ಮಂಗಳವಾರ, ಆಗಸ್ಟ್ 3, 2021
28 °C

ಪ್ರಶ್ನೋತ್ತರ: ಸುಮಾರು ₹ 5 ಲಕ್ಷ ಬೆಲೆ ಬಾಳುವ ಬಂಗಾರ ಕೊಳ್ಳಲು ಸಲಹೆ ಬೇಕಿದೆ

ಯು.ಪಿ.ಪುರಾಣಿಕ್‌ Updated:

ಅಕ್ಷರ ಗಾತ್ರ : | |

ಸೋಮಶೇಖರ್, ಬಳ್ಳಾರಿ

ಇನ್ನು 3–4 ವರ್ಷಗಳಲ್ಲಿ ನಮ್ಮ ಮನೆಯಲ್ಲಿ ಮಗಳ ಮದುವೆ ಆಗಲಿದೆ. ಬಂಗಾರದ ಬೆಲೆ ದಿನೇ ದಿನೇ ಏರುತ್ತಲೇ ಇರುವುದನ್ನು ನೋಡುವಾಗ ಈಗಲೇ ಬಂಗಾರ ಕೊಳ್ಳುವುದು ಉತ್ತಮ ಎನ್ನಿಸುತ್ತಿದೆ. ಸುಮಾರು ₹ 5 ಲಕ್ಷ ಬೆಲೆಬಾಳುವ ಬಂಗಾರ ಕೊಳ್ಳಲು ನಿಮ್ಮ ಸಲಹೆ ಬೇಕಿದೆ. 

ಉತ್ತರ: ಬಂಗಾರ ಕೊಳ್ಳಲು 4 ಮಾರ್ಗಗಳಿವೆ. ಒಡವೆ, ಚಿನ್ನ, ಚಿನ್ನದ ಬಾಂಡ್‌ ಮತ್ತು ಚಿನ್ನದ ಇಟಿಎಫ್‌. ಒಡವೆ ಕೊಂಡರೆ ಇನ್ನು 3–4 ವರ್ಷಗಳಲ್ಲಿ ಮಗಳು ಈ ಒಡವೆ ಬದಲಾಯಿಸುವ ಸಾಧ್ಯತೆ ಇದೆ. ದಿನೇ ದಿನೇ ಫ್ಯಾಷನ್‌ ಬದಲಾಗುತ್ತಿರುತ್ತದೆ. ಈ ಮಾರ್ಗದಲ್ಲಿ ಬೇರೆ ಒಡವೆ ಕೊಳ್ಳುವಾಗ ಸವಕಳಿ ಹಾಗೂ ಮಾಡುವ ಕೂಲಿ ಸೇರಿ ತುಂಬಾ ನಷ್ಟವಾಗುವ ಸಾಧ್ಯತೆ ಹೆಚ್ಚು. ಬಂಗಾರದ ಬಾಂಡ್‌ ಅಥವಾ ಚಿನ್ನದ ಇಟಿಎಫ್‌ ನಲ್ಲಿ ಹೂಡಿ ಮದುವೆಗೆ ಮುನ್ನ ಮಾರಾಟ ಮಾಡಿ ಹಣ ಪಡೆದು ಒಡವೆ ಮಾಡಿಸಬಹುದು. ಬಂಗಾರದ ನಾಣ್ಯ ಕೊಂಡು ಬ್ಯಾಂಕ್‌ ಲಾಕರಿನಲ್ಲಿ ಇರಿಸಿ ಮದುವೆ ಸಮಯದಲ್ಲಿ ನಾಣ್ಯ  ಮುರಿಸಿ ಒಡವೆ ಮಾಡಿಸಬಹುದು. ನೀವು ತಿಳಿದಂತೆ ಬಂಗಾರದ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹಾಗೂ ನಿಮಗೆ ಬಂಗಾರದ ಅವಶ್ಯಕತೆ ಇರುವುದರಿಂದಲೂ ಈಗ ಬಂಗಾರ ಕೊಳ್ಳುವುದು ಸೂಕ್ತ. ಹೀಗೆ ನಾಣ್ಯ ಕೊಂಡಲ್ಲಿ ನಾಣ್ಯಗಳನ್ನು ಬ್ಯಾಂಕ್‌ ಲಾಕರಿನಲ್ಲಿಯೇ ಮದುವೆ ತನಕ ಇರಿಸಿ.

ಶಂಕರ್ ನಾಯ್ಕ್‌, ಬೆಂಗಳೂರು

ನಾನು ಮೂಲತಃ ಅಂಕೋಲದವನು. ಸದ್ಯ, ಐ.ಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದೇನೆ. ಸರಾಸರಿ ವೇತನ ₹ 1.20 ಲಕ್ಷದಲ್ಲಿ ಎಲ್ಲಾ ಕಡಿತದ ನಂತರ ₹ 1 ಲಕ್ಷ ಕೈಗೆ ಬರುತ್ತದೆ. ಬಾಡಿಗೆ ಮನೆಯಲ್ಲಿ ವಾಸವಿದ್ದು ತಿಂಗಳಿಗೆ ₹ 20 ಸಾವಿರ ಬಾಡಿಗೆಗೆ ಕೊಡುತ್ತೇನೆ. ನನಗೆ 6 ಹಾಗೂ 8 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ನಮ್ಮ, ಮಕ್ಕಳ ಭವಿಷ್ಯ ಹಾಗೂ ಆದಾಯ ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ. ನಿಮ್ಮ ಅಂಕಣವನ್ನು ಕಳೆದ ನಾಲ್ಕು ವರ್ಷಗಳಿಂದ ಓದುತ್ತಿದ್ದೇನೆ.

ಉತ್ತರ: ಬ್ಯಾಂಕ್‌ಗಳಲ್ಲಿ ಠೇವಣಿ ಮೇಲಿನ ಬಡ್ಡಿ ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ತಕ್ಷಣ ನಿಮ್ಮ ಇಬ್ಬರು ಗಂಡು ಮಕ್ಕಳ ಹೆಸರಿನಲ್ಲಿ ₹ 15 ಸಾವಿರ ಆರ್‌.ಡಿ 10 ವರ್ಷಗಳ ಅವಧಿಗೆ ಮಾಡಿ. 10 ವರ್ಷಗಳ ನಂತರ ಸಮೀಪದಲ್ಲಿ ₹ 25 ಲಕ್ಷ ಪಡೆಯುವಿರಿ. (ಓದುಗರಿಗೊಂದು ಕಿವಿಮಾತು. ಠೇವಣಿ ಮೇಲಿನ ಬಡ್ಡಿದರ ಮುಂದೆ ಕಡಿಮೆ ಆದರೂ, ಒಮ್ಮೆ ಮಾಡಿರುವ ಠೇವಣಿ ಅವಧಿಯಲ್ಲಿ ಪ್ರಾರಂಭದಲ್ಲಿ ನಿರ್ಧರಿಸಿದ ಬಡ್ಡಿದರ ಬ್ಯಾಂಕ್‌ಗಳು ಎಂದಿಗೂ ಕಡಿಮೆ ಮಾಡುವಂತಿಲ್ಲ) ಇದರಿಂದಾಗಿ ದೀರ್ಘಾವಧಿ ಆರ್‌.ಡಿ ಮಾಡಲು ಈಗ ಸಕಾಲ. ವಾರ್ಷಿಕವಾಗಿ   ಮಕ್ಕಳ ಮದುವೆಗಾಗಿ ತಲಾ 10 ಗ್ರಾಂ ಬಂಗಾರ ಕೊಳ್ಳಿರಿ. ಬೆಂಗಳೂರು ಆಸುಪಾಸಿನಲ್ಲಿ 30X40 ಅಳತೆ  ನಿವೇಶನ ಸಿಕ್ಕಿದರೆ ಖರೀದಿಸಿ. ಮುಂದೆ ಗೃಹ ಸಾಲ ಪಡೆದು ಮನೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಆದಾಯ ತೆರಿಗೆ ಉಳಿಸಲು ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ವಾರ್ಷಿಕ ಕನಿಷ್ಠ ₹ 50 ಸಾವಿರ ಎನ್‌ಪಿಎಸ್‌ನಲ್ಲಿ ಹೂಡಿರಿ. ಈ ಸವಲತ್ತಿಗೆ ಎಸ್‌ಬಿಐನಲ್ಲಿ ವಿಚಾರಿಸಿ. ನಿಮ್ಮ ಮಕ್ಕಳ ಸ್ಕೂಲ್‌ ಫೀ ಸೆಕ್ಷನ್‌ 80ಸಿ ಆಧಾರದ ಮೇಲೆ ಕನಿಷ್ಠ ₹ 1.50 ಲಕ್ಷ ವಿನಾಯಿತಿ ಇದೆ. ಇದೇ ವೇಳೆ ಪಿಪಿಎಫ್‌ ಖಾತೆ ಮಾಡಿ ಎಷ್ಟಾದರೂ ಜಮಾ ಮಾಡುತ್ತಾ ಬನ್ನಿ.  ಸೆಕ್ಷನ್‌ 80ಸಿ, 80ಸಿಸಿಡಿ (1ಬಿ) ಹಾಗೂ ಸೆಕ್ಷನ್‌ 16 ಎಲ್ಲಾ ಸೇರಿ ಗರಿಷ್ಠ ₹ 2.50 ಲಕ್ಷಗಳ ತನಕ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು