ಸೋಮವಾರ, ಮೇ 17, 2021
31 °C

ಹಣಕಾಸು ಪ್ರಶ್ನೋತ್ತರ

ಯು.ಪಿ.ಪುರಾಣಿಕ್‌ Updated:

ಅಕ್ಷರ ಗಾತ್ರ : | |

ಗೀತಾ, ಕಾರವಾರ

ನಾನು ಸರ್ಕಾರಿ ನೌಕರಿಯಿಂದ ನಿವೃತ್ತಳಾಗಿರುವೆ. ವಾರ್ಷಿಕ ಪಿಂಚಣಿ ₹4,47,428. ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ₹ 67,600, ಅಂಚೆ ಕಚೇರಿ ಸೀನಿಯರ್‌ ಸಿಟಿಜನ್ ಠೇವಣಿ ಮೇಲಿನ ಬಡ್ಡಿ ₹1,31,000. ನನಗೆ ಆದಾಯ ತೆರಿಗೆ ಬರುತ್ತದೆಯೇ ತಿಳಿಸಿ.

ಉತ್ತರ: ಪಿಂಚಣಿ, ಬ್ಯಾಂಕ್‌, ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ ಸೇರಿ ನಿಮ್ಮ ವಾರ್ಷಿಕ ಆದಾಯ ₹ 6,46,028 ಆಗುತ್ತದೆ. ಆದಾಯ ತೆರಿಗೆ ಕಾನೂನಿನಂತೆ ₹ 5 ಲಕ್ಷ ತನಕದ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ. ಅದರೆ, ನಿಮ್ಮ ವಾರ್ಷಿಕ ಒಟ್ಟು ಆದಾಯ ₹5 ಲಕ್ಷ ದಾಟಿರುವುದರಿಂದ ನೀವು ₹ 3 ಲಕ್ಷದಿಂದಲೇ ಆದಾಯ ತೆರಿಗೆ ಕೊಡಬೇಕಾಗುತ್ತದೆ. ₹ 3 ಲಕ್ಷದಿಂದ ₹ 5 ಲಕ್ಷದತನಕ ಶೇ 5ರಂತೆ ₹ 10 ಸಾವಿರ ಹಾಗೂ ₹ 5 ಲಕ್ಷ ದಾಟಿದ ಮೊತ್ತವಾದ ₹ 46,028ಕ್ಕೆ ಶೇ 20ರಂತೆ ₹ 19,206ರ ಮೇಲೆ ಎಜುಕೇಷನ್‌ ಸೆಸ್‌ ಶೇ 4ರಂತೆ ₹369 ಎಲ್ಲಾ ಸೇರಿ ಒಟ್ಟು ₹19,575 ತೆರಿಗೆ ಸಲ್ಲಿಸಬೇಕಾಗುತ್ತದೆ. ಇದೇ ವೇಳೆ ನೀವು ₹5 ಲಕ್ಷ ಆದಾಯಕ್ಕೆ ಮೀರಿದ ಮೊತ್ತ ₹ 46,028ನ್ನು (₹50,000) 5 ವರ್ಷಗಳ ಬ್ಯಾಂಕ್‌ ಠೇವಣಿ ಎನ್‌ಪಿಎಸ್‌ ಪಡೆದಲ್ಲಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯ್ತಿ ಪಡೆಯಬಹುದು. ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ ದಾಟುವುದರಿಂದ ಈ ವರ್ಷದ ಜುಲೈ 31ರ ಒಳಗೆ  ಐ.ಟಿ ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ. ಆದಾಯ ₹ 5 ಲಕ್ಷ ದಾಟಿದಲ್ಲಿ ಹಿರಿಯ ನಾಗರಿಕರಿಗೆ ₹ 3 ಲಕ್ಷದಿಂದಲೇ ಆದಾಯ ತೆರಿಗೆ ಕೊಡಬೇಕಾಗುತ್ತದೆ. 

ಕೃಷ್ಣಾರೆಡ್ಡಿ, ಬೆಂಗಳೂರು

ನಾನು ನಿವೃತ್ತ ಸರ್ಕಾರಿ ಅಧಿಕಾರಿ. ನನ್ನ ಇಬ್ಬರು ಗಂಡುಮಕ್ಕಳು ಎಂಜಿನಿಯರ್‌ ಹಾಗೂ ಮಗಳು ಎಂ.ಡಿ ಮಾಡಿದ್ದಾಳೆ. ಬಹಳಷ್ಟು ವರ್ಷಗಳಿಂದ ನಿಮ್ಮ ಅಂಕಣ ಓದುತ್ತಿದ್ದೇನೆ. ಮೂರೂ ಮಕ್ಕಳು ನೀವು ಕೊಡುವ ಸಲಹೆಯಂತೆ ದೀರ್ಘಾವಧಿ ಆರ್‌.ಡಿ, ಬಂಗಾರದ ನಾಣ್ಯಗಳಲ್ಲಿ ಬಹಳ ವರ್ಷಗಳಿಂದ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಇದರಿಂದ ನಮ್ಮ ಮಕ್ಕಳ ಬಾಳು ಬಂಗಾರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಷೇರು ಮಾರುಕಟ್ಟೆ ಬಹಳ ಕುಸಿದಿದ್ದು, ಮಕ್ಕಳು ಇಲ್ಲಿ ಹಣ ಹೂಡಬಹುದೇ ತಿಳಿಸಿ. ನನಗಾಗಲಿ, ನನ್ನ ಮಕ್ಕಳಿಗಾಗಲಿ ಈ ಹೂಡಿಕೆಯಲ್ಲಿ ಅನುಭವ ಇಲ್ಲ.

ಉತ್ತರ: ಆರ್‌.ಡಿ. ಹಾಗೂ ಚಿನ್ನದ ಹೂಡಿಕೆಗಳಲ್ಲಿ ಖಚಿತವಾದ ವರಮಾನ ಬಂದೇ ಬರುತ್ತದೆ. ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್‌ ಫಂಡ್‌ ಹೂಡಿಕೆಗಳಲ್ಲಿ ನಿಮಗಾಗಲಿ, ನಿಮ್ಮ ಮಕ್ಕಳಿಗಾಗಲಿ ಅನುಭವ ಇರದೇ ಇರುವುದು ಒಳಿತು  ಎಂದು ಭಾವಿಸಿರಿ. ಇಂತಹ ಹೂಡಿಕೆಗಳು ಹಾವು, ಏಣಿ ಆಟದಂತೆ. ನಷ್ಟ – ಲಾಭ ಏರಿಳಿತ ಕಾಣುತ್ತದೆ. ಕುಟುಂಬದ ನೆಮ್ಮದಿಗೆ ಭಂಗ ತರುತ್ತವೆ. ಜಾಗತಿಕ ಮಂದಗತಿ ಆರ್ಥಿಕತೆ, ತೈಲ ದರ ಕುಸಿತ,  ಪ್ರಕೃತಿ ವಿಕೋಪ  ಮೊದಲಾದ ಪ್ರತಿಕೂಲ ಪರಿಸ್ಥಿತಿಗಳು ‘ಜಿಡಿಪಿ’ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಷೇರು ಮಾರುಕಟ್ಟೆ ಪ್ರವೇಶಿಸುವ ಮುಂಚೆ ಯೋಚಿಸಿ ಮುನ್ನಡೆಯಿರಿ. ನಿಮ್ಮ ಮಕ್ಕಳು ಮಾಡುತ್ತಿರುವ ಸದ್ಯದ ಹೂಡಿಕೆ ಮುಂದುವರಿಸಲಿ. ಸಾಧ್ಯವಾದರೆ ನಿವೇಶನದ ಮೇಲೆ ಹೂಡಿಕೆ ಮಾಡಲು ತಿಳಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು