ಬುಧವಾರ, ಜೂಲೈ 8, 2020
28 °C

ಆರ್ಥಿಕ ಕೊಡುಗೆ: ಎಲ್ಲಿದೆ ಹಣ?

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಪಿಡುಗಿಗೆ ಕಡಿವಾಣ ಹಾಕಲು ಜಾರಿಗೆ ತಂದ ದಿಗ್ಬಂಧನದ ಕಾರಣಕ್ಕೆ ದೇಶಿ ಆರ್ಥಿಕತೆಯು ಬಳಲಿ ಬೆಂಡಾಗಿದೆ. ಅದನ್ನು ಮತ್ತೆ ಚೇತರಿಕೆಯ ಹಾದಿಗೆ ತರಲು ಭಾರಿ ಪ್ರಮಾಣದ ಆರ್ಥಿಕ ಉತ್ತೇಜನಾ ಕೊಡುಗೆಗಳ ತುರ್ತು ಅಗತ್ಯ ಇದೆ. ಅರ್ಥ ವ್ಯವಸ್ಥೆಯ ಆರೋಗ್ಯ ಸುಧಾರಿಸಲು ಕೇಂದ್ರ ಸರ್ಕಾರವು ₹ 20.97 ಲಕ್ಷ ಕೋಟಿ ಮೊತ್ತದ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದೆ. ಈ ಕೊಡುಗೆಗಳ ಒಟ್ಟಾರೆ ವೆಚ್ಚದ ಬಗ್ಗೆ ಸರ್ಕಾರ ನೀಡಿರುವ ಲೆಕ್ಕವನ್ನು ಉದ್ಯಮ ವಲಯ ಮತ್ತು ಆರ್ಥಿಕ ತಜ್ಞರು ಪ್ರಶ್ನಿಸುತ್ತಿದ್ದಾರೆ. ಅವರ ಲೆಕ್ಕಾಚಾರವು ಸರ್ಕಾರದ ಪ್ರತಿಪಾದನೆಗಿಂತ ಸಂಪೂರ್ಣ ಭಿನ್ನವಾಗಿದೆ. ₹ 20.97 ಲಕ್ಷ ಕೋಟಿಯು ಜಿಡಿಪಿಯ ಶೇ 10ರಷ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೊಂಡಿದ್ದಾರೆ. ಆರ್ಥಿಕ ತಜ್ಞರ ಪ್ರಕಾರ ಇದು, ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.75ರಷ್ಟು ಮಾತ್ರ ಇದೆ.

ಅರ್ಥ ವ್ಯವಸ್ಥೆಯ ನಾಡಿ ಮಿಡಿತ ಎಂದೇ ಪರಿಗಣಿಸುವ ಷೇರುಪೇಟೆಯಲ್ಲಿನ ನಿರುತ್ಸಾಹವು ಕೂಡ ಕೊಡುಗೆಗಳಿಂದ ತಕ್ಷಣಕ್ಕೆ ಹೆಚ್ಚಿನ ಪ್ರಯೋಜನ ಇಲ್ಲದಿರುವುದನ್ನು ಪುಷ್ಟೀಕರಿಸುತ್ತದೆ.  ಸರ್ಕಾರ ಘೋಷಿಸಿರುವ  ಉತ್ತೇಜನಾ ಕೊಡುಗೆಯಿಂದ ದೇಶದ ವಿತ್ತೀಯ ಕೊರತೆಯು ದುಪ್ಪಟ್ಟಾಗಿ ಒಟ್ಟು ಆಂತರಿಕ ಉತ್ಪನ್ನದ ಶೇ 7.9ಕ್ಕೆ ತಲುಪಲಿದೆ. ಈ ಕಾರಣಕ್ಕೆ ಸರ್ಕಾರ ತನ್ನ ಬೊಕ್ಕಸಕ್ಕೆ ಹೆಚ್ಚು ಹೊರೆಯಾಗುವಂತಹ ಕೊಡುಗೆಗಳನ್ನು ಇದುವರೆಗೂ ಪ್ರಕಟಿಸಿಲ್ಲ. 5 ಕಂತುಗಳ  ಕೊಡುಗೆಗಳಲ್ಲಿ ಸಾಲಕ್ಕೆ ಸರ್ಕಾರದ ಖಾತರಿ, ಬ್ಯಾಂಕ್‌ ಸಾಲ ವಿಸ್ತರಣೆ ಮತ್ತು ನಿಯಂತ್ರಣ ಕ್ರಮಗಳ ತಿದ್ದುಪಡಿಗೆ ಹೆಚ್ಚು ಒತ್ತು ದೊರೆತಿದೆ.  ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಸಂಗ್ರಹಿಸುವ ಸಾಲವನ್ನು ₹ 12 ಲಕ್ಷ ಕೋಟಿಗೆ ಹೆಚ್ಚಿಸಿದ್ದರೂ ಅದು ವರಮಾನ ಕೊರತೆ ತುಂಬಿಕೊಳ್ಳಲು ಬಳಕೆಯಾಗಲಿದೆ. ಹೀಗಾಗಿ ಆರ್ಥಿಕ ಕೊಡುಗೆಗಳಿಗೆ ಸರ್ಕಾರದ ಬಳಿ ಕಡಿಮೆ ಹಣ ಉಳಿಯಲಿದೆ. 

 ವಿತ್ತೀಯ ಕೊರತೆಗೆ ಕಡಿವಾಣ ಹಾಕುವ ವಿವೇಕ ಬದಿಗಿಟ್ಟು ವೆಚ್ಚ ಹೆಚ್ಚಿಸಬೇಕಾದ ತುರ್ತು ಅಗತ್ಯ ಇದೆ. ಸದ್ಯಕ್ಕೆ ವಿತ್ತೀಯ ವಿವೇಕದ (ವೆಚ್ಚಕ್ಕೆ ಕಡಿವಾಣ ಹಾಕುವ) ಬಗ್ಗೆ ಮಾತನಾಡುವುದು ವಿನಾಶಕಾರಿ ಆಗಿರಲಿದೆ ಎಂಬುದು ಆರ್ಥಿಕ ತಜ್ಞರ ಎಚ್ಚರಿಕೆಯಾಗಿದೆ.  ಆರ್‌ಬಿಐನಿಂದ ಸಾಲ ಪಡೆದು ದೊಡ್ಡ ಪ್ರಮಾಣದಲ್ಲಿ ಉತ್ತೇಜನಾ ಕೊಡುಗೆ ಪ್ರಕಟಿಸಬೇಕು ಎನ್ನುವ ಒತ್ತಾಯ ಉದ್ಯಮ ವಲಯದಿಂದ ಕೇಳಿ ಬರುತ್ತಿದೆ. ಆರ್ಥಿಕ ಪರಿಣತರೂ ಈ ಬೇಡಿಕೆ ಬೆಂಬಲಿಸುತ್ತಿದ್ದಾರೆ.

ಸರಳವಾಗಿ ಹೇಳುವುದಾದರೆ ಸರ್ಕಾರ ತನ್ನ ವಿತ್ತೀಯ ಕೊರತೆ ಹೆಚ್ಚಿಸಿ ಇಲ್ಲವೆ ಆರ್‌ಬಿಐನಿಂದ ಸಾಲ ಪಡೆದು (ನೋಟು ಮುದ್ರಣ) ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಸಲಹೆ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಈ ಚಿಂತನೆ ಬೆಂಬಲಿಸುತ್ತಿದ್ದಾರೆ. ಹೆಚ್ಚಳಗೊಳ್ಳುವ ವಿತ್ತೀಯ ಕೊರತೆಯನ್ನು ಆರ್‌ಬಿಐ ಸಾಲದಿಂದ ಭರ್ತಿ ಮಾಡಿಕೊಳ್ಳಲು ಸರ್ಕಾರ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳಬೇಕು ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್‌. ಕೆ. ಸಿಂಗ್‌ ಅವರೂ ಹೇಳಿದ್ದಾರೆ.

ಬಜೆಟ್‌ ಕೊರತೆ ಸರಿದೂಗಿಸಲು, ಸರ್ಕಾರದ ವೆಚ್ಚ ಹೆಚ್ಚಲು ಆರ್‌ಬಿಐ ಹಣ ಮುದ್ರಿಸುವುದು ಅನಿವಾರ್ಯವೇ. ಹಣ ಮುದ್ರಿಸಿದರೆ ಏನಾಗಬಹುದು  ಎನ್ನುವುದರ ಬಗ್ಗೆ ಆರ್ಥಿಕ ತಜ್ಞರಲ್ಲಿಯೇ ಗೊಂದಲಗಳಿವೆ.

ಉದಾಹರಣೆಗೆ ಸರ್ಕಾರ ₹ 1 ಲಕ್ಷ ಕೋಟಿ ವೆಚ್ಚ ಮಾಡಲು ಮುಂದಾದರೆ ಸಾಮಾನ್ಯ ಸಂದರ್ಭದಲ್ಲಿ ಅಷ್ಟು ಮೊತ್ತದ ಸರ್ಕಾರಿ ಬಾಂಡ್‌ಗಳನ್ನು  ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ.  ವಾಣಿಜ್ಯ ಬ್ಯಾಂಕ್‌ಗಳು ಈ ಬಾಂಡ್‌ ಖರೀದಿಸುತ್ತವೆ.  ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಆರ್‌ಬಿಐ ಖಾತೆಯಲ್ಲಿ ಠೇವಣಿ ಇರಿಸುತ್ತವೆ. ಆ ಮೊತ್ತವನ್ನು ಸರ್ಕಾರ ವಿವಿಧ ಯೋಜನೆಗಳಿಗೆ ವೆಚ್ಚ ಮಾಡುತ್ತದೆ. ಬಾಂಡ್‌ ಖರೀದಿಗೆ ಹಣ ನೀಡಿದ ಬ್ಯಾಂಕ್‌ಗಳ ಬಳಿಯ ಮೀಸಲು ಹಣದಲ್ಲಿ ₹ 1 ಲಕ್ಷ ಕೋಟಿಯಷ್ಟು ಕಡಿಮೆಯಾಗಿರುತ್ತದೆ.

ಕೋವಿಡ್‌ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ, ಸರ್ಕಾರದ ₹ 1 ಲಕ್ಷ ಕೋಟಿ ಮೊತ್ತದ ಬಾಂಡ್‌ಗಳನ್ನು ಆರ್‌ಬಿಐ ನೇರವಾಗಿ ಖರೀದಿಸಬೇಕಾಗುತ್ತದೆ.  ಆರ್‌ಬಿಐ ಖಾತೆಗೆ ₹ 1 ಲಕ್ಷ ಕೋಟಿ ಮೊತ್ತದ ಬಾಂಡ್‌ಗಳು ಸೇರ್ಪಡೆ ಆಗುತ್ತವೆ. ಸರ್ಕಾರದ ಠೇವಣಿ ಖಾತೆಯಲ್ಲಿ ₹ 1 ಲಕ್ಷ ಕೋಟಿ ಜಮೆ ಆಗುತ್ತದೆ. ಇದನ್ನೇ ಹಣದ ಮುದ್ರಣ (monetization) ಎನ್ನುತ್ತಾರೆ.

ಎರಡೂ ಸಂದರ್ಭಗಳಲ್ಲಿ ಸರ್ಕಾರದ ಖಾತೆಯಲ್ಲಿ ₹ 1 ಲಕ್ಷ ಕೋಟಿ ಜಮೆ ಆಗಿರುತ್ತದೆ.  ತನ್ನ ಖಾತೆಯಲ್ಲಿನ ಹೆಚ್ಚುವರಿ ಹಣವನ್ನು ವಿವಿಧ ಉದ್ದೇಶಗಳಿಗೆ ವೆಚ್ಚ ಮಾಡಲು ಸರ್ಕಾರ ಮುಂದಾಗುತ್ತದೆ. ಸರ್ಕಾರಿ ನೌಕರರ ವೇತನ ಪಾವತಿ,  ಜನ್‌ಧನ್‌ ಖಾತೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನಗದು  ಸೇರ್ಪಡೆ ಮಾಡುತ್ತದೆ.  ಜನರು ತಮ್ಮ ಖಾತೆಯಲ್ಲಿನ ಹಣ ಪಡೆದುಕೊಂಡು ವಿವಿಧ ಉದ್ದೇಶಗಳಿಗೆ ವೆಚ್ಚ ಮಾಡುತ್ತಾರೆ. ಆರ್‌ಬಿಐ ನೇರವಾಗಿ ಸರ್ಕಾರಿ ಬಾಂಡ್‌ಗಳನ್ನು ಖರೀದಿಸಿದ ಸಂದರ್ಭದಲ್ಲಿ ಸರ್ಕಾರ ಆ ಮೊತ್ತವನ್ನು ವೆಚ್ಚ ಮಾಡಿದಾಗ ಆ ಮೊತ್ತವು ಬ್ಯಾಂಕ್‌ಗಳಿಗೆ ಮರಳಿ ಬಂದು ಅವುಗಳ ಬಳಿ ಹೆಚ್ಚು ಹಣ ಇರಲಿದೆ. ಇದನ್ನು ಬ್ಯಾಂಕ್‌ಗಳು ಉದ್ದಿಮೆಗಳಿಗೆ ಹೆಚ್ಚು ಸಾಲ ನೀಡಲು ಬಳಸುತ್ತವೆ. ಹೊಸ ಸಾಲಗಳಿಂದ ಹಣದ ಹರಿವು ಹೆಚ್ಚಾಗುತ್ತದೆ.

ರಾಜನ್‌ ಚಿಂತನೆ

‘ಸದ್ಯದ ಅಸಾಮಾನ್ಯ ಸಂದರ್ಭದಲ್ಲಿ ಹಣ ಮುದ್ರಿಸುವುದರಿಂದ ಹಣಕಾಸು ಬಿಕ್ಕಟ್ಟನ್ನು ನಿರ್ವಹಿಸಲು ಕೆಲಮಟ್ಟಿಗೆ ನೆರವಾಗಲಿದೆ. ಆದರೆ ಇದರಿಂದ ಭಾರಿ ಬದಲಾವಣೆ ಕಂಡು ಬರುವುದಿಲ್ಲ ಮತ್ತು  ಇಂತಹ ಕ್ರಮವು ವಿನಾಶಕಾರಿಯಾಗಿಯೂ ಆಗಿರುವುದಿಲ್ಲ. ಮುದ್ರಿತ ಹೆಚ್ಚುವರಿ ಹಣವನ್ನು ತಪ್ಪು ಮಾರ್ಗದಲ್ಲಿ ಬಳಸಿದರೆ ಮಾತ್ರ ಖಂಡಿತವಾಗಿಯೂ ಸಮಸ್ಯೆಗಳು ಸೃಷ್ಟಿಯಾಗಲಿವೆ. ಹೆಚ್ಚುವರಿ ಹಣ ಮುದ್ರಿಸುವುದನ್ನು ತುಂಬ ಎಚ್ಚರಿಕೆಯಿಂದ ನಿರ್ವಹಿಸಬೇಕು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಂ ರಾಜನ್‌ ತಮ್ಮ  ಲಿಂಕ್ಡ್‌ಇನ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಣ ಮುದ್ರಿಸುವುದರಿಂದ ಕೇಂದ್ರ ಸರ್ಕಾರದ ಹಣಕಾಸು ಸಮಸ್ಯೆಗಳೆಲ್ಲ ಬಗೆಹರಿಯುವುದಿಲ್ಲ. ಅದರಿಂದ ಹಣದುಬ್ಬರವು ನಾಗಾಲೋಟದಲ್ಲಿ ಏರಿಕೆಯೂ ಆಗುವುದಿಲ್ಲ. ಸರ್ಕಾರಕ್ಕೆ ಆರ್‌ಬಿಐ ನೇರವಾಗಿ ಹಣಕಾಸಿನ ನೆರವು ಒದಗಿಸುವುದು ಎಂದರೆ ಅದನ್ನು ಹಣ ಮುದ್ರಿಸುವುದು ಎಂದೇ ಅರ್ಥೈಸುವುದೂ ಸರಿಯಲ್ಲ ಎನ್ನುವುದು ಅವರ ನಿಲುವಾಗಿದೆ.

ವಿತ್ತೀಯ ಕೊರತೆ

ಅರ್ಥ ವ್ಯವಸ್ಥೆ ನಿರ್ವಹಣೆಯ ಅಳತೆಗೋಲು ಆಗಿರುವ ವಿತ್ತೀಯ ಕೊರತೆ ತಗ್ಗಿಸುವುದು ಸರ್ಕಾರದ ಆದ್ಯತೆ ಆಗಿರುತ್ತದೆ. ಸರ್ಕಾರದ ಬೊಕ್ಕಸ ಭರ್ತಿ ಮಾಡುವ ಹಣದಲ್ಲಿ ಕಂಡು ಬರುವ ಕೊರತೆಯೇ ವಿತ್ತೀಯ ಕೊರತೆ ಎನ್ನುತ್ತಾರೆ. ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ವ್ಯತ್ಯಾಸವೇ ಇದಾಗಿರುತ್ತದೆ. ಸರ್ಕಾರ ತನ್ನ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹವಾದ ವರಮಾನಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಿದಾಗ ವಿತ್ತೀಯ ಕೊರತೆ ಕಂಡು ಬರುತ್ತದೆ. ವರ್ಷವೊಂದರಲ್ಲಿನ ಒಟ್ಟು ಆಂತರಿಕ ಉತ್ಪನ್ನದ ಶೇಕಡವಾರು ಲೆಕ್ಕದಲ್ಲಿ ವಿತ್ತೀಯ ಕೊರತೆ ಲೆಕ್ಕ ಹಾಕಲಾಗುವುದು. ಇದು ಸರ್ಕಾರ ಎತ್ತುವ ಸಾಲ ಒಳಗೊಂಡಿರುವುದಿಲ್ಲ. ₹ 20.97 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ತೇಜನಾ ಕೊಡುಗೆ ಮತ್ತು ಹೆಚ್ಚುವರಿ ಸಾಲದ ಕಾರಣಕ್ಕೆ ಈ ವರ್ಷ ವಿತ್ತೀಯ ಕೊರತೆ ಹೆಚ್ಚಳಗೊಳ್ಳಲಿದೆ.

ಏನಿದು ಮನಿಟೈಸೇಷನ್‌?

ಕೇಂದ್ರ ಸರ್ಕಾರಕ್ಕೆ ಎದುರಾಗಿರುವ ಹಣದ ಮುಗ್ಗಟ್ಟಿನ ಸಮಸ್ಯೆಗೆ ಹಣ ಮುದ್ರಿಸುವ (Monetisation ) ಮೂಲಕ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತು ಕೇಳಿ ಬರುತ್ತಿದೆ. ಸರ್ಕಾರದ ಸಾಲ ಪತ್ರಗಳನ್ನು ಖರೀದಿಸಲು ಆರ್‌ಬಿಐ ಹೆಚ್ಚು ಹಣ ಮುದ್ರಿಸುವುದಕ್ಕೆ ‘ಮನಿಟೈಸೇಷನ್‌ ’ ಎನ್ನುತ್ತಾರೆ.

ಆರ್ಥಿಕತೆ ರಕ್ಷಿಸಲು ಮಾಡಬೇಕಾದ ಹೆಚ್ಚುವರಿ ವೆಚ್ಚಕ್ಕೆ ಅಗತ್ಯವಾದ ಹಣ ಹೊಂದಿಸಲು ನೋಟುಗಳನ್ನು ಹೆಚ್ಚುವರಿಯಾಗಿ ಮುದ್ರಿಸಬೇಕಾಗುತ್ತದೆ. ಸರ್ಕಾರದ ಬಾಂಡ್‌ ಖರೀದಿಸಿದ್ದಕ್ಕೆ ಪ್ರತಿಯಾಗಿ ನೀಡುವ ಹಣಕ್ಕೆ ಆರ್‌ಬಿಐ ತನ್ನ ಬ್ಯಾಲನ್ಸ್‌ಶೀಟ್‌ ಹಿಗ್ಗಿಸಿ ನೋಟುಗಳನ್ನು ಮುದ್ರಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು