ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭಿಕ ಹಂತದ ಹೂಡಿಕೆ: ಪ್ರಶ್ನೋತ್ತರ

Last Updated 19 ಏಪ್ರಿಲ್ 2022, 19:41 IST
ಅಕ್ಷರ ಗಾತ್ರ

ಹೆಸರು ಬೇಡ, ಬೆಂಗಳೂರು

l ಪ್ರಶ್ನೆ: ನಾನು ಎರಡು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ವಯಸ್ಸು 25 ವರ್ಷ. ನಾನು
₹ 40,000 ಸಂಪಾದಿಸುತ್ತಿದ್ದೇನೆ. ತಿಂಗಳ ಬಾಡಿಗೆ
₹ 6,000 ಹಾಗೂ ಇತರ ಖರ್ಚು ₹ 5,000. ನಾನು ಶಿಕ್ಷಣಕ್ಕಾಗಿ ಪಡೆದ ಸಾಲ ಮುಂದಿನ 5 ವರ್ಷಗಳಲ್ಲಿ ಪಾವತಿಸಬೇಕು. ಮಾಸಿಕ ಕಂತು ಸರಿಸುಮಾರು
₹ 7,500. ಅಧಿಕ ಲಾಭಕ್ಕಾಗಿ ನಾನು ಹೇಗೆ ಹೂಡಿಕೆ ಮಾಡಬಹುದು?

ಉತ್ತರ: ವೃತ್ತಿ ಬದುಕಿನ ಆರಂಭದಲ್ಲಿ ಹೂಡಿಕೆ ಬಗ್ಗೆ ಒಲವು ಹೆಚ್ಚಿಸಿಕೊಳ್ಳುತ್ತಿರುವ ಇಂದಿನ ಯುವಕರನ್ನು ಮೆಚ್ಚಬೇಕು. ಆರಂಭಿಕ ಹಂತದ ಹೂಡಿಕೆಯು ನಿಮಗೆ ಅಪಾಯವನ್ನು ತಡೆದುಕೊಳ್ಳುವ ಹೆಚ್ಚಿನ ಸಾಮರ್ಥ್ಯ ನೀಡುತ್ತದೆ, ನಷ್ಟವಾದ ಸಂದರ್ಭದಲ್ಲಿ ಚೇತರಿಸಿಕೊಳ್ಳುವ ಅವಕಾಶ ನೀಡುತ್ತದೆ. ಈ ಹಂತದಲ್ಲಿ ಆರ್ಥಿಕ ಒತ್ತಡ ಹೆಚ್ಚಿರುವುದಿಲ್ಲ. ನಿಗದಿತ ಮಟ್ಟದ ಆದಾಯ ಗಳಿಸಿ, ಅದರಲ್ಲಿ ಒಂದಿಷ್ಟು ಮೊತ್ತ ಹೂಡಿಕೆ ಮಾಡುವುದು ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು. ಇದು ಬದುಕಿನಲ್ಲಿ ಬರುವ ಪ್ರಮುಖ ಖರ್ಚುಗಳನ್ನು ಸಾಲ ಅಥವಾ ಅನ್ಯರ ಹಂಗಿಲ್ಲದೆ ನಿರ್ವಹಿಸಲು ನೆರವಾಗಬಲ್ಲದು. ಮಕ್ಕಳ ವಿದ್ಯಾಭ್ಯಾಸ, ವಿವಾಹ, ಮನೆ ಕಟ್ಟುವ ಯೋಜನೆ, ವಾಹನ ಖರೀದಿ ಅಥವಾ ಆರೋಗ್ಯ ಸಮಸ್ಯೆಯ ನಿರ್ವಹಣೆ ಇತ್ಯಾದಿ ಯಾವುದೂ ಇರಬಹುದು. ಒಟ್ಟಿನಲ್ಲಿ ನಿರಂತರ ಹೂಡಿಕೆ, ಹಣಕಾಸಿನ ಗುರಿಯನ್ನು ಪೂರೈಸಲು ಸಹಾಯ ಮಾಡುತ್ತದೆ.

ನಿಮ್ಮ ವಯಸ್ಸು ಈಗ 25 ವರ್ಷ. ಇನ್ನೂ ಮೂರು ದಶಕಗಳ ವೃತ್ತಿ ಬದುಕು ನಿಮಗೆ ಇದೆ. ಹೀಗಾಗಿ, ನಿಮ್ಮ ಎಲ್ಲ ಖರ್ಚುಗಳನ್ನು ಒಂದು ಡೈರಿ ಅಥವಾ ಎಕ್ಸೆಲ್ ಪುಟದೊಳಗೆ ಬರೆಯುವ ಕೆಲಸ ಮಾಡಿ. ಇದಾದ ಬಳಿಕ ಹೂಡಿಕೆಗಾಗಿ ಉಳಿಯುವ ಮೊತ್ತವನ್ನು ಗೊತ್ತು ಮಾಡಿಕೊಳ್ಳಿ. ಉಳಿಕೆಗೆ ಸಿಗುವ ಮೊತ್ತವನ್ನು ಎಲ್ಲ ವರ್ಗಗಳ ಹೂಡಿಕೆಗಳಲ್ಲಿ ತೊಡಗಿಸಿ. ಉದಾಹರಣೆಗೆ, ನಿಶ್ಚಿತ ಆದಾಯ ನೀಡುವ ಬ್ಯಾಂಕ್/ಅಂಚೆ ಕಚೇರಿ ಹೂಡಿಕೆಯಿಂದ ತೊಡಗಿ, ಮ್ಯೂಚುವಲ್‌ ಫಂಡ್, ಜೀವ ವಿಮಾ ಯೋಜನೆ, ಆರೋಗ್ಯ ವಿಮೆ, ಅವಧಿ ವಿಮೆ, ಷೇರುಪೇಟೆ ಹೂಡಿಕೆ, ಚಿನ್ನದ ಬಾಂಡ್ ಇತ್ಯಾದಿಗಳಲ್ಲಿ ನಿಮ್ಮ ಹೂಡಿಕೆ ಇರಲಿ. ಆದಾಯ ಹೆಚ್ಚಿದಂತೆ ಇದರ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಿ. ಎಲ್ಲ ಆರ್ಥಿಕ ಉತ್ಪನ್ನಗಳು ಎಲ್ಲ ಕಾಲಗಳಲ್ಲಿ ಒಂದೇ ರೀತಿಯ ಆದಾಯ ನೀಡಲಾರವು. ಇವು ಏರಿಳಿತ ಕಾಣುತ್ತಿರುತ್ತವೆ. ಈಗ ನೀವು ಹೆಚ್ಚಿನ ರಿಸ್ಕ್‌ ಇರುವ ಮತ್ತು ಹೆಚ್ಚು ಲಾಭ ನೀಡಬಹುದಾದ ಉತ್ತಮ ಈಕ್ವಿಟಿ ಆಧರಿತ ಹೂಡಿಕೆಗಳನ್ನು ಆಯ್ಕೆ ಮಾಡಬಹುದು. ಇವು ದೀರ್ಘ ಕಾಲದಲ್ಲಿ ಉತ್ತಮ ಲಾಭ ಕೊಡಬಲ್ಲದು.

ಧನುಷ್ ಕುಮಾರ್ ಬಿ.ವಿ., ಬೆಂಗಳೂರು

l ಪ್ರಶ್ನೆ: ನಾನು 29 ವರ್ಷ ವಯಸ್ಸಿನ ಸಿವಿಲ್ ಎಂಜಿನಿಯರ್. ಆರು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಈಗ ಏನಾದರೂ ಸ್ವಂತ ವ್ಯವಹಾರ ಮಾಡಬೇಕೆಂದಿದ್ದೇನೆ. ನನ್ನ ಬಳಿ ಸುಮಾರು ₹ 5 ಲಕ್ಷ ಉಳಿತಾಯದ ಹಣವಿದೆ. ವಿದೇಶದ ಖಾಸಗಿ ಹಣಕಾಸು ನಿರ್ವಹಣಾ ಸಂಸ್ಥೆಯೊಂದು ರಿಮೋಟ್ ಅಲ್ಗಾರಿತಮ್ ವ್ಯವಸ್ಥೆಯಲ್ಲಿ ಹೂಡಿಕೆದಾರರ ಹಣವನ್ನು ಅಮೆರಿಕದ ಷೇರು ಪೇಟೆಯಲ್ಲಿ ತೊಡಗಿಸಿ ಶೇಕಡಾ 5ರಿಂದ 6ರಷ್ಟು ಲಾಭಾಂಶ ತಂದುಕೊಡುತ್ತದೆ ಎಂದು ಕೇಳಿದ್ದೇನೆ. ಅಲ್ಲದೆ ಅವರು ನಿರ್ವಹಣಾ ವೆಚ್ಚವಾಗಿ ನಮ್ಮಿಂದ ಮಾಸಿಕ ₹ 9000 ದಿಂದ ₹ 11000 ಸಂಗ್ರಹಿಸುತ್ತಾರೆ ಎಂದು ತಿಳಿಯಿತು. ಅಲ್ಲದೆ ನಾವು ಬೇರೆ ಸದಸ್ಯರನ್ನು ಸಂಸ್ಥೆಗೆ ಪರಿಚಯಿಸಿದರೆ ಬೋನಸ್ ರೂಪದಲ್ಲಿ ಹಣ ಪಡೆಯಬಹುದು. ಇದೊಂದು ಚೈನ್ ಲಿಂಕ್ ವ್ಯವಸ್ಥೆ ಎಂದೆನಿಸುತ್ತದೆ. ಇಲ್ಲಿ ಹಣ ಹೂಡಿದರೆ ಏನಾದರೂ ಅಪಾಯಗಳಿವೆಯೇ ಎಂದು ತಿಳಿಸಿ.

ಉತ್ತರ: ಹೂಡಿಕೆಯಲ್ಲಿ ನಾವು ಮೊದಲು ನೋಡಬೇಕಾದ ಮೂಲಭೂತ ಅಂಶ ನಮ್ಮ ಮೂಲಧನದ ಸುರಕ್ಷತೆ. ನಂತರ ದ್ರವ್ಯತೆ, ಕೊನೆಯದಾಗಿ ಹೂಡಿಕೆಯ ಮೇಲಣ ಲಾಭಾಂಶ. ಇದು ಎಲ್ಲ ಸಂದರ್ಭಗಳಲ್ಲಿ ಯಾವುದೇ ಹೂಡಿಕೆದಾರ ಅಗತ್ಯವಾಗಿ ಪರಿಗಣಿಸಬೇಕಾದುದು. ಎಷ್ಟೇ ಲಾಭ ನೀಡುವ ಸಂಸ್ಥೆಗಳಾಗಿದ್ದರೂ ನಮ್ಮ ಮೂಲಧನ ನಷ್ಟವಾಗಬಹುದಾದ ಅಪಾಯವಿದ್ದಾಗ ಅಂತಹ ಹೂಡಿಕೆಗಳಿಂದ ದೂರವಿರುವುದು ಒಳಿತು.

ನೀವು ನೀಡಿದ ಮಾಹಿತಿಯಂತೆ, ಹೂಡಿಕೆ ಮಾಡಬೇಕೆಂದಿರುವ ಸಂಸ್ಥೆ ನಿರ್ವಹಣಾ ವೆಚ್ಚವಾಗಿ ನಿಮ್ಮಿಂದ ಮಾಸಿಕ ಕಂತುಗಳಲ್ಲಿ ಹಣ ಪಡೆಯುತ್ತದೆ. ಈ ಮೊತ್ತ ವರ್ಷಕ್ಕೆ ಸುಮಾರು ₹ 1 ಲಕ್ಷಕ್ಕಿಂತ ಅಧಿಕ. ಇದು ಬಹುಶಃ ನಿಮ್ಮ ಹೂಡಿಕೆಯ ಮೊತ್ತದಲ್ಲಿ ಕಡಿತಗೊಳ್ಳುವ ಶುಲ್ಕ. ಇಂತಹ ಸಂಸ್ಥೆಗಳು ಎಲ್ಲಾದರೂ ಅಧಿಕೃತ ಪರವಾನಗಿ ಹೊಂದಿವೆಯೇ ಎಂದು ತಿಳಿದುಕೊಳ್ಳಿ. ಅವರ ವ್ಯವಹಾರವನ್ನು ಮೊದಲು ತಿಳಿಯಿರಿ. ಎಲ್ಲಿಯತನಕ ನಿಮಗೆ ಇದರ ಬಗ್ಗೆ ಖಚಿತ ಮಾಹಿತಿ ಅಥವಾ ಸ್ಪಷ್ಟ ನಿಲುವು ತಾಳಲು ಅಸಾಧ್ಯವೋ ಅಲ್ಲಿಯತನಕ ಅಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡದಿರಿ.

ಇಷ್ಟೇ ಅಲ್ಲದೆ ಅನೇಕ ಗೋಪ್ಯ ಶುಲ್ಕಗಳನ್ನು ಗ್ರಾಹಕರಿಂದ ವಿವಿಧ ರೂಪಗಳಲ್ಲಿ ವಸೂಲಿ ಮಾಡುವ ನಿಯಮಗಳು ಇರುವ ಸಾಧ್ಯತೆಯೂ ಇದೆ. ಉದಾಹರಣೆಗೆ, ಲಾಭಾಂಶ ಅಥವಾ ಅಸಲು ಮೊತ್ತವನ್ನು ಮೊದಲ ಕೆಲವು ತಿಂಗಳು ಹಿಂಪಡೆಯುವುದನ್ನು ಸ್ಥಗಿತಗೊಳಿಸಬಹುದು, ಹಿಂಪಡೆಯುವ ಮೊತ್ತದ ಮೇಲೆ ಶುಲ್ಕ ವಿಧಿಸಬಹುದು, ಬ್ಯಾಂಕ್ ಶುಲ್ಕ ವಸೂಲು ಮಾಡಬಹುದು, ಹೆಚ್ಚುವರಿ ಹೂಡಿಕೆಯ ಷರತ್ತುಗಳನ್ನು ಮುಂದಿಡಬಹುದು. ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಿ. ಇ–ಮೇಲ್ ಮೂಲಕ ಪೂರ್ಣ ಮಾಹಿತಿ ಪಡೆಯಿರಿ. ಇಂದು ಅನೇಕ ಸಂಸ್ಥೆಗಳು ಅನೇಕ ರೀತಿಯ ಬೋನಸ್, ಹೆಚ್ಚುವರಿ ಕ್ರೆಡಿಟ್ ಇತ್ಯಾದಿ ಆಮಿಷ ಒಡ್ಡಿ ಜನರನ್ನು ತಮ್ಮತ್ತ ಸೆಳೆದು ವಂಚಿಸುತ್ತಿವೆ. ಆ ಬಗ್ಗೆ ಜಾಗೃತರಾಗಿರಿ.

ನಿಮ್ಮ ನಿರೀಕ್ಷೆಗೆ ಹಾಗೂ ಇರುವ ಮೊತ್ತದ ಸಮರ್ಥ ಹೂಡಿಕೆಗೆ ನಮ್ಮಲ್ಲೇ ಇರುವ ಎನ್‌ಎಸ್‌ಇ, ಬಿಎಎಸ್‌ಇನಲ್ಲಿ ವ್ಯವಹರಿಸಲ್ಪಡುವ ಉತ್ತಮ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ‘ಅರಿಯದಿರುವ ಭೂತಕ್ಕಿಂತ ಅರಿತಿರುವ ಪೆಡಂಭೂತ ವಾಸಿ’ ಎಂಬ ಮಾತಿದೆಯಲ್ಲ! ಹೀಗಾಗಿ ಮೊದಲ ಹೆಜ್ಜೆಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ವ್ಯವಹರಿಸಿ ಅನುಭವ ಪಡೆಯಿರಿ. ಹೂಡಿಕೆಯ ಒಳ ಮರ್ಮಗಳನ್ನು ತಿಳಿದುಕೊಳ್ಳಿ, ಹೂಡಿಕೆಗೆ ಉತ್ತಮ ಕಂಪನಿಗಳನ್ನು ಆಯ್ಕೆ ಮಾಡುವ ಬಗೆಯನ್ನು ಅರಿತುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT