ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: 75 ವರ್ಷ ಮೀರಿದ ವ್ಯಕ್ತಿಗಳಿಗೆ ತೆರಿಗೆ ವಿವರ ಸಲ್ಲಿಸಲು ವಿನಾಯಿತಿ

Last Updated 18 ಅಕ್ಟೋಬರ್ 2022, 20:15 IST
ಅಕ್ಷರ ಗಾತ್ರ

ಮೂರ್ತಿ, ಎನ್.ಆರ್. ಕಾಲೊನಿ, ಬೆಂಗಳೂರು

l ಪ್ರಶ್ನೆ: ನಾನು ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಸುಮಾರು 36 ವರ್ಷ ಕಾರ್ಯನಿರ್ವಹಿಸಿ ನಿವೃತ್ತನಾಗಿರುತ್ತೇನೆ. ನನಗೆ ಈಗ 85 ವರ್ಷ ವಯಸ್ಸು. ನಿವೃತ್ತಿಯ ನಂತರ ಸರ್ಕಾರದಿಂದ ಬಂದ ಹಣದಿಂದ ಹಾಗೂ ನನ್ನ ಉಳಿತಾಯದ ಹಣದಿಂದ ಎಲ್ಐಸಿ ಹಾಗೂ ಅಂಚೆ ಕಚೇರಿಯಲ್ಲಿ ಎಫ್.ಡಿ. ಮಾಡಿರುತ್ತೇನೆ. ಈ ಹೂಡಿಕೆ ಸುಮಾರು ₹ 6-7 ಲಕ್ಷ ಆಗಿರುತ್ತದೆ. ಇದಕ್ಕೆ ನಾನು ತೆರಿಗೆ ಕೊಡಬೇಕೇ? ನನಗೆ ತೆರಿಗೆ ವಿನಾಯಿತಿ ಇದೆಯೇ?

ಉತ್ತರ: ನಿಮಗೆ 85 ವರ್ಷ ವಯಸ್ಸಾಗಿರುವ ಕಾರಣ ನೀವು ಅತಿ ಹಿರಿಯ ನಾಗರಿಕರ ವರ್ಗದಲ್ಲಿ ಬರುತ್ತೀರಿ. ಆದಾಯ ತೆರಿಗೆ ನಿಯಮದಂತೆ ನಿಮಗೆ ₹ 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಆದಾಯವು ಇದಕ್ಕಿಂತ ಹೆಚ್ಚಿಗೆ ಇದ್ದರೆ ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ. ನಿಮ್ಮ ಪಿಂಚಣಿ ಹಾಗೂ ಬಡ್ಡಿ ಆದಾಯ ಒಟ್ಟು ಸೇರಿಸಿದಾಗ ₹ 5 ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು ತೆರಿಗೆ ವ್ಯಾಪ್ತಿಗೆ ಬರುತ್ತೀರಿ, ಆಗ ನೀವು ತೆರಿಗೆ ವಿವರ ಸಲ್ಲಿಸಬೇಕು. ಆದರೆ ಒಟ್ಟು ಆದಾಯದಲ್ಲಿ ನಿಮಗೆ ಮೂಲ ಆದಾಯ ಕಡಿತ ₹ 50,000 ಹಾಗೂ ಪ್ರಸ್ತುತ ನಿಮ್ಮ ಅಂಚೆ ಕಚೇರಿಯ ಎಫ್.ಡಿ ಹೂಡಿಕೆಗೆ ಸಿಗುವ ಬಡ್ಡಿ ಆದಾಯಕ್ಕೆ ₹ 50,000ದವರೆಗೆ ತೆರಿಗೆ ವಿನಾಯಿತಿ ಇದೆ.

75 ವರ್ಷ ವಯಸ್ಸು ಮೀರಿದ ವ್ಯಕ್ತಿಗಳಿಗೆ ತೆರಿಗೆ ವಿವರ ಸಲ್ಲಿಸುವುದಕ್ಕೆ ಇರುವ ವಿನಾಯಿತಿ ಬಗ್ಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194ಪಿ ವಿವರಿಸುತ್ತದೆ. ಇದರ ಪ್ರಯೋಜನ ಪಡೆಯಲು, ತೆರಿಗೆದಾರ ನಿವಾಸಿ ಭಾರತೀಯನಾಗಿರಬೇಕು. ಅವರು ಪಿಂಚಣಿ ಪಡೆಯುತ್ತಿರಬೇಕು ಮತ್ತು ಬಡ್ಡಿ ಆದಾಯವಿದ್ದರೆ ಪಿಂಚಣಿ ಪಡೆಯುವ ಬ್ಯಾಂಕ್‌ನಿಂದ ಬಡ್ಡಿ ಆದಾಯ ಪಡೆಯುತ್ತಿರಬೇಕು. ಆದರೆ, ನೀವು ಪಿಂಚಣಿ ಜೊತೆ ಬಡ್ಡಿ ಆದಾಯವನ್ನೂ ಗಳಿಸುತ್ತಿರುವ ಕಾರಣ, ಒಟ್ಟಾರೆ ಆದಾಯ ₹ 5 ಲಕ್ಷಕ್ಕಿಂತ ಮೀರಿರದ ಪಕ್ಷದಲ್ಲಷ್ಟೇ ತೆರಿಗೆ ವಿವರ ಸಲ್ಲಿಸದಿರಲು ಅವಕಾಶವಿದೆ.

ಸುರೇಂದ್ರನಾಥ್, ಬೆಂಗಳೂರು

l ಪ್ರಶ್ನೆ: ನಾನು ಷೇರು ಮಾರುಕಟ್ಟೆಯಲ್ಲಿ ಕೆಲವು ವರ್ಷಗಳಿಂದ ವ್ಯವಹರಿಸುತ್ತಿದ್ದೇನೆ. ದೀರ್ಘಾವಧಿಯಲ್ಲಿ ಉತ್ತಮ ಲಾಭ ನಿರೀಕ್ಷಿಸುತ್ತಿದ್ದೇನೆ. ಇದಕ್ಕಾಗಿ ಹಂತ ಹಂತವಾಗಿ ಹೂಡಿಕೆ ಮಾಡುತ್ತಿದ್ದೇನೆ. ಆದರೆ ಕೆಲವು ತಪ್ಪು ನಿರ್ಧಾರಗಳಿಂದಾಗಿ ಐ.ಟಿ. ಷೇರುಗಳಲ್ಲಿನ ನನ್ನ ಹೂಡಿಕೆ ನಷ್ಟದಲ್ಲಿದೆ. ಮುಂದಿನ ಲಾಭಕ್ಕೆ ಸಂಬಂಧಿಸಿದಂತೆ ತೆರಿಗೆ ನಿಭಾಯಿಸುವುದು ಹೇಗೆ? ಇರುವ ಷೇರುಗಳಿಂದ ನಷ್ಟದಲ್ಲಿ ಹೊರಬರಲೇ? ಇದು ತೆರಿಗೆ ಉಳಿತಾಯದ ದೃಷ್ಟಿಯಲ್ಲಿ ಸರಿಯೇ?

ಉತ್ತರ: ಪ್ರತಿ ಹೂಡಿಕೆದಾರನ ನಿರೀಕ್ಷೆ ಹಾಗೂ ಹೂಡಿಕೆ ಅವಧಿ ಬೇರೆ ಬೇರೆ. ಅಲ್ಪಾವಧಿಯಲ್ಲಿ ಒಂದಷ್ಟು ಲಾಭ ಬಂದಾಗ ದೀರ್ಘಾವಧಿ ಹೂಡಿಕೆದಾರನಾಗಲು ಕೆಲವರು ಮುಂದಾಗುವುದು ಇದೆ. ಇನ್ನು ಕೆಲವರು ಬಂದ ಲಾಭದಲ್ಲಿ ಸಂತೃಪ್ತರಾಗಿ ಹೂಡಿಕೆಯಿಂದ ಹೊರಬರುವುದು ಇದೆ. ಅಲ್ಪಾವಧಿ ಹೂಡಿಕೆದಾರಲ್ಲಿ ಕೆಲವರು ಮಾರುಕಟ್ಟೆ ಪ್ರತಿಕೂಲವಾಗಿ ಚಲಿಸಿದಾಗ ಆಗುವ ನಷ್ಟವನ್ನು ನೋಡಿಕೊಂಡು, ಇರುವ ಹೂಡಿಕೆ ಮೊತ್ತವನ್ನೂ ಸಮರ್ಪಕವಾಗಿ ನಿಭಾಯಿಸಲು ಆಗದ ಸ್ಥಿತಿ ತಲುಪುವುದು ಕೂಡ ಇದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದು ಇದೆ. ಹೂಡಿಕೆ ಮಾಡುವ ಮೊದಲು ಹಣಕಾಸಿನ ಸಮರ್ಪಕ ಯೋಜನೆ ಮಾಡಿಕೊಂಡರೆ ಯಾವುದೇ ಆತಂಕ ಹಾಗೂ ಭೀತಿಗೆ ಒಳಗಾಗಿ ಆತುರದ ನಿರ್ಧಾರ ಕೈಗೊಳ್ಳುವ ಪ್ರಮೇಯ ಬರುವುದಿಲ್ಲ. ಯಾವುದೇ ಹೂಡಿಕೆಗೆ ಮುನ್ನ ನೀವು ಆಯ್ಕೆ ಮಾಡಿದ ಕ್ಷೇತ್ರ ಸರಿಯಾಗಿ ಇದೆಯೇ, ನಿಮ್ಮ ಒಟ್ಟಾರೆ ಹೂಡಿಕೆ ಮೊತ್ತದಲ್ಲಿ ಅತಿ ಹೆಚ್ಚಿನ ಮೊತ್ತವನ್ನು ಆ ಕ್ಷೇತ್ರದಲ್ಲಿ ನೀವು ತೊಡಗಿಸಲು ಬಯಸಿದ್ದೀರಾ ಎಂಬ ಬಗ್ಗೆ ಆಲೋಚಿಸಿಕೊಳ್ಳಿ. ನೀವು ಆಯ್ಕೆ ಮಾಡಿದ ಕಂಪನಿ ಷೇರುಗಳು ಹಾಗೂ ಆ ಕಂಪನಿಯ ಕಾರ್ಯಕ್ಷೇತ್ರ ಭವಿಷ್ಯದಲ್ಲಿ ಉತ್ತಮ ಲಾಭ ತರುವ ಸಾಧ್ಯತೆ ಇದೆ ಎಂದಾದರೆ, ಆ ರೀತಿಯ ಅಂದಾಜು ಮಾಡಿರುವುದಕ್ಕೆ ಕಾರಣ ಏನು ಎಂಬುದನ್ನೂ ದಾಖಲಿಸಿಡಿ. ಇದು, ಮುಂದೆ ಹೂಡಿಕೆಗಳಲ್ಲಿ ಕೈಗೊಳ್ಳಬಹುದಾದ ತಪ್ಪು ನಿರ್ಧಾರಗಳನ್ನು ಸರಿ ಮಾಡಲು ನೆರವಾಗುತ್ತದೆ.

ಐ.ಟಿ. ಷೇರುಗಳಲ್ಲಿನ ನಿಮ್ಮ ಹೂಡಿಕೆ ನಷ್ಟದಲ್ಲಿದೆ ಎಂಬ ವಿಚಾರ ಗಮನಿಸೋಣ. ನೀವು ದೀರ್ಘಾವಧಿ ಹೂಡಿಕೆಯಲ್ಲಿ ಲಾಭ ನಿರೀಕ್ಷಿಸುವವರು ಹಾಗೂ ಇದಕ್ಕಾಗಿ ಹಂತ ಹಂತಗಳಲ್ಲಿ ಹೂಡಿಕೆ ಮಾಡುತ್ತಿರುವವರು. ಉತ್ತಮ ಕಂಪನಿಗಳಲ್ಲಿನ ಷೇರುಗಳೂ ಜಾಗತಿಕ ಹಾಗೂ ದೇಶಿ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಕೆಲವೊಮ್ಮೆ ಏರಿಳಿತ ಕಾಣಬಹುದು. ಆದರೆ, ದೀರ್ಘಾವಧಿಯಲ್ಲಿ ನಿಮ್ಮ ಯೋಜನೆಗೆ ಪ್ರತಿಕೂಲ ಪರಿಸ್ಥಿತಿ ಇದ್ದಾಗ ಮಾತ್ರ ನಷ್ಟವಾದರೂ ಹೂಡಿಕೆಯಿಂದ ಹೊರ ಬರುವುದು ಉತ್ತಮ ನಿರ್ಧಾರ. ಇದಕ್ಕೆ ಕಂಪನಿಯ ಇತ್ತೀಚಿನ ಕೆಲವು ತ್ರೈಮಾಸಿಕಗಳ ಫಲಿತಾಂಶ ಹಾಗೂ ಕಂಪನಿಯ ಆಡಳಿತ ಮಂಡಳಿಯ ಯೋಜನೆ, ದಕ್ಷತೆಯ ಗುಣಮಟ್ಟ ಅವಲೋಕಿಸಿ ನಿರ್ಧರಿಸಿ.

ಷೇರುಗಳಲ್ಲಿನ ದೀರ್ಘಾವಧಿ ಹೂಡಿಕೆಯಿಂದ ಸಿಗುವ ಲಾಭ ₹ 1 ಲಕ್ಷದವರೆಗೆ ಇದ್ದರೆ, ಅದು ತೆರಿಗೆಯಿಂದ ಮುಕ್ತವಾಗಿದೆ. ಇದಕ್ಕಿಂತ ಹೆಚ್ಚಿನ ಲಾಭದ ಮೊತ್ತವು ಶೇ 10 ಅಥವಾ ಶೇ 20ರ ಮೂಲ ದರದಲ್ಲಿ ತೆರಿಗೆಗೊಳಪಡುತ್ತದೆ. ಖರೀದಿ ದಿನದಿಂದ ಹನ್ನೆರಡು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಹೊಂದಿದ ಷೇರುಗಳು ದೀರ್ಘಾವಧಿ ಹೂಡಿಕೆಗಳಾಗಿ ಪರಿಗಣಿತವಾಗುತ್ತವೆ. ಇವುಗಳಲ್ಲಿ ನಷ್ಟ ಆದಲ್ಲಿ, ಅದನ್ನು ದೀರ್ಘಾವಧಿ ಬಂಡವಾಳ ಲಾಭದೊಡನೆ ಮುಂದಿನ 8 ವರ್ಷಗಳಲ್ಲಿ ವಜಾ ಮಾಡುವ ಅವಕಾಶವಿದೆ. ಅಲ್ಪಾವಧಿ ಹೂಡಿಕೆಗಳಲ್ಲೂ (12 ತಿಂಗಳಿಗಿಂತ ಕಡಿಮೆ ಅವಧಿಯ ಹೂಡಿಕೆ) ತಾತ್ಕಾಲಿಕ ಅವಧಿಗೆ ನಷ್ಟದೊಂದಿಗೆ ಹೊರಬಂದು, ಕೆಲವು ದಿನಗಳ ಅಂತರದಲ್ಲಿ ನೀವು ಉತ್ತಮ ಲಾಭ ನಿರೀಕ್ಷಿಸುವುದಿದ್ದರೆ, ಅದೇ ಷೇರುಗಳನ್ನು ಮರು ಖರೀದಿ ಮಾಡಬಹುದು. ಇಲ್ಲೂ ನಷ್ಟ ವಜಾ ಮಾಡುವ ಅವಕಾಶವಿದೆ. ಆದರೆ, ಇಂತಹ ತೆರಿಗೆ ಕೇಂದ್ರಿತ, ನಷ್ಟದಲ್ಲಿ ಹೊರಬರುವ ಗಟ್ಟಿ ನಿರ್ಧಾರ ಕೈಗೊಳ್ಳಲು, ಮುಂದೆ ಆರ್ಥಿಕವಾಗಿ ಸುದೃಢ ಕಂಪನಿಗಳ ಷೇರುಗಳಲ್ಲಿ ವ್ಯವಹರಿಸುವುದರಿಂದ ಮಾತ್ರ ಸಾಧ್ಯ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT