ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ: ಯಾವ ರೂಪದ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇದೆ?

ಪ್ರಮೋದ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ
Published 6 ಮಾರ್ಚ್ 2024, 4:17 IST
Last Updated 6 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ಪ್ರಶ್ನೆ: ಪ್ರಸ್ತುತ ನಾನು ಪಂಜಾಬ್ ನ್ಯಾಷನಲ್ ಬ್ಯಾಂಕಿನ 4,300 ಷೇರುಗಳನ್ನು ಹೊಂದಿದ್ದು, ಇದರಲ್ಲಿ ಸುಮಾರು 3,000 ಷೇರುಗಳನ್ನು ನನ್ನ ಮಗನಿಗೆ ವರ್ಗಾಯಿಸಬೇಕೆಂದಿದ್ದೇನೆ. ಈ ವರ್ಗಾವಣೆಗೆ ಸಂಬಂಧಿಸಿ ತೆರಿಗೆ ಲೆಕ್ಕ ಹಾಕುವಾಗ ನಾವು ಉಡುಗೊರೆಯಾಗಿ ವರ್ಗಾವಣೆ ಮಾಡಿದ ದಿನಾಂಕವನ್ನು ಪರಿಗಣಿಸಬೇಕೇ ಅಥವಾ ನಾನು ಷೇರು ಖರೀದಿ ಮಾಡಿದ ಮೂಲ ದಿನಾಂಕವನ್ನು ಪರಿಗಣಿಸಬೇಕೇ? ನಾನು ಖರೀದಿ ಮಾಡಿದ ದಿನಾಂಕ ಪರಿಗಣಿಸಿದರೆ ₹1 ಲಕ್ಷದ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಬಗ್ಗೆ ತಿಳಿಸಿ– ಎಚ್.ಕೆ.ಜಿ. ಶೆಟ್ಟಿ, ಊರು ತಿಳಿಸಿಲ್ಲ.

ಉತ್ತರ: ನಿಮ್ಮ ಬಳಿ ಇರುವ ಷೇರುಗಳಲ್ಲಿ ಒಂದಷ್ಟು ಷೇರುಗಳನ್ನು ಮಗನ ಹೆಸರಿಗೆ ವರ್ಗಾಯಿಸಿಸುವ ಸಂಬಂಧ, ಬರಬಹುದಾದ ತೆರಿಗೆಯ ಬಗ್ಗೆ ವಿಚಾರಿಸಿದ್ದೀರಿ. ಸಮೀಪದ ಬಂಧುಗಳ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಒಳಪಡುವ ವ್ಯಕ್ತಿಗಳಾದ ತಂದೆ- ತಾಯಿ, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಇತ್ಯಾದಿ ವ್ಯಕ್ತಿಗಳ ನಡುವಿನ ಆರ್ಥಿಕ ವ್ಯವಹಾರಕ್ಕೆ ಕೆಲವು ತೆರಿಗೆ ವಿನಾಯಿತಿಗಳಿವೆ. ಹೀಗಾಗಿ, ಅಂತಹ ಆರ್ಥಿಕ ವ್ಯವಹಾರ ‘ಉಡುಗೊರೆ’ಯ ರೂಪದಲ್ಲಿದ್ದರೆ, ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56(2)(ಎಕ್ಸ್)ನಲ್ಲಿ ಹೇಳಿರುವ ವಿವರಣೆಯಂತೆ ಅವುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಹೀಗಾಗಿ, ಉಡುಗೊರೆಯಾಗಿ ವರ್ಗಾಯಿಸುವ ಇಂತಹ ಷೇರುಗಳಿಗೆ ಸಂಬಂಧಿಕರೊಳಗೆ ವರ್ಗಾವಣೆಯಾದ ಸಂದರ್ಭದಲ್ಲಿ ತೆರಿಗೆ ಇರುವುದಿಲ್ಲ. ನಿಮ್ಮ ವಿಚಾರದಲ್ಲಿ, ನಿಮ್ಮ ಮಗ ತೆರಿಗೆ ಪಾವತಿಸಬೇಕಾದುದು ನೀವು ನೀಡಿರುವ ಷೇರುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಷ್ಟೇ.

ಆದರೆ, ಯಾವುದೇ ವರ್ಗಾವಣೆಗೊಂಡ ಷೇರುಗಳನ್ನು ನಂತರದ ಹಂತದಲ್ಲಿ ಮಾರಾಟ ಮಾಡುವಾಗ ಸಹಜವಾಗಿ ತೆರಿಗೆ ಇರುತ್ತದೆ. ಇದಕ್ಕೆ ಸಂಬಂಧಿಸಿ, ಖರೀದಿ ಮೌಲ್ಯವನ್ನು ಲೆಕ್ಕ ಹಾಕುವಾಗ ಮೂಲ ಷೇರುದಾರರು, ಅಂದರೆ ನೀವು ಪಾವತಿಸಿದ ಮೌಲ್ಯವನ್ನೇ ಖರೀದಿ ಮೊತ್ತವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ನೀವು ಖರೀದಿಸಿದ ದಿನಾಂಕವನ್ನೇ ಪರಿಗಣಿಸಿ ಹೂಡಿಕೆಯ ಸಮಯಾನುಸಾರ ದೀರ್ಘಾವಧಿ ಅಥವಾ ಅಲ್ಪಾವಧಿ ಹೂಡಿಕೆ ಎಂಬುದನ್ನು ನಿರ್ಧರಿಸಲಾಗುತ್ತದೆ.

ಈ ಬಗ್ಗೆ ಅಗತ್ಯವಿರುವ ವರ್ಗಾವಣೆ ದಾಖಲೆಯನ್ನು ಬ್ರೋಕರ್ ಮೂಲಕ ಪಡೆದು ಇಟ್ಟುಕೊಳ್ಳಿ ಹಾಗೂ ನೀವು ಗಿಫ್ಟ್‌ ಡೀಡ್ ಬರೆಯಿಸಿಟ್ಟುಕೊಳ್ಳಿ. ನಿಮ್ಮ ಡಿಮ್ಯಾಟ್ ಖಾತೆಯಿಂದ ಅವರ ಖಾತೆಗೆ ವರ್ಗಾಯಿಸುವ ವರ್ಗಾವಣೆ ಪತ್ರವನ್ನೂ ನಿಮ್ಮ ಬ್ರೋಕರ್‌ಗೆ ಸಹಿ ಮಾಡಿ ಕೊಡಿ.

ಪ್ರಶ್ನೆ: ನಮ್ಮದು ಕೂಡು ಕುಟುಂಬ. ನಾಲ್ವರು ಅಣ್ಣ–ತಮ್ಮಂದಿರು. ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ ಇದೆ. ಈಗ ಮನೆಯಲ್ಲಿ ಆಸ್ತಿ ಹಂಚಿಕೆ ಮಾಡಲಾಗಿದೆ. ಅದರ ಪ್ರಕಾರ ನಾಲ್ವರು ಸದಸ್ಯರಲ್ಲಿ ಮೂವರಿಗೆ ಆಸ್ತಿ ಹಂಚಿಕೆ ಆಗಿರುತ್ತದೆ. ಕಾರಣ ಇನ್ನೊಬ್ಬರು ದೈವಾಧೀನರಾಗಿದ್ದು, ಅವರಿಗೆ ಯಾವುದೇ ಆಸ್ತಿ ಬೇಡವೆಂದು ಹೇಳಿದ್ದರು. ಹಾಗಾಗಿ, ಅವರಿಗೆ ಆಸ್ತಿ ಹಂಚಿಕೆ ಮಾಡಿರುವುದಿಲ್ಲ. ಈಗ ನಾವು ಮೂವರು ಸಹೋದರರು ಅವರ ಮನೆಯವರಿಗೆ ಸ್ವಲ್ಪ ಹಣ ಕೊಡಲು ಸ್ವಯಂ ಪ್ರೇರಿತವಾಗಿ ಇಚ್ಚಿಸಿದ್ದೇವೆ. ಈಗ ಹಣವನ್ನು ಅವರಿಗೆ ಯಾವ ರೀತಿಯಲ್ಲಿ ಕೊಡಬಹುದು ತಿಳಿಸಿ. ಹಾಗೆಯೇ, ಆದಾಯ ತೆರಿಗೆ ವಿನಾಯಿತಿ ಸಿಗುವ ಬಗ್ಗೆಯೂ ತಿಳಿಸಿ– ಮಂಜು ಜಿ.ಬಿ., ಊರು ತಿಳಿಸಿಲ್ಲ.

ಉತ್ತರ: ಸಾಮಾನ್ಯವಾಗಿ ಮನೆಯ ಆಸ್ತಿ ಹಂಚಿಕೆಯಾದಾಗ ವಾಸ್ತವ ದೃಷ್ಟಿಯಿಂದ ಕೆಲವು ಸ್ವತ್ತುಗಳನ್ನು ಸಮಾನವಾಗಿ ಪಾಲು ಮಾಡಲು ಕಷ್ಟವಾಗಬಹುದು ಅಥವಾ ಆ ರೀತಿ ಹಂಚಿಕೆ ಮಾಡುವುದು ಆಸ್ತಿಯ, ವಸ್ತುಗಳ ಉಪಯುಕ್ತತೆಗೆ ಬಾಧ್ಯವಾಗುವ ಕಾರಣ ಸಾಧ್ಯವಾಗಲಾರದು. ಇನ್ನೂ ಕೆಲವೊಮ್ಮೆ ಎಲ್ಲಾ ಮಂದಿ ಪಿತ್ರಾರ್ಜಿತ ಸ್ವತ್ತುಗಳಲ್ಲಿ ಆಸಕ್ತಿ ಹೊಂದಿರದೆ ಇರಬಹುದು. ಇಂತಹ ಸಂದರ್ಭದಲ್ಲಿ ಮೂಲ ಪಾಲುದಾರರೊಳಗೆ ಆಂತರಿಕ ಒಡಂಬಡಿಕೆ ಮಾಡಿಕೊಂಡು ಅಂತಹ ಆಸ್ತಿಗೆ ಪ್ರಸ್ತುತ ಮೌಲ್ಯ ಕಟ್ಟಿ ಯಾರು ಆಸ್ತಿ ಪಾಲನ್ನು ಬಿಟ್ಟುಕೊಡುತ್ತಾರೋ ಅವರಿಗೆ ಹಣದ ರೂಪದಲ್ಲಿ ಪಾಲು ಸಂದಾಯ ಮಾಡುವ ಸಂದರ್ಭಗಳೂ ಇವೆ. ಇದಕ್ಕಾಗಿ ಯಾರು ತಮ್ಮ ಹಕ್ಕು ಬಿಟ್ಟು ಕೊಡಲು ಒಪ್ಪಿಕೊಳ್ಳುತ್ತಾರೋ ಅವರು ಪರಸ್ಪರ ಪಾಲುದಾರೊಳಗೆ ‘ಹಕ್ಕು ತ್ಯಾಗಪತ್ರ’ ಬರೆಸಿಕೊಳ್ಳುವ ಮೂಲಕ ದಾಖಲೆಗಳನ್ನು ಇರಿಸಿಕೊಳ್ಳಬೇಕು.

ಇದಕ್ಕೆ ಪ್ರತಿಯಾಗಿ ಹಕ್ಕನ್ನು ತ್ಯಾಗ ಮಾಡಿದ ವ್ಯಕ್ತಿ ಪಡೆಯುವ ಹಣದ ಮೊತ್ತ ಆಸ್ತಿಗೆ ಸಂಬಂಧಿಸಿದ್ದಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆಯಡಿ ಆಸ್ತಿ ವರ್ಗಾವಣೆಗೆ ಸಂಬಂಧಿಸಿ ಇರುವ ವರ್ಗಾವಣೆಗೆ ಸಂಬಂಧಿಸಿದ ಸೆಕ್ಷನ್ 2(47) ಅನ್ವಯ ಯಾವುದೇ ಆಸ್ತಿಯ ಹಕ್ಕನ್ನು ತ್ಯಾಗ ಮಾಡುವಾಗ ಅಂತಹ ಆಸ್ತಿ ಪರರ ಸ್ವಾಧೀನಕ್ಕೆ ಹೋಗುತ್ತದೆ ಹಾಗೂ ಇದು ‘ವರ್ಗಾವಣೆ’ಯ ಉಲ್ಲೇಖದಡಿ ಬರುತ್ತದೆ. ಈ ಸಂದರ್ಭದಲ್ಲಿ ಪಡೆಯುವ ಮೊತ್ತವನ್ನು ಸ್ವೀಕರಿಸಿದವರ ಹೆಸರಲ್ಲಿ ತೆರಿಗೆಗೆ ಒಳಪಡಿಸಲಾಗುತ್ತದೆ.

ನಿಮ್ಮ ವಿಚಾರದಲ್ಲಿ ಒಬ್ಬರು ಸಹೋದರರು ಪ್ರಸ್ತುತ ಇಲ್ಲದ ಕಾರಣ ಹಾಗೂ ಅವರು ಯಾವುದೇ ಆಸ್ತಿಯಲ್ಲಿ ಪಾಲು ಬೇಡವೆಂದು ಮೊದಲೇ ಹೇಳಿದ್ದರೂ, ಅವರ ಪಾಲಿನ ಆಸ್ತಿ ಅಥವಾ ಮೊತ್ತವನ್ನು ಮರಣಾ ನಂತರ ಮಾಡಲಾಗುತ್ತಿರುವ ಆಸ್ತಿ ಹಂಚಿಕೆಯಲ್ಲಿ, ಆಸ್ತಿಯ ಬದಲಾಗಿ ಅವರ ಹೆಂಡತಿ, ಮಕ್ಕಳಿಗೆ ಹಣದ ಮೂಲಕ ನೀವು ಕೊಡುತ್ತಿದ್ದೀರಿ. ನಿಮ್ಮ ಮಾಹಿತಿಯಂತೆ, ನಿಮ್ಮ ಸಹೋದರರು ಆಸ್ತಿಯಲ್ಲಿ ಪಾಲು ಬೇಡವೆಂದು ತಿಳಿಸಿರುವುದು ಮೌಖಿಕ ಮಾತಿನಂತಿದೆ. ಹೀಗಾಗಿ, ಆ ಸಂಬಂಧ ಅವರ ಪಾಲಿನ ಆಸ್ತಿಗಾಗಿ ಮುಂದಿನ ವಾರಸುದಾರರಿಂದ ಅಗತ್ಯವಿರುವ ಹಕ್ಕು ತ್ಯಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ದಾಖಲಿಸಿಟ್ಟುಕೊಳ್ಳಿ. ಇದಕ್ಕಾಗಿ ನೀವು ಅಗತ್ಯವಾಗಿ ಕಾನೂನು ಸಲಹೆಯನ್ನೂ ಪಡೆದುಕೊಳ್ಳಿ. ತೆರಿಗೆಗೆ ಸಂಬಂಧಿಸಿ, ಗ್ರಾಮೀಣ ಕೃಷಿ ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲ ಆಸ್ತಿಯೂ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಈ ಸಂಬಂಧ ಪೂರ್ಣ ತೆರಿಗೆ ಲೆಕ್ಕಾಚಾರಕ್ಕೆ ಅಗತ್ಯ ದಾಖಲೆಗಳೊಂದಿಗೆ ತೆರಿಗೆ ಸಲಹೆಯನ್ನು ವಿಸ್ತೃತವಾಗಿ ಪಡೆದುಕೊಳ್ಳಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.

ಇ–ಮೇಲ್‌:businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT