್ ಫೈನಾನ್ಸ್ ಶೇ 8.85, ಟೈಟಾನ್ ಶೇ 8.67, ಏರ್‌ಟೆಲ್ ಶೇ 8.50 ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶೇ 7.90 ರಷ್ಟು ಗಳಿಸಿವೆ.

ಐಟಿಸಿ ಶೇ 2.56, ಐಷರ್ ಮೋಟರ್ಸ್ ಶೇ 1.61, ಟಿಸಿಎಸ್ ಶೇ 1.31, ಜೀ ಎಂಟರ್ಟೇನ್‌ಮೆಂಟ್ ಶೇ 1.27, ಇನ್ಫೊಸಿಸ್ ಶೇ 0.28 ರಷ್ಟು ಕುಸಿದಿವೆ.

ಮುನ್ನೋಟ: ಫೆಬ್ರುವರಿ 11 ರಂದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ), ಕೈಗಾರಿಕಾ ಉತ್ಪಾದನೆ ದತ್ತಾಂಶ (ಐಐಪಿ) ಹೊರಬೀಳಲಿದೆ. ಗೇಲ್, ಕೋಲ್ ಇಂಡಿಯಾ, ಗ್ರಾಸಿಮ್, ಬಿಪಿಸಿಎಲ್, ಹಿಂಡಾಲ್ಕೊ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಇದರ ಜತೆ ಕೊರೊನಾ ವೈರಸ್ ನಿಯಂತ್ರಣ ಕೂಡ ಪೇಟೆಯ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿದೆ.

ಸದ್ಯಕ್ಕೆ ಮಾರುಕಟ್ಟೆಯು ಅಸ್ಥಿರ ಸ್ಥಿತಿಯಲ್ಲಿ ಇರುವುದರಿಂದ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಬಜೆಟ್ ನಂತರದಲ್ಲಿ ಕೃಷಿ, ನೀರು ಪೂರೈಕೆ ಪೈಪ್ ಉತ್ಪಾದನೆ, ಗ್ರಾಹಕ ದಿನಬಳಕೆ ವಸ್ತುಗಳು (ಎಫ್‌ಎಂಸಿಜಿ) ಮತ್ತು ಚರ್ಮೋದ್ಯಮದ ಷೇರುಗಳಲ್ಲಿ ಒಲವು ಹೆಚ್ಚಾಗಿದೆ.

(ಲೇಖಕ: ಇಂಡಿಯನ್ ಮನಿಡಾಟ್‌ಕಾಂ ಉಪಾಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು