ಪ್ರಶ್ನೋತ್ತರ: ಬ್ಯಾಂಕು ಖಾಸಗೀಕರಣವಾದಲ್ಲಿ ನಮ್ಮ ಹಣಕ್ಕೆ ಭದ್ರತೆ ಇದೆಯೇ?

- ನಾಗಮೋಹನ್, ರಾಜಾಜಿನಗರ, ಬೆಂಗಳೂರು
l ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ನಾನು ಮತ್ತು ಮಕ್ಕಳು ಠೇವಣಿ ಹಾಗೂ ಪಿಪಿಎಫ್ ಖಾತೆಯನ್ನು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೊಂದಿದ್ದೇವೆ. ಸುಮಾರು ₹ 35 ಲಕ್ಷ ಠೇವಣಿ ಇದೆ. ಈ ಬ್ಯಾಂಕು ಖಾಸಗೀಕರಣವಾದಲ್ಲಿ ನಮ್ಮ ಹಣಕ್ಕೆ ಭದ್ರತೆ ಇಲ್ಲವಾದ್ದರಿಂದ ಠೇವಣಿ ಹಾಗೂ ಪಿಪಿಎಫ್‌ಅನ್ನು ಅವಧಿಗೆ ಮುನ್ನ ಪಡೆದು ಬೇರೊಂದು ಸರ್ಕಾರಿ ಬ್ಯಾಂಕ್‌ನಲ್ಲಿ ಇಡಲು ನಿಮ್ಮ ಅಭಿಪ್ರಾಯ ತಿಳಿಸಿ.
ಉತ್ತರ: ಸರ್ಕಾರಿ ಸ್ವಾಮ್ಯದ ಬ್ಯಾಂಕು ಖಾಸಗೀಕರಣವಾದಲ್ಲಿ ಠೇವಣಿದಾರನಿಗೆ ಭದ್ರತೆ ದೊರಕದು ಎನ್ನುವ ವಿಚಾರ ಸತ್ಯಕ್ಕೆ ದೂರ. ಬಹಳಷ್ಟು ಜನರು ನನಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವಿಚಾರದಲ್ಲಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ.
ಎಕ್ಸಿಸ್ ಬ್ಯಾಂಕ್, ಐಸಿಐಸಿಐ, ಕೋಟಕ್ ಮಹೀಂದ್ರ ಹಾಗೂ ನಮ್ಮ ರಾಜ್ಯದ ಕರ್ಣಾಟಕ ಬ್ಯಾಂಕ್ ಇವೆಲ್ಲವೂ ಖಾಸಗಿ ಬ್ಯಾಂಕ್‌ಗಳು. ಇವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಜೊತೆ ಪೈಪೋಟಿ ನಡೆಸಿ, ಉತ್ತಮ ಫಲಿತಾಂಶ ಹಾಗೂ ಡಿವಿಡೆಂಡ್ ಕೊಡುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬ್ಯಾಂಕ್‌ಗಳ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಹೊಂದಿವೆ. ಮುಖ್ಯವಾಗಿ ಖಾಸಗಿ ಬ್ಯಾಂಕ್‌ಗಳಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದ ಕಾರಣ ಇಲ್ಲಿಯ ಅನುತ್ಪಾದಕ ಆಸ್ತಿ (ಎನ್‌ಪಿಎ) ಕೂಡಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್
ಗಳಿಗಿಂತಲೂ ಕಡಿಮೆ ಇರುತ್ತದೆ. ಅವಧಿಗೆ ಮುನ್ನ ಠೇವಣಿ ಹಿಂಪಡೆದು ನಷ್ಟ ಅನುಭವಿಸಿ ಬ್ಯಾಂಕ್ ಆಫ್ ಇಂಡಿಯಾದಿಂದ ಹೊರಬರುವ ಅವಶ್ಯಕತೆ ಇಲ್ಲ. ಪಿಪಿಎಫ್, ಸುಕನ್ಯಾ ಸಮೃದ್ಧಿ, ಹಿರಿಯನಾಗರಿಕ ಠೇವಣಿಗಳನ್ನು ಜನರ ಅನುಕೂಲಕ್ಕಾಗಿ ಬ್ಯಾಂಕ್‌ಗಳಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಠೇವಣಿಗೂ ಬ್ಯಾಂಕ್‌ಗಳಿಗೂ ಸಂಬಂಧವಿಲ್ಲ. ಈ ಹಣವನ್ನು ಬ್ಯಾಂಕ್ ಮುಟ್ಟುವಂತಿಲ್ಲ. ಈ ಹಣ ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದೆ.
- ಹೆಸರು, ಊರು ಬೇಡ
l ಪ್ರಶ್ನೆ: ನಾನು ನಿವೃತ್ತ ನೌಕರ. ವಯಸ್ಸು 85 ವರ್ಷ. ನನ್ನ ವಾರ್ಷಿಕ ಪಿಂಚಣಿ ₹ 3,09,168. ಸ್ಥಳೀಯ ಕರ್ಣಾಟಕ ಬ್ಯಾಂಕ್‌ನಲ್ಲಿ ₹ 2.26 ಲಕ್ಷ, ಎಸ್‌ಬಿಐನಲ್ಲಿ ₹ 1.91 ಲಕ್ಷ, ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ₹ 4.50 ಲಕ್ಷ ಉಳಿತಾಯ ಮಾಡಿದ್ದೇನೆ. ಅಂಚೆ ಕಚೇರಿಯಲ್ಲಿ ₹ 1,000ಕ್ಕೆ ಆರ್.ಡಿ. ಇದೆ. ನನಗೆ ತುಮಕೂರಿನಲ್ಲಿ ಸ್ವಂತ ಮನೆ ಇದೆ. ಉಳಿತಾಯದ ವಿಚಾರದಲ್ಲಿ ಹಾಗೂ ತೆರಿಗೆ ಬಗ್ಗೆ ವಿಸ್ತಾರವಾಗಿ ತಿಳಿಸಿ.
ಉತ್ತರ: ನಿಮ್ಮ ಉಳಿತಾಯ ಚೆನ್ನಾಗಿದೆ. ನಿಮ್ಮ ಠೇವಣಿಗೆ ನಾಮನಿರ್ದೇಶನ ಮಾಡಿರಬಹುದು ಎಂದು ಭಾವಿಸುತ್ತೇನೆ. ನೀವು ಸರ್ಕಾರದ ನಿವೃತ್ತ ನೌಕರರಾದ್ದರಿಂದ ನಿಮಗೆ ಸೆಕ್ಷನ್ 16 (ಎ) ಆಧಾರದ ಮೇಲೆ ಸ್ಟ್ಯಾಂಡರ್ಡ್ ಡಿಡಕ್ಷನ್ ₹ 50 ಸಾವಿರ, ಹಿರಿಯ ನಾಗರಿಕರಾದ್ದರಿಂದ ಬ್ಯಾಂಕ್ ಬಡ್ಡಿಯಲ್ಲಿ ಸೆಕ್ಷನ್ 80ಟಿಟಿಬಿಯಲ್ಲಿ ₹ 50 ಸಾವಿರ ವಿನಾಯಿತಿ ಇದೆ. ಇವೆರಡನ್ನೂ ನಿಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ಕೊಡಬಹುದು. ಹೀಗೆ ಮಾಡಿದಾಗ ನಿಮ್ಮ ವಾರ್ಷಿಕ ಪಿಂಚಣಿ ಆದಾಯ ಹಾಗೂ ಠೇವಣಿ ಬಡ್ಡಿ ಸೇರಿಸಿ ಒಟ್ಟು ಆದಾಯ ₹ 5 ಲಕ್ಷ ದಾಟದಿರುವುದರಿಂದ ನಿಮಗೆ ಆದಾಯ ತೆರಿಗೆ ಬರುವುದಿಲ್ಲ ಹಾಗೂ ನೀವು ಅತೀ ಹಿರಿಯ ನಾಗರಿಕರಾದ್ದರಿಂದ ಐ.ಟಿ. ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ. ನಿಮ್ಮ ತುಮಕೂರು ಮನೆ ವಿಚಾರದಲ್ಲಿ ನೀವು ಉಯಿಲು ಪತ್ರ (Will) ಬರೆಯಿರಿ. ನೀವು ಇನ್ನು ಪತ್ರ ಬರೆಯುವುದು ಬೇಡ. ಏನೇ ಬೇಕಾದರೂ ದೂರವಾಣಿ ಮುಖಾಂತರ ನನ್ನನ್ನು ಸಂಪರ್ಕಿಸಿ.
- ಹೆಸರು ಬೇಡ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ
l ಪ್ರಶ್ನೆ: ನಾನು ಒಂದು ಆಸ್ತಿಯನ್ನು 1990ರಲ್ಲಿ ₹ 15 ಸಾವಿರಕ್ಕೆ ಕೊಂಡಿದ್ದೇನೆ. ಅದನ್ನು ಈಗ ಮಾರಾಟ ಮಾಡಿದರೆ ₹ 3 ಕೋಟಿ ಬರುತ್ತದೆ. ಇನ್ನೊಂದು ಆಸ್ತಿ ಈ ಹಣದಿಂದ ಕೊಂಡಾಗ ತೆರಿಗೆ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದೀರಿ. ನಾನು ನನ್ನ ತಂಗಿಗೆ ಈ ಹಣದಿಂದ ಮನೆ ಕಟ್ಟಿಸಿಕೊಡಲು ಸಾಧ್ಯವಿದೆಯೇ, ಅಥವಾ ಬೇರಾವ ದಾರಿ ಇದೆ? ಹೀಗೆ ನಾನು ಕೊಟ್ಟರೆ ಅವರಿಗೆ ತೆರಿಗೆ ಬರಬಹುದೇ ತಿಳಿಸಿ.
ಉತ್ತರ: ಒಂದು ಆಸ್ತಿ ಮಾರಾಟ ಮಾಡಿ ಬಂದ ಸಂಪೂರ್ಣ ಹಣದಿಂದ ಮೊತ್ತೊಂದು ನಿವೇಶನ– ಮನೆ ಮಾಡಬಹುದು. ಹೀಗೆ ಮಾಡುವಾಗ ಅದೇ ವ್ಯಕ್ತಿಯ ಹೆಸರಿನಲ್ಲಿ ಮಾಡಬೇಕಾಗುತ್ತದೆ. ನೀವು ಆಸ್ತಿ ಮಾರಾಟ ಮಾಡಿ, ನಿಮ್ಮ ಹೆಸರಿನಲ್ಲಿಯೇ ನಿವೇಶನ–ಮನೆ ಮಾಡಿ. ಮುಂದೆ ಬೇಕಾದರೆ ತಂಗಿಯ ಹೆಸರಿನಲ್ಲಿ ದಾನ ಪತ್ರ (Gift Deed) ಮಾಡಿಕೊಡಿ. ರಕ್ತ ಸಂಬಂಧಿಗಳಲ್ಲಿ ದಾನಪತ್ರ ಮಾಡುವಾಗ ದಾನ ಕೊಡುವ ಅಥವಾ ದಾನ ಪಡೆಯುವ ವ್ಯಕ್ತಿಗಳಿಗೆ ಯಾವುದೇ ತರಹದ ತೆರಿಗೆ ಬರುವುದಿಲ್ಲ.
ಇದೇ ವೇಳೆ ದಾನಪತ್ರ ಮುಖಾಂತರ ಪಡೆದ ಆಸ್ತಿಯನ್ನು ನಿಮ್ಮ ತಂಗಿಯು ಮುಂದೆ ಮಾರಾಟ ಮಾಡುವಾಗ ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ. ಆಸ್ತಿ ಅನುಭವಿಸುವಾಗ ತೆರಿಗೆ ಬರುವುದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.